

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ರ ಮೃತದೇಹ ಸಿಕ್ಕ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಅ.30ರ ರಾತ್ರಿ 11.58ಕ್ಕೆ ನ್ಯಾಮತಿ ಬಳಿ ಚಂದ್ರು ಕಾರು ಇತ್ತು ಎಂದು ಟ್ರೇಸ್ ಆಗಿದೆ. ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು. ಕಾರಿನ ವೀಡಿಯೋ ನ್ಯಾಮತಿ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಪ್ರಕಾರ ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು ಎಂಬುದು ದೃಢವಾಗಿದೆ. ಭಾನುವಾರ(ಅ.30) ರಾತ್ರಿ 11.58ಕ್ಕೆ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ರಾತ್ರಿ 12.06ಕ್ಕೆ ಚಂದ್ರಶೇಖರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಮೃತದೇಹ ಸಿಕ್ಕ ಸ್ಥಳಕ್ಕೂ ನ್ಯಾಮತಿಗೂ 10 ಕಿಲೋ ಮೀಟರ್ ಅಂತರವಿದೆ. ಕಾಲ್ ಹಿಸ್ಟರಿ, ಸಿಡಿಆರ್ ಎಲ್ಲವೂ ತನಿಖೆ ಆಗ್ತಿದೆ. ಇದರೊಂದಿಗೆ ಡಯಾಟಮ್ ಟೆಸ್ಟ್ ಸಹ ನಡೆಸುತಿದ್ದೇವೆ ಎಂದರು.
ಪ್ರಕರಣ ತನಿಖೆ ಹಂತದಲ್ಲಿದೆ. ಹಾಗಾಗಿ ಬಹಿರಂಗವಾಗಿ ಏನೂ ಹೇಳೋದಿಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಆದಷ್ಟು ಬೇಗ ಕೊಡುವಂತೆ ಕೇಳಿದ್ದೇವೆ. ನಾವು ಎವಿಡೆನ್ಸ್ ಸಂಗ್ರಹಿಸುತ್ತಿದ್ದೇವೆ, ಅದಕ್ಕೆ ತಜ್ಞರಿದ್ದಾರೆ. ಅವರಿದ್ದಾಗ ನಾವು ಮಾತಾಡಬಾರದು. ಚಂದ್ರಶೇಖರ್ರ ತಂದೆ ದೂರು ಕೊಟ್ಟಿದ್ದಾರೆ. ದಾವಣಗೆರೆ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಸ್ಥಳಕ್ಕೆ ಹುಬ್ಬಳ್ಳಿ ಮತ್ತು ದಾವಣಗೆರೆಯ ಎಫ್ಎಸ್ಎಲ್ ತಂಡ ಭೇಟಿ ನೀಡಿ ಫಿಸಿಕಲ್ ಎವಿಡೆನ್ಸ್ ಸಂಗ್ರಹಿಸುತ್ತಿದ್ದಾರೆ. ನಿನ್ನೆ(ಗುರುರಾವ) ರಾತ್ರಿ ಮರಣೋತ್ತರ ಪರೀಕ್ಷೆ ಆಗಿದೆ. ಎರಡ್ಮೂರು ದಿನದಲ್ಲಿ ವರದಿ ಸಿಗಲಿದೆ. ದೂರು ದಾಖಲು ಆದ ತಕ್ಷಣ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸುತ್ತ ಹುಡುಕಾಟ ನಡೆಸಿದ್ದೇವೆ ಎಂದರು.