ಸ್ಪಂದನಶೀಲ ಸರ್ಕಾರದ ನಿರ್ಧಾರ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಜಾಯಿಷಿ

CM Siddu
Published on

ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿದು ಕೃಷಿ ತಿದ್ದುಪಡಿಯ ಮೂರು ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ಇದು, ಸ್ಪಂದನಾಶೀಲ ಸರ್ಕಾರದ ನಿರ್ಧಾರವೆಂದು ಸಿಎಂ ಬಸವರಾಜ ಬೊಮ್ಮಾಯಿ ಸಮಜಾಯಿಷಿ ನೀಡಿದರು. ಮೂರು ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಬಗ್ಗೆ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ-ವಿರೋಧ ಸಹಜ. ಹಿನ್ನಡೆ ಎಂದು ವ್ಯಾಖ್ಯಾನಿಸಬೇಕಾದ ಅಗತ್ಯವಿಲ್ಲ. ಮೂರು ಕಾಯ್ದೆಗಳನ್ನು ಜಾರಿಗೆ ತಂದಿದ್ದರ ಉದ್ದೇಶ ಮನವರಿಕೆಗೆ ಪ್ರಯತ್ನಿಸಿದರು. ಆದರೂ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ವಾಪಸ್ ಪಡೆಯಲು ನಿರ್ಧರಿಸುವ ಮೂಲಕ ಮೋದಿಯವರು ದೊಡ್ಡ ಗುಣ ತೋರಿಸಿಕೊಟ್ಟಿದ್ದಾರೆ ಎಂದರು. ಇದು ರಾಜಕೀಯ ನಿರ್ಣಯ ಹಾಗೂ ಚುನಾವಣೆ ಗಿಮಿಕ್ ಎಂಬ ವ್ಯಾಖ್ಯಾನ ಸರಿಯಲ್ಲ. ಈ ನಿರ್ಧಾರಕ್ಕೂ ಚುನಾವಣೆಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನ ಸಣ್ಣತನ: ರೈತರು ಮತ್ತು ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವೆಂದು ಕಾಂಗ್ರೆಸ್ ಹೇಳಿಕೊಳ್ಳುವ ಮೂಲಕ ಸಣ್ಣತನ ಪ್ರದರ್ಶಿಸಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ಹೊರಗಿಟ್ಟೇ ರೈತರು ಹೋರಾಟ ನಡೆಸಿದ್ದು, ಕೆಲವು ಕಂಪನಿಗಳ ಪ್ರಾಯೋಜಿತವೆಂದು ಅಧಿವೇಶನದಲ್ಲಿ ಹೇಳಿದ್ದನೇ ಹೊರತು, ಪ್ರತಿಪಕ್ಷಗಳು ಪ್ರಾಯೋ ಜಿತವೆಂದಿಲ್ಲ. ಬೇಕಿದ್ದರೆ ದಾಖಲೆ ತೆಗೆದು ನೋಡಲಿ ಎಂದು ಸವಾಲೆಸೆದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಬ್ಲ್ಯೂಟಿಒ ಒಪ್ಪಂದಕ್ಕೆ ಸಹಿ, ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ನೀತಿ ಅಂಗವಾಗಿ 3 ಕೃಷಿ ತಿದ್ದುಪಡಿ ಕಾಯ್ದೆಗಳು ರೂಪುಗೊಂಡಿದ್ದವು ಎಂದು ಹೇಳಿದರು.

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಯಾವ ಉದ್ದೇಶಕ್ಕೆ ವಾಪಸ್ ಪಡೆದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗಬಾರದು. ರೈತರ ಮೇಲೆ ಹಿಂಸಾಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ.

| ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ಹಿಟ್ಲರ್​ಗಿರಿಯನ್ನು ಸೋಲಿಸಿದ ರೈತರು

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇ ಬೇಕು. ಇದುವೇ ರೈತರ ಸ್ವಾತಂತ್ರೊ್ಯೕತ್ಸವ. ಆದರೆ, ಇದು ತಾತ್ಕಾಲಿಕ ಗೆಲುವು. ಏಕೆಂದರೆ ಹಲವು ರಾಜ್ಯಗಳಲ್ಲಿ ಚುನಾವಣೆಗಳ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಹಿಟ್ಲರ್​ಶಾಹಿ ಆಡಳಿತ ಮಾಡಿದರೆ ಚುನಾವಣೆಗಳಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂದು ಮೋದಿ ಮತ್ತು ಅಮಿತ್ ಷಾ ಅವರಿಗೆ ಬಹುಶಃ ಇಂಟೆಲಿಜೆನ್ಸ್ ಮಾಹಿತಿ ದೊರೆತಿದೆ. ಹಾಗಾಗಿ ಚುನಾವಣೆಗಳು ಮುಗಿಯಲಿ ಆಮೇಲೆ ನೋಡೋಣ ಎಂದು ರೈತದ್ರೋಹಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ಸು ಪಡೆದಿದ್ದಾರೆ. ನಮ್ಮ ರೈತರು ಅಹಿಂಸಾತ್ಮಕ ಹೋರಾಟದ ಮಾದರಿಯನ್ನೂ ಗೆಲ್ಲಿಸಿದ್ದಾರೆ. ಜೀವಂತಗೊಳಿಸಿದ್ದಾರೆ. ಇದರ ಮೂಲಕ ಹಿಟ್ಲರ್​ಗಿರಿಯನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ.ರೈತದ್ರೋಹಿಯಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು.

| ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net