

| ಮೃತ್ಯುಂಜಯ ಕಪಗಲ್ ಬೆಂಗಳೂರು
ರಾಜ್ಯದ ಆರ್ಥಿಕತೆ ಬೇಗ ಸುಧಾರಿಸಿದೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್ವರೆಗೆ ಕರೊನಾ ಭೀತಿಯಿದ್ದರೂ ಬಜೆಟ್ನ ಗುರಿಮೀರಿ 13 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಆರ್ಥಿಕ ಚೇತರಿಕೆ ವೇಗ ಈ ವರ್ಷವೂ ಮುಂದುವರಿದು, ಜಿಎಸ್ಟಿ ಸಂಗ್ರಹದಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದಿದೆ. ಆರ್ಥಿಕ ಸದೃಢತೆ ವೃದ್ಧಿಗೆ ಚಿಂತನೆ, ತಯಾರಿಕಾ ವಲಯದ ಸಾಮರ್ಥ್ಯ ಸಮರ್ಪಕ ಬಳಸಿಕೊಂಡು, ರಾಜ್ಯದ ಆರ್ಥಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ತರುವುದು ಮುಖ್ಯ ಉದ್ದೇಶ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನ.2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಹೂಡಿಕೆದಾರರ ಸಮಾವೇಶ - 2022 ಹಿನ್ನೆಲೆಯಲ್ಲಿ ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಸಮಾವೇಶ ಕುರಿತಂತೆ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.
ಹಸಿರು ಇಂಧನ, ತಯಾರಿಕೆ, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ನವೋದ್ಯಮ ಸೇರಿ ಎಲ್ಲ ಕ್ಷೇತ್ರಗಳಿಗೆ ಬಂಡವಾಳ ಹರಿದು ಬರಲಿದೆ. ಐದು ಲಕ್ಷ ಕೋಟಿ ರೂ. ಬಂಡವಾಳ ಬರಲಿರುವುದು ಒಂದು ಭಾಗವಾದರೆ, ಎಲ್ಲ ರಂಗಗಳು ಮತ್ತು ಬೆಂಗಳೂರಿನಾಚೆ ಬೇರೆ ಬೇರೆ ಪ್ರದೇಶಕ್ಕೆ ಹೂಡಿಕೆಯಾಗುತ್ತಿದೆ. ಇದು, ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪೂರಕ.
ಹಿಂದಿನ ಪರಸ್ಪರ ಒಡಂಬಡಿಕೆಗಳಲ್ಲಿ ಶೇ.30ರ ಆಸುಪಾಸು ಕಾರ್ಯಗತವಾಗಿವೆ. ಕಾರಣಗಳೇನೆ ಇರಲಿ, ಆ ವಿಚಾರಕ್ಕೆ ಹೋಗುವುದಿಲ್ಲ. ಈಗಿನ ಸಮಾವೇಶದ ನಿರೀಕ್ಷೆ ಪೈಕಿ 2.80 ಲಕ್ಷ ಕೋಟಿ ರೂ.ಗಳಿಗೆ ಎಂಒಯು ಆಗಿದೆ, ಪ್ರಸ್ತಾವಿತ ಯೋಜನೆಗಳಿಗೆ ರಾಜ್ಯಮಟ್ಟದ ಸಮಿತಿ ಅನುಮೋದನೆ ನೀಡಿದೆ. ಶೇ.50 ಪರಿವರ್ತನೆ ಪ್ರಾರಂಭವಾಗಿದ್ದು, ಉಳಿದ ಶೇ.50 ಅನ್ನು ಮುಂದಿನ ಎರಡು ತಿಂಗಳಲ್ಲಿ ಕಾರ್ಯಗತಗೊಳಿಸುವ ಕಾಲಮಿತಿ ವಿಧಿಸಲಾಗಿದೆ. ಗಂಭೀರ ವಾಣಿಜ್ಯೋದ್ಯಮಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ.
ದೇಶದ ಅರ್ಥಿಕತೆಗೆ ಕೊಡುಗೆ ಕೊಡುವಂತಹ ನಾಲ್ಕೈದು ರಾಜ್ಯಗಳಲ್ಲಿ ಕರ್ನಾಟಕ ಒಂದು. ಹೀಗಾಗಿ ಕರ್ನಾಟಕ ಬೆಳೆದರೇನೆ ದೇಶದ ಆರ್ಥಿಕತೆ ಬೆಳೆಯಲು ಸಾಧ್ಯವಿದ್ದು, ಇನ್ವೆಸ್ಟ್ ಕರ್ನಾಟಕ ಯಶಸ್ವಿಯಾದರೆ ದುಪ್ಪಟ್ಟು ಬೆಳವಣಿಗೆಗೆ ಬುನಾದಿಯಾಗಲಿದೆ. ಅಷ್ಟೇ ಅಲ್ಲ, ಮುಂದಿನ ಐದು ವರ್ಷಗಳ ಔದ್ಯೋಗಿಕ ಕ್ರಾಂತಿಗೆ ಈ ಸಮಾವೇಶ ದಿಕ್ಸೂಚಿಯಾಗುವುದು ನಿಶ್ಚಿತ.
ಬೇರೆ ರಾಜ್ಯಗಳ ಆರೋಗ್ಯ ಪೈಪೋಟಿ ಸ್ವಾಗತಾರ್ಹ. ಆದರೆ, ನಮ್ಮ ರಾಜ್ಯದ ಸ್ಪರ್ಧೆಯ ಲಕ್ಷ್ಯ ಅಂತಾರಾಷ್ಟ್ರೀಮಟ್ಟದ್ದಾಗಿದೆ. ಸಾಫ್ಟ್ವೇರ್, ನವೀಕರಿಸಬಹುದಾದ ಇಂಧನ, ನವೋದ್ಯಮ, ಯುನಿಕಾರ್ನ್, ಡೆಕಾಕಾರ್ನ್ನಲ್ಲಿ ರಾಜ್ಯ ಮುಂದಿದೆ. ಬೇರೆ ರಾಜ್ಯಗಳು ಬೆಳೆದರೂ ನಮಗೇನೂ ಆತಂಕವಿಲ್ಲ. ವಿಶ್ವದ ಔದ್ಯಮಿಕ ನಕ್ಷೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕಷ್ಟೇ.
ಅತಿ ಹೆಚ್ಚು ಉದ್ಯೋಗ ಕೊಡುವ, ಉದಾಹರಣೆಗೆ ದಿನಬಳಕೆ ವಸ್ತುಗಳ ಉತ್ಪಾದನಾ ಕ್ಲಸ್ಟರ್ (ಎಫ್ಎಂಸಿಜಿ) ಜಮೀನು, ಸಹಾಯಧನ, ವಿದ್ಯುತ್ ಜತೆಗೆ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್ಐ)ಗಳನ್ನು ನೀಡುತ್ತಿದ್ದು, ಎಫ್ಎಂಸಿಜಿಯಿಂದ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಇಷ್ಟು ವರ್ಷ ನಾವು ನಮ್ಮ ರಾಜ್ಯ, ದೇಶಕ್ಕೆ ಬೇಕಾಗಿದ್ದನ್ನು ಉತ್ಪಾದನೆ/ ತಯಾರಿಸಿದ್ದೇವೆ. ಜಾಗತಿಕ ಆರ್ಥಿಕ ಚಿತ್ರಣ ಬದಲಾಗುತ್ತಿದ್ದು, ವಿವಿಧ ದೇಶಗಳು ಭಾರತೆದೆಡೆ ನೋಡುತ್ತಿವೆ. ಜಾಗತಿಕ ಅವಶ್ಯಕತೆಗಳನ್ನು ಪೂರೈಸುವ ಎಲ್ಲ ಕ್ರಿಯಾಶೀಲ ಚಟುವಟಿಕೆ ನಿರ್ವಹಿಸುವುದೇ ಬಿಲ್ಡ್ ಫಾರ್ ದ ವರ್ಲ್ಡ್. ಈ ಕಾರಣಕ್ಕೆ ಮಹತ್ವಾಕಾಂಕ್ಷೆಯ ಸ್ಲೋಗನ್ ಇರಿಸಿದ್ದೇವೆ.
ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯೇ ಜಿಮ್ ಪ್ರಮುಖ ಗುರಿಗಳಾಗಿವೆ. ಹೆಚ್ಚು ಉದ್ಯೋಗ ಕೊಟ್ಟಷ್ಟು ಹೆಚ್ಚು ಸವಲತ್ತು ನೀಡುವ ನೀತಿಯಿದೆ. ಜತೆಗೆ ಹೆಚ್ಚು ಉದ್ಯೋಗ ನೀಡುವ ಜವಳಿ, ಸಿದ್ಧಉಡುಪು, ಐಟಿ-ಬಿಟಿ, ಆಟೋಮೊಬೈಲ್, ತಯಾರಿಕೆ, ದಿನ ಬಳಕೆ ವಸ್ತುಗಳ ಉತ್ಪಾದನೆ ಮುಂತಾದ ವಲಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಜಿಮ್ ಮೂಲಕ ನಾಲ್ಕೈದು ಲಕ್ಷ ಉದ್ಯೋಗ ಸೃಜನೆ ನಿರೀಕ್ಷೆಯಿದ್ದು, ಕೆಳಹಂತದ ದುಡಿಯುವ ಜನರೇ ಆರ್ಥಿಕತೆ ಬೆನ್ನೆಲುಬು.