ರಾಜ್ಯದ ನೆಲ-ಜಲ ವಿಚಾರದಲ್ಲಿ ರಾಜೀ ಇಲ್ಲ; ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಖಂಡನೆ

794
Published on

ಬೆಳಗಾವಿ: ರಾಜ್ಯದ ಗಡಿಯ ವಿಚಾರದಲ್ಲಿ ಪದೇಪದೆ ಕೆಣಕುವ ಮಹಾರಾಷ್ಟ್ರಕ್ಕೆ ರಾಜ್ಯ ವಿಧಾನಸಭೆಯ ಮೂಲಕ ಖಡಕ್ ಸಂದೇಶ ರವಾನಿಸಿದ್ದು, ರಾಜ್ಯದ ನೆಲ-ಜಲದ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ವಿಧಾನಸಭೆಯಲ್ಲಿ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ನಿರ್ಣಯದಲ್ಲಿ ಮಹಾರಾಷ್ಟ್ರದ ಸಚಿವರು, ಸಂಸದರ ಹೇಳಿಕೆಗಳನ್ನು ಗಟ್ಟಿ ದನಿಯಲ್ಲಿ ಖಂಡಿಸಲಾಯಿತು. ರಾಜ್ಯದಲ್ಲಿ ನೆಲ-ಜಲದ ವಿಚಾರದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಇವೆ ಎಂಬುದನ್ನು ಸಾರಲಾಯಿತು. ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿದ ನಿರ್ಣಯವನ್ನು ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ನಿರ್ಣಯ ಏನಿದೆ?

ಭಾಷಾವಾರು ಪ್ರಾಂತ್ಯಗಳ ಸ್ಥಾಪನೆ ಮಾಡುವ ಸಲುವಾಗಿ ರಾಜ್ಯಗಳ ಮರು ವಿಂಗಡನೆ ಆಯೋಗ 1935ರಲ್ಲಿ ರಚನೆಯಾಗಿತ್ತು. ಈ ಆಯೋಗವು 1955ರಲ್ಲಿ ವರದಿ ಮಂಡಿಸಿತು. 1955ರಲ್ಲಿ ಎಲ್ಲ ರಾಜ್ಯಗಳಿಗೆ ಈ ವರದಿ ಕಳುಹಿಸಿಕೊಟ್ಟು ಅಭಿಪ್ರಾಯ ಪಡೆದು 1956ರಲ್ಲಿ ರಾಜ್ಯ ಮರುವಿಂಗಡನೆ ಕಾಯ್ದೆ ಜಾರಿಗೆ ಬಂತು. 1956ರ ನವೆಂಬರ್ 1 ರಂದು ಅಂದಿನ ಮೈಸೂರು ರಾಜ್ಯ ಉದಯ ವಾಯಿತು. ಮಹಾಜನ್ ಆಯೋಗ 1966ರ ಅಕ್ಟೋಬರ್​ನಲ್ಲಿ ಅಸ್ತಿತ್ವಕ್ಕೆ ಬಂತು. 1967ರಲ್ಲಿ ವರದಿ ನೀಡಿತು. ಮಹಾರಾಷ್ಟ್ರದ ಬೇಡಿಕೆ ಮೇರೆಗೆ ರಚನೆಯಾದಂತಹ ಮಹಾಜನ್ ಆಯೋಗದ ವರದಿಯನ್ನು ಮಹಾರಾಷ್ಟ್ರವೇ ತಿರಸ್ಕರಿಸಿತು. ಈಗಾಗಲೆ ಮಹಾಜನ್ ಆಯೋಗದ ವರದಿ ಮಂಡಿಸಿ 66 ವರ್ಷ ಕಳೆದಿವೆ. ಈ ಸುದೀರ್ಘ ವರ್ಷಗಳಲ್ಲಿ ಎರಡೂ ರಾಜ್ಯಗಳ ಜನರು ಅತ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದಾಗ್ಯೂ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂಕೋರ್ಟ್​​ನನಲ್ಲಿ ದಾವೆ ಹೂಡಿ ಅಂದಿನಿಂದಲೂ ಎರಡೂ ರಾಜ್ಯಗಳ ಜನರ ನಡುವಿನ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. 2004ರಿಂದ ಇಲ್ಲಿಯವರೆಗೂ ಸುಪ್ರೀಂಕೋರ್ಟ್ ನಲ್ಲಿ ಮಹಾರಾಷ್ಟ್ರದ ದಾವೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ ಸಂವಿಧಾನದ 3ನೇ ಪರಿಚ್ಛೇದದ ಪ್ರಕಾರ ಈ ಮರು ಪರಿಶೀಲನೆ ಮಾಡುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಇದರ ಬಗ್ಗೆ ರಾಜ್ಯ ಸರ್ಕಾರ ಗಡಿ ಮತ್ತು ನದಿಗಳ ರಕ್ಷಣಾ ಆಯೋಗ ರಚನೆ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ವಾದ ಮಾಡಲು ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ.

ಕರ್ನಾಟಕ ನೆಲ, ಜಲದ ಹಿತ ಕಾಪಾಡಲು ಮತ್ತು ಕಾನೂನಿನ ಹೋರಾಟದ ಸಮರ್ಥನೆ ಮಾಡಲು ಈ ಮೂಲಕ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ಇತ್ತೀಚಿಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಮಹಾರಾಷ್ಟ್ರ ಸಚಿವರು ಕಾನೂನು ಸುವ್ಯವಸ್ಥೆ ಸೂಕ್ಷ್ಮವಿದ್ದಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿ ಪ್ರಚೋದಿಸಲು ಯತ್ನಿಸುವುದು ಖಂಡನೀಯ. ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ನೀಡಿರುವ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘನೆ ಮಾಡಿದ್ದು ಎರಡೂ ರಾಜ್ಯಗಳ ಸಂಬಂಧಕ್ಕೆ ಧಕ್ಕೆ ತರುವಂತಾಗಿದೆ. ಇದನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸುತ್ತಾ, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ರಾಜ್ಯ ಸರ್ಕಾರ ತರುತ್ತದೆ. ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕರ್ನಾಟಕದ ಜನರ ಮತ್ತು ಸದಸ್ಯರೆಲ್ಲರ ಭಾವನೆ ಒಂದೇ ಆಗಿದ್ದು ಇದಕ್ಕೆ ಧಕ್ಕೆ ಆದಾಗ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂಬ ಸಂದೇಶ ರವಾನಿಸಿದೆ.

ಗಡಿ ಸಚಿವ ಸ್ಥಾನ ಸೃಷ್ಟಿ ಮಾಡಲು ಆಗ್ರಹ

ಗಡಿ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕವಾಗಿ ಅದಕ್ಕೊಂದು ಸಚಿವ ಸ್ಥಾನ ಸೃಷ್ಟಿ ಮಾಡಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನಿಷ್ಠ 50 ಕೋಟಿ ರೂ. ಅನುದಾನ ನೀಡಬೇಕು ಎಂದು ಶಾಸಕ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. ಗಡಿಗೊಬ್ಬ ಸಚಿವ ಇಲ್ಲದೆ ಇದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ಆ ಭಾಗದಲ್ಲಿ ಅಭಿವೃದ್ಧಿ ಮಾಡಲು, ಜನರ ವಿಶ್ವಾಸ ಗಳಿಸಲು ಸಾಧ್ಯವಾಗುವುದಿಲ್ಲ. ಗಡಿ ಸಚಿವ ಸ್ಥಾನ ಸೃಷ್ಟಿಯಾಗುವ ತನಕ ಕಾನೂನು ಸಚಿವರೇ ಈ ಜವಾಬ್ದಾರಿ ನಿಭಾಯಿಸಬೇಕು ಎಂದು ಒತ್ತಾಯಿಸಿದರು.

ಗಡಿ ಪ್ರದೇಶ ಅಭಿವೃದ್ಧಿ ವಿಧೇಯಕ ಅಂಗೀಕಾರ

ಗಡಿ ಭಾಗದ 52 ತಾಲೂಕುಗಳಲ್ಲಿ ಆಡಳಿತಾತ್ಮಕ ಕಾರಣಕ್ಕೆ ಹಳ್ಳಿಗಳನ್ನು ಬೇರೆ ತಾಲೂಕುಗಳಿಗೆ ತೀರ್ಮಾನ ತೆಗೆದುಕೊಳ್ಳುವ ಮತ್ತು ಮಾರ್ಪಾಡು ಮಾಡುವ ಅಂಶಗಳನ್ನೊಳಗೊಂಡ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡನೆ ಮಾಡಿದರು. ಶಾಸಕರಾದ ಸೋಮಲಿಂಗಪ್ಪ, ನಾಡಗೌಡ, ಲಿಂಗೇಶ್ ಮತ್ತಿತರರು ಮಾತನಾಡಿದರು.

ಮಹಾರಾಷ್ಟ್ರದ ಸಂಸದರು, ಸಚಿವರು ಅನಾಗರಿಕ ಭಾಷೆಯಲ್ಲಿ ಮಾತನಾಡಿದ್ದಾರೆ. ನಾವು ನಾಗರಿಕ ಭಾಷೆಯಲ್ಲಿಯೇ ಅವರಿಗೆ ಉತ್ತರ ನೀಡೋಣ. ಅವರಿಗೆ ಸಂಸದೀಯ ನಡವಳಿಕೆ, ಸಂಸದೀಯ ಭಾಷೆಯೇ ತಿಳಿದಿಲ್ಲ. ಮಹಾಜನ್ ವರದಿಯನ್ನು ನಾವು ಸ್ವಾಗತಿಸಿದ್ದೇವೆ.

| ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ

ಮಹಾಜನ್ ವರದಿಯೇ ಅಂತಿಮ ಎಂಬುದನ್ನು ನಾವು ಈಗಾಗಲೆ ಅಂಗೀಕರಿಸಿದ್ದೇವೆ. ರಾಜ್ಯದ ಒಂದು ಇಂಚು ಜಾಗ ನೀಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ರಾಜಕೀಯ ಇಂದೇ ಕೊನೆಯಾಗಲಿ.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net