

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ನಿಗದಿಯಾಗಿರುವಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಸಚಿವ ಸಂಪುಟದಲ್ಲಿ ಮೀಸಲಾತಿ ಬಗ್ಗೆ ಮಾಡಿರುವ ತೀರ್ಮಾನಗಳ ಬಗ್ಗೆ ಸ್ಥೂಲವಾದ ವಿವರಣೆಗಳನ್ನು ಇಂದು ಮಧ್ಯಾಹ್ನದೊಳಗೆ ಬಿಡುಗಡೆ ಮಾಡಲಾಗುವುದು. ಕೇಂದ್ರ ಸಚಿವರ ಪ್ರವಾಸದ ನಂತರ ಈ ನಿರ್ಣಯಗಳನ್ನು ಹಂಚಿಕೊಳ್ಳಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಹಾಗೂ ಅದರ ಅನುಷ್ಠಾನದ ರೀತಿಯನ್ನು ವಿವರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು: ಗೋವಾ ಮುಖ್ಯಮಂತ್ರಿಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ದೇಶ ಕಾನೂನಿನಿಂದ ನಡೆಯುತ್ತಿದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ ಇದೆ. ಸುಪ್ರೀಂಕೋರ್ಟ್ ಇದೆ, ನ್ಯಾಯ ಮಂಡಳಿಯಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿ ನಿರ್ಧಾರವನ್ನು ತಿಳಿಸಿದೆ. ನರೇಂದ್ರ ಮೋದಿಯವರ ಸರ್ಕಾರ 2018ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಈಗ ಡಿಪಿಆರ್ ಅನುಮೋದಿಸಿದ್ದಾರೆ. ಇದೆಲ್ಲವೂ ಕಾನೂನು ಬದ್ಧವಾಗಿದೆ. ಕರ್ನಾಟಕ ಏನೇ ಮಾಡಿದರೂ ಕಾನೂನು ಬದ್ಧವಾಗಿ ಮಾಡುತ್ತೇವೆ. ಡಿಪಿಆರ್ ಅನುಮೋದನೆಯ ಮೂಲಕ ಮುಂದಿನ ಕೆಲಸಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಕಾನೂನು ಬದ್ಧವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ನ್ಯಾಯಮಂಡಲಿಯು ನಮ್ಮ ಹಾಗೂ ಗೋವಾ ಬೇಡಿಕೆಯನ್ನು ಆಲಿಸಿದೆ. ಯಾರಿಗೂ ಧಕ್ಕೆಯಾಗದಂತೆ ನ್ಯಾಯಮಂಡಲಿ ತೀರ್ಪು ನೀಡಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, ಪ್ರಧಾನಿ ಮೋದಿಯವರು ಹಾಗೂ ಪೂಜ್ಯ ತಾಯಿ ಹೀರಾಬೆನ್ ಅವರದ್ದು ಆದರ್ಶಮಯವಾದ ತಾಯಿ-ಮಗನ ಸಂಬಂಧವಾಗಿತ್ತು. ಹೀರಾಬೆನ್ ಅವರ ನಿಧನ ನಮಗೆಲ್ಲರಿಗೂ ದುಖಃದ ಸಂಗತಿಯಾಗಿದೆ. ಪ್ರಧಾನಿ ಮೋದಿಯವರು ತೋರಿಸಿರುವ ಗೌರವ, ಪ್ರೀತಿ ಅನನ್ಯವಾದುದು. ಹೀರಾಬೆನ್ ಅವರು ಮಗನಿಗೆ ತೋರಿಸಿರುವ ಪ್ರೀತಿ ವಾತ್ಸಲ್ಯವನ್ನು ನಾವೆಲ್ಲ ನೋಡಿದ್ದೇವೆ. ತಾಯಿ ಬಹಳ ಸರಳ, ಆದರೆ ಅಷ್ಟೇ ವಿಶೇಷ ಎಂದು ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಇಡೀ ದೇಶಕ್ಕೆ ಆದರ್ಶಮಯವಾದ ತಾಯಿ ಮತ್ತು ಮಗನ ಸಂಬಂಧವಾಗಿತ್ತು. ಆ ತಾಯಿ ಎಂದೂ ಕೂಡ ಮಗ ಯಾವುದೇ ಹುದ್ದೆಯಲ್ಲಿದ್ದರೂ, ಮಗನಾಗಿಯೇ ನೋಡಿದ್ದಾರೆಯೇ ಹೊರತು, ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ನೋಡಿರಲಿಲ್ಲ. ಇದು ಆ ತಾಯಿಯ ತಾಯ್ತನ ತೋರಿಸುತ್ತದೆ. ಅವರು ತನ್ನ ಕರ್ತವ್ಯವನ್ನು ಮಾಡಿ ನರೇಂದ್ರ ಮೋದಿಯವರಿಗೆ ಆದರ್ಶ, ತತ್ವನಿಷ್ಠೆ, ದೇಶಭಕ್ತಿಯನ್ನು ತುಂಬಿದ್ದಾರೆ. ಅವೆಲ್ಲ ಗುಣಗಳು ಮೋದಿಯವರಲ್ಲಿ ನೋಡುತ್ತಿದ್ದೇವೆ ಎಂದರು.