ಬಿಎಸ್​ವೈ ಹಾದಿಯಲ್ಲಿ ಬೊಮ್ಮಾಯಿ: ಡಿಸಿ ನಡೆ-ಹಳ್ಳಿ ಕಡೆಗೆ ಮರುಚಾಲನೆ; ಜನ, ಕಾರ್ಯಕರ್ತರ ವಿಶ್ವಾಸ ಗಳಿಸುವ ಲೆಕ್ಕಾಚಾರ

Bommai
Published on

ಬೆಂಗಳೂರು: ಜನ ಮೆಚ್ಚಿದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಲು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದು, ಹಳ್ಳಿಗರಿಗೆ ಹತ್ತಿರವಾಗುವ ಜತೆಗೆ ವಿಶ್ವಾಸ ಗಳಿಸಲೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ.

ಇದಕ್ಕಾಗಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮವನ್ನು ಆಯ್ದುಕೊಂಡಿದ್ದು, ಅಪ್ಪಟ ಹಳ್ಳಿ ಸೊಗಡಿನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮುಂದಿನ ವಾರ ದಿನಾಂಕ ನಿಗದಿಯಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಅಂದು ಬೆಳಗ್ಗೆಯೇ ಗ್ರಾಮದಲ್ಲಿ ಹಾಜರಾಗಲಿದ್ದಾರೆ. ಸಚಿವ-ಶಾಸಕರೊಂದಿಗೆ ಮಧ್ಯಾಹ್ನ ಗ್ರಾಮಕ್ಕೆ ತೆರಳುವ ಬೊಮ್ಮಾಯಿ ರಾತ್ರಿ 9ರವರೆಗೆ ಗ್ರಾಮಸ್ಥರ ಜತೆಗಿರಲಿದ್ದಾರೆ. ನಂತರ ಪೂರ್ವ ನಿಗದಿಯಂತೆ ಅಧಿಕಾರಿಗಳ ವಾಸ್ತವ್ಯ ಮುಂದುವರಿಯಲಿದೆ. ಸಣ್ಣಪುಟ್ಟ ಕೆಲಸಗಳಿಗೆ ಹಳ್ಳಿಗರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಬಳಿಗೆ ಆಡಳಿತ ಕೊಂಡೊಯ್ಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕರೊನಾ ಅಬ್ಬರದಿಂದಾಗಿ ಸ್ಥಗಿತವಾಗಿತ್ತು.

ಜನಮನ ಸೆಳೆದಿದ್ದ ಕಾರ್ಯಕ್ರಮ: ಬಿ.ಎಸ್.ಯಡಿಯೂರಪ್ಪ 2008ರಲ್ಲಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಾಗ ಸಾವಯವ ಕೃಷಿಗೆ ಉತ್ತೇಜಿಸಲೆಂದು ಸಾವಯವ ಗ್ರಾಮ ಭೇಟಿ, ಇಡೀ ದಿನ ಗ್ರಾಮಸ್ಥರೊಂದಿಗೆ ಕಳೆಯುವ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದ್ದರು. ಪ್ರತಿ ತಿಂಗಳು ಒಂದು ಶನಿವಾರ ನಡೆಯುತ್ತಿದ್ದ ಈ ಕಾರ್ಯಕ್ರಮವೂ ಜನರ ಮನಸೂರೆಗೊಂಡಿತ್ತು. ಬಿಎಸ್​ವೈ ತಮ್ಮ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ‘ಡಿಸಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಮಾತಿಲ್ಲದೆ ಒಪ್ಪಿಗೆ ನೀಡಿದ್ದರು. ನಿರೀಕ್ಷೆಯಂತೆ ಅಲ್ಪಾವಧಿಯಲ್ಲಿ ಅಪಾರವಾದ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು, ಸರ್ಕಾರದ ಬಗ್ಗೆ ಸದಾಭಿಪ್ರಾಯ ಮೂಡಿಸಲು ನೆರವಾಗಿದೆ. ಇವನ್ನೆಲ್ಲ ಬಲ್ಲ ಬೊಮ್ಮಾಯಿ, ಸ್ವಂತ ಹಾಗೂ ಪಕ್ಷದ ಬಲ ವರ್ಚಸ್ಸು ಹೆಚ್ಚಿಸಲೆಂದು ವಿಶೇಷ ಆಸಕ್ತಿವಹಿಸಿದ್ದಾರೆ.

ವಿಶ್ವಾಸ ವೃದ್ಧಿ, ನಿಕಟತೆ ಲೆಕ್ಕಾಚಾರ: ಕರೊನಾ ಸೋಂಕು ಪ್ರಮಾಣ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಡಿಸಿಗಳ ಗ್ರಾಮ ವಾಸ್ತವ್ಯ ಪುನರಾರಂಭಿಸಲು ಜನ-ಸಾಮಾನ್ಯರು ಹಾಗೂ ಪಕ್ಷಾತೀತವಾಗಿ ಶಾಸಕರು ಕೂಡ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಡಿಸಿಗಳ ಗ್ರಾಮ ವಾಸ್ತವ್ಯ ಪುನರಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದ ಸಂದೇಶ ರವಾನೆಯಾಗಲಿದೆ. ಗ್ರಾಮೀಣರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆಗೆ ನಿಕಟತೆ ಸಂಪಾದಿಸುವ ಲೆಕ್ಕಾಚಾರವಿದೆ. ಹೊಸದಾಗಿ ಜನಪರ ಯೋಜನೆಗಳ ಅನುಷ್ಠಾನ, ಸಂಪುಟ ಮತ್ತು ಖಾತೆ ಬಗೆಗಿನ ಅಪಸ್ವರ ನಿವಾರಣೆ, ಕರೊನಾ ಮತ್ತು ನೆರೆ ಪರಿಣಾಮಕಾರಿ ನಿರ್ವಹಿಸಿಯಾಗಿದೆ. ಈಗಾಗಲೇ ಜಿಲ್ಲಾ ಪ್ರವಾಸ ಪ್ರಾರಂಭಿಸಿದ್ದು, ಮುಂದಿನ ಹಂತವಾಗಿ ಗ್ರಾಮಗಳಿಗೆ ಪ್ರವಾಸ ವಿಸ್ತರಿಸುತ್ತಿದ್ದಾರೆ.

ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಬೆರೆಸುವುದು ಇಲ್ಲವೇ ರಾಜಕೀಯ ಹುಡುಕುವ ಕಾಂಗ್ರೆಸ್ ನಾಯಕರಿಗೆ ರಾಜಕೀಯ ಕಾಮಾಲೆಯಾಗಿದೆ. ಯಾವಾಗ ಏನು ಹೇಳಿಕೆ ನೀಡಿದ್ದೇನೆಂದು ಕಾಂಗ್ರೆಸ್​ನವರಿಗೆ ಗೊತ್ತಿರುವುದಿಲ್ಲ. ಬೆಳಗ್ಗೆ ಒಂದು ಹೇಳಿದರೆ ಸಂಜೆಯ ವೇಳೆಗೆ ಮತ್ತೊಂದು ಹೇಳಿರುತ್ತಾರೆ. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಮಾಧ್ಯಮಗಳು ಕೂಡ ಪ್ರಚಾರ ನೀಡಬೇಡಿ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ

ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿಗೆ ಒತ್ತಡ ಹೆಚ್ಚಾಗಿದ್ದು, ಸಂಪುಟ ವಿಸ್ತರಣೆಗೆ ವರಿಷ್ಠರ ಒಪ್ಪಿಗೆ ಪಡೆದುಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗಿಲ್ಲ. ದೆಹಲಿ ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಸಿಎಂ ಪ್ರಯತ್ನಿಸಿದರಾದರೂ ಸಮಯಾವಕಾಶ ಸಿಕ್ಕಿಲ್ಲ. ಸದ್ಯ ಜಾರಕಿಹೊಳಿ ಸಹೋದರರು, ರಾಜೂಗೌಡ, ಪೂರ್ಣಿಮಾ, ತಿಪ್ಪಾರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ರಾಮದಾಸ್, ಸತೀಶ್ ರೆಡ್ಡಿ ಸೇರಿ ಹತ್ತಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ನಿರಂತರ ಲಾಬಿ ನಡೆಸಿದ್ದಾರೆ. ಈ ಮಧ್ಯೆ ಬಿಜೆಪಿ ಸೇರಿರುವ ಶಾಸಕ ಎನ್.ಮಹೇಶ್​ಗೆ ಸಚಿವ ಸ್ಥಾನ ಕೊಡುವ ಜವಾಬ್ದಾರಿ ಕೂಡ ಪಕ್ಷದ ಮೇಲಿದೆ. ಹೀಗಾಗಿ ಉಪ ಉಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ದೆಹಲಿ ಮಟ್ಟದಲ್ಲೇ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಮಲತಾಯಿ ಮಗನಾದ ಬಿ.ಎಸ್. ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಪಕ್ಷ ಕಟ್ಟಿದವರನ್ನ ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.ಬಿಎಸ್​ವೈ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ ಅವರನ್ನ ಸಂಪೂರ್ಣ ಮುಗಿಸುವ ‘ಟಾರ್ಗೆಟ್ ಬಿಎಸ್​ವೈ’ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ಕುಟುಕಿದೆ. ಇನ್ನು ಮುಖ್ಯಮಂತ್ರಿ ದೆಹಲಿ ಯಾತ್ರೆಯ ಬಗ್ಗೆಯೂ ಕಾಂಗ್ರೆಸ್ ಲೇವಡಿ ಮಾಡಿದೆ. ತಿಂಗಳಿಗೊಮ್ಮೆ ಸಿಎಂ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಬರಿಗೈಯಲ್ಲಿ ವಾಪಸಾಗುತ್ತಾರೆ. ಜಿಎಸ್​ಟಿ ಬಾಕಿ, ನೆರೆ ಪರಿಹಾರ ತರುವ ಬದಲು ಸಾಲದ ಭರವಸೆಯನ್ನು ಮಾತ್ರ ತರುತ್ತಾರೆ. ದೆಹಲಿ ಪ್ರವಾಸ ಕೈಗೊಳ್ಳುವುದು ಪಕ್ಷದ ಹಿತಕ್ಕಾಗಿಯೋ, ರಾಜ್ಯದ ಹಿತಕ್ಕಾಗಿಯೋ ಅಥವಾ ನಿಮ್ಮ ಹಿತಕ್ಕಾಗಿಯೋ? ಎಂದು ಬಸವರಾಜ ಬೊಮ್ಮಾಯಿಯವರನ್ನು ಪ್ರಶ್ನಿಸಿದೆ.

ಕುಮಾರಸ್ವಾಮಿ-ಸಿದ್ದರಾಮಯ್ಯ ಕೋಳಿಜಗಳ

ಇಬ್ಬರು ಮಾಜಿ ಸಿಎಂಗಳ ನಡುವೆ ಜಟಾಪಟಿ ಮುಂದುವರಿದಿದ್ದು, ಭಾನುವಾರ ವಿರಾಮ ನೀಡದೇ ಒಬ್ಬರನ್ನೊಬ್ಬರು ಚಿವುಟಿಕೊಂಡಿದ್ದಾರೆ. ‘ಬುದ್ಧಿವಂತ ಮತದಾರರು ಜೆಡಿಎಸ್​ಗೆ ಮತ ಹಾಕಲ್ಲ’ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೆರಳಿಸಿದ್ದು, ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ 3ನೇ ಸ್ಥಾನದಲ್ಲಿತ್ತು. ಇಲ್ಲಿ ಕಾಂಗ್ರೆಸ್ 2ನೇ ಸ್ಥಾನಕ್ಕೆ ಬಂದ ಇತಿಹಾಸವೇ ಇಲ್ಲ. ಈಗ ನೋಡಿದರೇ ರಾಜಕೀಯ ಬದುಕು ಕೊಟ್ಟ ಪಕ್ಷವನ್ನೆ ನಿಂದಿಸುತ್ತಿದ್ದಾರೆ ಎಂದು ತಿವಿದರು.

ಈಗ ಎಂಸಿ ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ, ಜನರಿಗೆ ತಮ್ಮ ‘ಸಿದ್ದಕಲೆ’ ದರ್ಶನ ಆಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ ಎಂದು ಕುಟುಕಿದರು. ಬುದ್ಧಿವಂತ ಮತದಾರರು ಜೆಡಿಎಸ್​ಗೆ ಮತ ಹಾಕಲ್ಲ ಎಂದು ‘ಸಿದ್ಧಹಸ್ತರು’ ಫರ್ವನು ಹೊರಡಿಸಿದ್ದಾರೆ. ಜನರು ಇವರ ಜೇಬಿನಲ್ಲಿ ಇದ್ದಾರಾ? ಜನರಿಗೆ ಅಪಮಾನ ಮಾಡುವ ಅಹಂಕಾರದ ಹೇಳಿಕೆ. ಅವರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ನಮ್ಮ ಸೋಲಿನ ಕಾರಣ ಮಂಡ್ಯ ಜನತೆಗೆ ಗೊತ್ತಿದೆ. ನಿಖಿಲ್ 6 ಲಕ್ಷ ಮತ ಗಳಿಸಿದ್ದರು. ರೈತಸಂಘ, ಕಾಂಗ್ರೆಸ್, ಬಿಜೆಪಿ, ಕೆಲ ಮಾಧ್ಯಮಗಳು ಸೇರಿ ಮ್ಯಾನೇಜ್ ಮಾಡಿದ ಚುನಾವಣೆ ಅದು. ಕೌರವರು ಮಹಾಭಾರತದಲ್ಲಿ ರಚಿಸಿದ್ದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿದ್ದನೋ ಹಾಗೇ ಇವರೆಲ್ಲರ ಷಡ್ಯಂತ್ರದ ಚಕ್ರವ್ಯೂಹದಲ್ಲಿ ನಿಖಿಲ್ ಸಿಲುಕಿದ್ದರು ಎಂದು ಲೋಕಸಭೆ ಚುನಾವಣೆಯ ಫಲಿತಾಂಶವನ್ನು ನೆನಪಿಸಿಕೊಂಡರು.

ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ರೆ ಬರಲ್ಲ ಎಂದು ಎಚ್​ಡಿಕೆ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ನನ್ನ ಮಾತುಗಳಿಗೆ ಕೋಮುವಾದಿ ಬಣ್ಣ ಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ ಮಾಡಿಕೊಳ್ಳಲಿ ಬಿಡಿ. ನಾನು ಎಚ್​ಡಿಕೆ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದೀನಿ. ಆದರೆ, ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನು ಏನು ಮಾಡಲಿ?

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net