ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ನಾಳೆಯಿಂದ ಎಲ್ಲ ಪ್ರಾಥಮಿಕ ಶಾಲೆಗಳಿಗೆ ರಜೆ

Arvind Kejrival
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಜನರು ಶುದ್ಧವಾಯುವಿಗಾಗಿ ಪರದಾಡುವಂತಾಗಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ನಾಳೆ(ನ.5)ಯಿಂದ ರಜೆ ಘೋಷಿಸಲಾಗಿದೆ. ಮಾಲಿನ್ಯ ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಘೋಷಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್​, ಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಳೆಯಿಂದ ದೆಹಲಿಯಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೇವೆ. 5ನೇ ತರಗತಿ ಮೇಲ್ಪಟ್ಟ ಎಲ್ಲ ತರಗತಿಗಳಿಗೂ ಹೊರಾಂಗಣ ಚಟುವಟಿಕೆಗಳನ್ನು ನಿಲ್ಲಿಸಿದ್ದೇವೆ ಎಂದರು.

ದೆಹಲಿಯಲ್ಲಿ ವಾಯು ಗುಣಮಟ್ಟ ಶುಕ್ರವಾರವೂ ತೀವ್ರ ಕಳಪೆ ಗುಣಮಟ್ಟಕ್ಕೆ ಇಳಿದಿದ್ದು, ದಟ್ಟವಾದ ಹೊಗೆ ಆವರಿಸಿದೆ. ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಗುರುವಾರ ಬೆಳಗ್ಗೆ 7 ಗಂಟೆ ಹೊತ್ತಿಗೆ 408ರಷ್ಟಿತ್ತು ( ಅತ್ಯಂತ ಕಳಪೆ ವಿಭಾಗ). ಶುಕ್ರವಾರ ಬೆಳಗ್ಗೆ 478ಕ್ಕೆ ಏರಿದೆ. ಮಧ್ಯಾಹ್ನವಾಗುತ್ತಿದ್ದಂತೆ ಈ ಮಟ್ಟವು ದೆಹಲಿ-ಎನ್‌ಸಿಆರ್ ಪ್ರದೇಶದಾದ್ಯಂತ 500 ದಾಟಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕಡಿಮೆ ಗಾಳಿಯ ವೇಗ ಮತ್ತು ಕೃಷಿ ಕೂಳೆ ಸುಡುವಿಕೆ ಘಟನೆಗಳಿಂದ ದೆಹಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿದೆ.

ವಾಯು ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗ (ಎನ್​ಸಿಪಿಸಿಆರ್​) ದೆಹಲಿ ಸರ್ಕಾರವನ್ನು ಒತ್ತಾಯಿಸಿತ್ತು. ಇದೀಗ ಪ್ರಾಥಮಿಕ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಲಾಗಿದೆ.

ದೆಹಲಿ ಎನ್​ಸಿಆರ್​ ಜಿಲ್ಲೆಗಳಲ್ಲಿ ನಾಲ್ಕು ಚಕ್ರಗಳ ಡೀಸೆಲ್​ ಲಘು ಮೋಟಾರ್​ ವಾಹನಗಳ ಸಂಚಾರ ಮತ್ತು ರಾಜಧಾನಿಗೆ ಎಲೆಕ್ಟ್ರಿಕ್​ ಮತ್ತು ಸಿಎನ್​ಜಿ ಹೊರತುಪಡಿಸಿ ಡೀಸೆಲ್​ ಚಾಲಿತ ಮಧ್ಯಮ ಮತ್ತು ಭಾರಿ ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಶೇ.50ರಷ್ಟು ದೆಹಲಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಚಿವ ಗೋಪಾಲ್ ರೈ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net