

| ಮೃತ್ಯುಂಜಯ ಕಪಗಲ್ ಬೆಂಗಳೂರು
ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ (ಇಡಬ್ಲ್ಯುಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲು ಕಲ್ಪಿಸಲು ಸುಪ್ರೀಂ ಕೋರ್ಟ್ನಿಂದ ಅನುಮೋದನೆ ದೊರೆತ ಬೆನ್ನಲ್ಲೇ, ರಾಜ್ಯ ಸರ್ಕಾರದ ಮುಂದಿನ ನಡೆಯತ್ತ ಮೇಲ್ವರ್ಗದ ಬಡವರ ಚಿತ್ತ ನೆಟ್ಟಿದೆ. ಕೇಂದ್ರ ಸರ್ಕಾರದ ಇಡಬ್ಲ್ಯುಎಸ್ ಮೀಸಲಾತಿ ರಾಜ್ಯದಲ್ಲೂ ಜಾರಿಗೆ ತರಲು ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಆದರೆ, ಶೇ.10 ಮೀಸಲು ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಅನುಷ್ಠಾನ ತಡೆಹಿಡಿಯಲಾಗಿತ್ತು.
ಗರಿಗೆದರಿದ ನಿರೀಕ್ಷೆ: ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಕಾರಣ ರಾಜ್ಯದ ಮೇಲ್ವರ್ಗದ ಬಡ ವರ್ಗಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಸಂವಿಧಾನದ 15ನೇ ವಿಧಿಗೆ ಇರುವ ಉಪಬಂಧಗಳಿಗೆ ಆರನೇ ಉಪಬಂಧವನ್ನು ಸೇರಿಸುವ ಮೂಲಕ ಸಂವಿಧಾನಕ್ಕೆ ಕೇಂದ್ರ ಸರ್ಕಾರ 103ನೇ ತಿದ್ದುಪಡಿ ಮಾಡಿದ್ದು, ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿ ಜಾರಿಗೊಳಿಸಿವೆ. ಪರಿಚ್ಛೇದ 15ರ ಆರನೇ ಖಂಡದ ಪ್ರಕಾರ ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣ, ಉದ್ಯೋಗದಲ್ಲಿ ಶೇ.10ರಷ್ಟು ಮೀಸಲು ಸೌಲಭ್ಯ ಪಡೆಯುವುದಕ್ಕೆ ಅರ್ಹತೆ ಕಲ್ಪಿಸುವ ವಿಶೇಷ ಕ್ರಮ ಇದಾಗಿದೆ. ಕಾಯ್ದೆ ಜತೆಗೆ ಕರಡು ನಿಯಮಗಳು ಮತ್ತು ಮಾರ್ಗಸೂಚಿಯನ್ನು ಕೇಂದ್ರ ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ, ಹುದ್ದೆಗಳಲ್ಲಿ ಮೀಸಲು ಸೌಲಭ್ಯ ಬಡವರಿಗೆ ದೊರೆಯುವಂತಾಗಿದೆ.
ಹೆಚ್ಚಿದ ಆಂತರಿಕ ಒತ್ತಡ: ಮುಂದಿನ ಚುನಾವಣೆ ದೃಷ್ಟಿಯಿಂದ ಇಡಬ್ಲ್ಯುಎಸ್ ಮೀಸಲು ತ್ವರಿತವಾಗಿ ಜಾರಿಗೊಳಿಸಲು ಸರ್ಕಾರದ ಮೇಲೆ ಬಿಜೆಪಿ ಆಂತರಿಕವಾಗಿ ಒತ್ತಡ ಹೆಚ್ಚಿಸಿದೆ. ಸಚಿವ ಸಂಪುಟ ಸಭೆ ಅನುಮೋದನೆ ನೀಡಿಯಾಗಿದ್ದು, ಗೆಜೆಟ್ನಲ್ಲಿ ಪ್ರಕಟಿಸಬೇಕು. ಇಷ್ಟಾದರೆ ಸಾಲದು ಪೂರಕವಾಗಿ ಕರಡು ನಿಯಮ ಮತ್ತು ಮಾರ್ಗಸೂಚಿಯನ್ನು ಹೊರಡಿಸಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಸಲಹೆ ನೀಡಿದೆ. ಕೇಂದ್ರದ ಕರಡು ನಿಯಮ ಮತ್ತು ಮಾರ್ಗಸೂಚಿ ಯಥಾವತ್ ಬಳಸಿಕೊಂಡು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂಬ ಸಂದೇಶವನ್ನೂ ರವಾನಿಸಿದೆ. ಡಬಲ್ ಇಂಜಿನ್ ಸರ್ಕಾರದ ಪ್ರಯೋಜನವು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಲಭಿಸಲಿದೆ ಎನ್ನುವುದು ಬಿಜೆಪಿ ಚಿಂತಕರ ಚಾವಡಿ ಲೆಕ್ಕಾಚಾರ. ಇಡಬ್ಲ್ಯುಎಸ್ ಮೀಸಲು ಫಲಾನುಭವಿ ಸಮುದಾಯಗಳಲ್ಲಿ ಬಹುಪಾಲು ಪಕ್ಷದ ಹಳೆಯ ವೋಟ್ ಬ್ಯಾಂಕ್ ಆಗಿದ್ದು, 2023ರ ವಿಧಾನಸಭೆ ಚುನಾವಣೆಗೆ ವರದಾನವಾಗಲಿದೆ ಎಂದು ಮೂಲಗಳು ವಿಶ್ಲೇಷಿಸಿವೆ.
ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ಸುಪ್ರೀಂ ಕೋರ್ಟ್ನ ತೀರ್ಪನ್ನು ನಾನು ಓದಿಲ್ಲ. ಆದರೆ, ಸಂವಿಧಾನದ 14, 15ರ ವಿಧಿ ಪ್ರಕಾರ ಅದಕ್ಕೆ ಅವಕಾಶವಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ಮುಖ್ಯಮಂತ್ರಿ ಸ್ಪಂದನೆ: ಪರಿಶಿಷ್ಟ ಜಾತಿ, ಪಂಗಡಗಳ ಮೀಸಲು ಪ್ರಮಾಣ ಒಟ್ಟು ಶೇ.6ರಷ್ಟು ಹೆಚ್ಚಿಸಿರುವ ಬಳಿಕ ಇಡಬ್ಲ್ಯುಎಸ್ ಮೀಸಲು ಕುರಿತು ಒಂದು ಸುತ್ತಿನ ಆಂತರಿಕ ಸಭೆ ನಡೆದಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್ಸಿ, ಎಸ್ಟಿ ಮೀಸಲು ಹೆಚ್ಚಳದ ನಿರ್ಧಾರಕ್ಕೆ ಮುನ್ನ ಆ ಸಮುದಾಯಗಳ ಪ್ರಮುಖರು, ತಜ್ಞರು ಹಾಗೂ ಉನ್ನತಾಧಿಕಾರಿಗಳ ಜತೆಗೆ ರ್ಚಚಿಸಲಾಗಿದೆ. ಇದೇ ಮಾದರಿಯನ್ನು ಇಡಬ್ಲ್ಯುಎಸ್ ಮೀಸಲು ವಿಚಾರಕ್ಕೂ ಅನ್ವಯಿಸುವ ಚಿಂತನೆಯಿದ್ದು, ನ.11ರ ಪ್ರಧಾನಿ ಮೋದಿ ಕಾರ್ಯಕ್ರಮದ ನಂತರ ಸೂಕ್ತ ದಿನಾಂಕ ನಿಗದಿ ಪಡಿಸುವೆ ಎಂದೂ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಸಿಗೆ ಶೇ.15 ರಿಂದ 17, ಎಸ್ಟಿಗೆ ಶೇ.3ರಿಂದ 7ಕ್ಕೆ ಏರಿಸಲಾಗಿದೆ. ಸಾಮಾನ್ಯ ವರ್ಗಗಳಿಗೆ ದಕ್ಕಬೇಕಾದ ಮೀಸಲು ಪ್ರಮಾಣದಲ್ಲಿ ಶೇ.6ರಷ್ಟು ಶೋಷಿತ ಸಮುದಾಯಗಳಿಗೆ ಹಂಚಿಕೆಯಾಗಿದೆ. ತಳಸ್ತರದ ಸಮುದಾಯಗಳನ್ನು ಮೇಲೆತ್ತುವ ಪ್ರಯತ್ನ ಸ್ವಾಗತಾರ್ಹ. ಅದೇ ಕಾಲಕ್ಕೆ ಮೇಲ್ವರ್ಗಗಳ ಆರ್ಥಿಕ ದುರ್ಬಲರಿಗೆ ಶೇ.10 ಮೀಸಲು ಸೌಲಭ್ಯ ಕಲ್ಪಿಸಲು ಕಾಳಜಿ ವಹಿಸಬೇಕು ಎಂದು ಸಭೆ ಸಲಹೆ ನೀಡಿತು ಎಂದು ಮೂಲಗಳು ಹೇಳಿವೆ.
ಪಡೆದುಕೊಳ್ಳುವುದು ಹೇಗೆ?: ಪ್ರಸ್ತುತ ಈ ಮೀಸಲು ಸೌಲಭ್ಯ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗಾವಕಾಶಗಳಲ್ಲಿ ಜಾರಿಯಲ್ಲಿದೆ. ಇದನ್ನು ಪಡೆದುಕೊಳ್ಳಲು ತಹಸೀಲ್ದಾರ ಹಾಗೂ ಇತರ ಸಂಬಂಧಿತ ಪ್ರಾಧಿಕಾರ ಗಳಿಂದ ಆದಾಯ, ಆಸ್ತಿ ಪ್ರಮಾಣಪತ್ರವನ್ನು ಪಡೆದುಕೊಂಡು ಸಲ್ಲಿಸಬೇಕಾಗುತ್ತದೆ. ಬೇರೆ ಮೀಸಲಿಗೆ ಇರುವಂತೆ ವಯೋಮಿತಿ ಹಾಗೂ ಇತರ ಅರ್ಹತೆಗಳ ವಿನಾಯ್ತಿಗೆ ಈ ಮೀಸಲಿನಲ್ಲಿ ಸದ್ಯಕ್ಕೆ ಅವಕಾಶವಿಲ್ಲ.