ಮೀನುಗಾರಿಕೆ ಕ್ಷೇತ್ರಕ್ಕೆ ಪ್ರತ್ಯೇಕ ಪೊಲೀಸ್; ಇಂದು ವಿಶ್ವ ಮೀನುಗಾರಿಕಾ ದಿನ..

Club House
Published on
ವಿಶ್ವ ಮೀನುಗಾರಿಕಾ ದಿನ ಹಿನ್ನೆಲೆಯಲ್ಲಿ ವಿಜಯವಾಣಿ, ದಿಗ್ವಿಜಯ ವಾಹಿನಿ ಶನಿವಾರ ಹಮ್ಮಿಕೊಂಡಿದ್ದ ‘ಮೀನುಗಾರಿಕೆಗೆ ಇರುವ ಅವಕಾಶಗಳು ಮತ್ತು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು’ ಎಂಬ ವಿಷಯದ ಕ್ಲಬ್​ಹೌಸ್ ಸಂವಾದದಲ್ಲಿ ಮಂಗಳೂರು ಕರ್ನಾಟಕ ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಮುಖಂಡ ಯತೀಶ್ ಬೈಕಂಪಾಡಿ, ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್​ಆರ್​ಐ) ವಿಜ್ಞಾನಿ ಡಾ.ಪ್ರತಿಭಾ ರೋಹಿತ್, ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಪಾಲ್ಗೊಂಡು ಮಾಹಿತಿ ನೀಡಿದರು.

ಕರಾವಳಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿ ಕಾನೂನು ಪಾಲನೆಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆಯ ಅಗತ್ಯವಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಜತೆಗೆ, ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ತುರ್ತು ಸಂದರ್ಭದಲ್ಲಿ ರಕ್ಷಿಸಲು ಸೀ ಆಂಬುಲೆನ್ಸ್​ಗಿಂತ ಹೆಲಿಕಾಪ್ಟರ್ ಹೆಚ್ಚು ಅನುಕೂಲ. ಈ ಕುರಿತಂತೆ ಕಳೆದ ತಿಂಗಳು ಮೀನುಗಾರಿಕಾ ಸಚಿವರು, ನಿರ್ದೇಶಕರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಮೀನುಗಾರ ಸಂಘಟನೆಗಳ ಮುಖಂಡರು ಬೇಡಿಕೆ ಸಲ್ಲಿಸಿದ್ದಾರೆ. ಈಗಾಗಲೇ ಗೋವಾ ಕೋಸ್ಟ್ ಗಾರ್ಡ್​ನಲ್ಲಿ ಹೆಲಿಕಾಫ್ಟರ್​ನಲ್ಲಿ ವ್ಯವಸ್ಥೆ ಇದ್ದು, ಇದು ಉತ್ತರ ಕರ್ನಾಟಕಕ್ಕೆ ಹೆಚ್ಚು ಉಪಯೋಗವಾಗಲಿದೆ. ಅದೇ ರೀತಿ ಮಂಗಳೂರಿನ ಕೋಸ್ಟ್ ಗಾರ್ಡ್ ಘಟಕದಲ್ಲೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದರೆ ಅನುಕೂಲ ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್ ಅಭಿಪ್ರಾಯಪಟ್ಟರು. 320 ಕಿ.ಮೀ.ವ್ಯಾಪ್ತಿಯಲ್ಲಿ 3 ಜಿಲ್ಲೆಗಳಲ್ಲಿ ಹರಡಿರುವ ಕರ್ನಾಟಕದ ಕರಾವಳಿಯಲ್ಲಿ ಪರ್ಸೀನ್, ಟ್ರಾಲ್, ಗಿಲ್​ನೆಟ್, ಸಾಂಪ್ರದಾಯಿಕ ನಾಡದೋಣಿ ಹೀಗೆ ವಿವಿಧ ವಿಧಾನಗಳಲ್ಲಿ ಮೀನುಗಾರಿಕೆ ನಡೆಯುತ್ತದೆ. ಇಂದು ಆಳ ಸಮುದ್ರ ಮೀನುಗಾರರಿಗೆ ಬೋಟ್​ಗಳ ನಿರ್ವಹಣೆ ವೆಚ್ಚ ಹೆಚ್ಚಾಗಿ, ಮತ್ಸ್ಯ ಇಳುವರಿ ಕಡಿಮೆಯಾಗಿ, ಆದಾಯ ಇಳಿಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಮೀನುಗಾರಿಕಾ ನೀತಿ

ನಿತಿನ್​ಕುಮಾರ್

ಕೇಂದ್ರ ಸರ್ಕಾರ ಮೀನುಗಾರಿಕಾ ನೀತಿ ಸಿದ್ಧಪಡಿಸಿದ್ದು, ಅದರ ಕರಡು ಪ್ರತಿಯನ್ನು ಎಲ್ಲ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಅದರಲ್ಲಿ ಮೀನುಗಾರಿಕೆ ಹೇಗೆ ಮಾಡಬೇಕು, ಯಾವ ಬೋಟ್ ಎಷ್ಟು ದೂರಕ್ಕೆ ಹೋಗಬಹುದು, ಯಾವ ರೀತಿಯ ಬಲೆಯನ್ನು ಉಪಯೋಗಿಸಬೇಕು ಎನ್ನುವ ವಿವರಗಳಿವೆ. ಇದನ್ನು ಉಲ್ಲಂಘಿಸಿ ಮೀನುಗಾರಿಕೆ ಮಾಡಿದರೆ, ಅದಕ್ಕೆ 2 ಲಕ್ಷ ರೂ. ವರೆಗೆ ದಂಡ, ಬೋಟ್ ಆರ್​ಸಿ, ಪರವಾನಗಿ ರದ್ದು ಮಾಡುವುದು ಮೊದಲಾದ ವಿಚಾರಗಳಿವೆ. ರಾಜ್ಯ ಸರ್ಕಾರಗಳಿವೆ ಅವುಗಳಿಗೆ ಕೆಲವೊಂದು ಮಾರ್ಪಾಡು ಮಾಡುವ ಅವಕಾಶವಿದ್ದು, ಇದು ಶೀಘ್ರ ಜಾರಿಗೆ ಬರಬೇಕಾದ ಅಗತ್ಯವಿದೆ ಎಂದು ನಿತಿನ್ ಕುಮಾರ್ ತಿಳಿಸಿದರು.

ಮೀನು ಉತ್ಪತ್ತಿ ಕುಂಠಿತ

ಯತೀಶ್ ಬೈಕಂಪಾಡಿ

ಹವಾಮಾನ ಬದಲಾವಣೆ, ನಿರಂತರ ಮೀನುಗಾರಿಕೆ ಮೊದಲಾದ ಕಾರಣಗಳಿಂದ ಪ್ರತಿ ವರ್ಷ ಮೀನು ಉತ್ಪತ್ತಿ ಕಡಿಮೆಯಾಗುತ್ತಿದೆ. ಲಭ್ಯವಿರುವ ಕೆಲವೊಂದು ತಂತ್ರಜ್ಞಾನ, ಆವಿಷ್ಕಾರಗಳನ್ನು ಕುರುಡಾಗಿ ಅನುಸರಿಸುತ್ತಿದ್ದಾರೆ. ಇದರಿಂದ ಸುಸ್ಥಿರ ಅಭಿವೃದ್ಧಿ ಆಗುತ್ತಿಲ್ಲ. ಮೀನುಗಾರಿಕೆ ವೃತ್ತಿಯ ಬದಲು ಉದ್ಯಮ ಆಗಿ ಬದಲಾಗಿದೆ. ಮೀನು ರಫ್ತು ಮಾಡುವವರು ಕೋಟ್ಯಂತರ ರೂಪಾಯಿ ಮೌಲ್ಯದ ವಾಹನಗಳನ್ನು ಖರೀದಿಸಿದರೆ, ಮೀನು ಹಿಡಿಯುವವರು ಇನ್ನೂ ಬಸ್ಸು, ಆಟೋಗಳನ್ನು ಬಳಸುತ್ತಿದ್ದಾರೆ. ಮೀನು ಉತ್ಪತ್ತಿ ಹೆಚ್ಚಾಗುವ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಳು ನಡೆಯಬೇಕು ಎಂದು ಮೀನುಗಾರ ಮುಖಂಡ ಯತೀಶ್ ಬೈಕಂಪಾಡಿ ಹೇಳಿದರು.

ಡ್ರೆಜ್ಜಿಂಗ್ ಅಗತ್ಯ: ಅಳಿವೆ ಬಾಗಿಲಿನಲ್ಲಿ ಮರಳು, ಕೆಸರು ತುಂಬಿ ಬೋಟ್​ಗಳು ಮೀನುಗಾರಿಕೆ ಮುಗಿಸಿ ಬರುವಾಗ ಅಥವಾ ಮೀನುಗಾರಿಕೆಗೆ ತೆರಳುವಾಗ ಅವಘಡಗಳು ಸಂಭವಿಸಿ ಪ್ರಾಣಾಪಾಯವಾಗುತ್ತದೆ. ಮೀನುಗಾರಿಕೆಗೆ ಕಾರ್ವಿುಕರಾಗಿ ಬರುವ ಆಂಧ್ರ, ಜಾರ್ಖಂಡ್, ಛತ್ತೀಸ್​ಗಢ ಮೂಲದ ಕಾರ್ವಿುಕರು ಬಲಿಯಾಗುತ್ತಿದ್ದು, ಇದೊಂದು ಕೊಲೆಗೆ ಸಮ. ಆ ಕಾರಣಕ್ಕಾಗಿ ನಿಯಮಿತವಾಗಿ ಡ್ರೆಜ್ಜಿಂಗ್ ಮಾಡುವ ಅಗತ್ಯವಿದ್ದು, ಸರ್ಕಾರವೇ ಡ್ರೆಜ್ಜರ್ ತೆಗೆದುಕೊಂಡು ಮಾಡುವುದಕ್ಕಿಂತ ಗುತ್ತಿಗೆ ನೀಡಿ ನಿಯಮಿತವಾಗಿ ಡ್ರೆಜ್ಜಿಂಗ್ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಯತೀಶ್ ಬೈಕಂಪಾಡಿ ಹೇಳಿದರು.

ಉತ್ತರ ಕನ್ನಡದಲ್ಲಿ ಮೀನುಗಾರರಿಗೆ ತುಂಬ ಸಮಸ್ಯೆಗಳಿವೆ. ಸಾಂಪ್ರದಾಯಿಕ ಮೀನುಗಾರರು ಬೆಳಗ್ಗೆ 6 ರಿಂದ ಸಾಯಂಕಾಲ 6 ತನಕ ಮೀನುಗಾರಿಕೆ ನಡೆಸಿದರೆ ಬಂಡವಾಳಶಾಹಿ ಮೀನುಗಾರಿಕೆ ನಡೆಸುವವರು 24 ಗಂಟೆ ಮೀನುಗಾರಿಕೆ ನಡೆಸುತ್ತಾರೆ. ನಮ್ಮಲ್ಲಿ ಕಾನೂನು ಪಾಲನೆ ಕಡ್ಡಾಯ ಇಲ್ಲ. ಮೀನುಗಾರಿಕೆ ಬಂದರು ಇರುವ ಕಡೆ ವಾಣಿಜ್ಯ ಬಂದರು ತಂದು ಹಾಕುತ್ತಾರೆ. ಲೈಟ್ ಫಿಶಿಂಗ್ ಟ್ರಾಲ್ ಬೋಟ್ ಎಲ್ಲ ಕಾನೂನು ಬಾಹಿರವಾಗಿ ನಡೆಯುತ್ತದೆ.

| ವಿನಾಯಕ್ ಕಾರವಾರ ನಿವಾಸಿ

ಮೀನುಗಾರಿಕೆ ವ್ಯವಸ್ಥೆಯ ಶೇ.95 ಭಾಗವನ್ನು ಸರ್ಕಾರವೇ ಖಾಸಗಿಯವರ ಕೈಗೆ ಕೊಟ್ಟಿದೆ. ಮೀನುಗಾರಿಕೆ ಬಗ್ಗೆ ತಿಳಿವಳಿಕೆ ಇರುವ ಅಧಿಕಾರಿಗಳು ಇಲಾಖೆಯಲ್ಲಿ ಇಲ್ಲ.

| ದೇವದಾಸ್ ಕುಂದರ್ ಮಂಗಳೂರು ನಿವಾಸಿ

ಸಾಗರದಲ್ಲಿರುವ ಮತ್ಸ್ಯ ಸಂಪತ್ತನ್ನು ನಮ್ಮ ಮುಂದಿನ ಜನಾಂಗಕ್ಕಾಗಿ ಸಂರಕ್ಷಿಸುವುದು..ಮೀನುಗಾರಿಕಾ ಕ್ಷೇತ್ರದಲ್ಲಿರುವ ಸಮಸ್ಯೆ ನಿವಾರಿಸಿ ಮೀನುಗಾರ ಕುಟುಂಬಗಳ ಜೀವನಮಟ್ಟ ಸುಧಾರಣೆ...ಮತ್ಸ್ಯ ಪ್ರಿಯರಿಗೆ ಖಾದ್ಯಕ್ಕೆ ಸಾಕಷ್ಟು ಮೀನು ದೊರೆಯುವಂತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ಸೂಕ್ತ ನೀತಿ-ನಿಯಮಾವಳಿ ರೂಪಿಸಬೇಕು... ಇವಿಷ್ಟು ಪ್ರಮುಖ ಅಭಿಪ್ರಾಯಗಳು ವ್ಯಕ್ತವಾಗಿದ್ದು ಶನಿವಾರದ ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ.

ಅತಿಯಾದ ಮೀನುಗಾರಿಕೆಯಿಂದ ಹಾನಿ

ಡಾ. ಶಿವಕುಮಾರ ಹೆರಗಿ

2014, 15 ಮತ್ತು 16 ರಲ್ಲಿ ಕರ್ನಾಟಕದಲ್ಲಿ ಅಧಿಕ ಮೀನು ಇಳುವರಿ ಬಂದಿದೆ. ಕೋವಿಡ್ ದೂರವಾದ ಬಳಿಕ ಮತ್ತೆ ದೊಡ್ಡ ಪ್ರಮಾಣದಲ್ಲಿ ಬಂಗುಡೆ ಬಂತು. ಬೂತಾಯಿ ಬರಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅತಿಯಾದ ಮೀನುಗಾರಿಕೆ, ಹವಾಮಾನ ವ್ಯತ್ಯಾಸ ಮೀನು ಇಳುವರಿ ಕುಸಿತಕ್ಕೆ ಕೂಡ ಕಾರಣವಾಗಿದೆ. ಸಮುದ್ರ ತೀರದಾದ್ಯಂತ ಪಾಚಿ ಬೆಳೆಯುತ್ತಿರುವುದು ಕಂಡು ಬಂದಿದೆ. ಸಮುದ್ರದ ಆಹಾರ ಸರಪಳಿಯಲ್ಲಿ ವ್ಯತ್ಯಾಸವಾಗಿರುವುದನ್ನು ಕೂಡ ಇದು ಸೂಚಿಸುತ್ತದೆ. ಮೀನುಗಾರಿಕೆಯಲ್ಲಿ ಬಂಡವಾಳಶಾಹಿತನ ಆಧಿಕವಾದ ಹಾಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ಸಮಸ್ಯೆ ಆಗದಂತೆ ಕಂಡುಬರುತ್ತದೆ. ಸುಸ್ಥಿರ ಮೀನುಗಾರಿಕೆ ಕುರಿತು ಎಲ್ಲರೂ ಯೋಚಿಸಬೇಕಾದ ಕಾಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಹೇಳಿದರು.

ಬೇಡಿಕೆಗಳು

  • ಮೀನುಗಾರಿಕಾ ಬೋಟ್​ಗಳಿಗೆ ಒದಗಿಸುವ ಡೀಸೆಲ್ ಮೇಲಿನ ರೋಡ್ ಸೆಸ್ ಕಡಿತ
  • ಎಲ್ಲ ರಾಜ್ಯಗಳಲ್ಲಿ ಏಕರೀತಿಯ ಮೀನುಗಾರಿಕಾ ನೀತಿ ಪಾಲನೆ
  • ಸಾಂಪ್ರದಾಯಿಕ ನಾಡದೋಣಿ, ಕೈರಂಪಣಿ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ
  • ಇಲಾಖೆ, ಕೆಎಫ್​ಡಿಸಿಯಲ್ಲಿ ಮೀನುಗಾರಿಕೆ ಪರಿಚಯ ಇರುವ ಅಧಿಕಾರಿಗಳ ನಿಯೋಜನೆ.

ಭಾರತದ ಸಿಗಡಿಗೆ ಅಮೆರಿಕದಲ್ಲಿ ನಿಷೇಧ: ನಮ್ಮ ಪರ್ಸೀನ್ ಮತ್ತು ಟ್ರಾಲ್ ಬೋಟುಗಳು ಹಿಡಿದ ಸಿಗಡಿಗೆ ಅಮೆರಿಕ ನಿಷೇಧ ಹೇರಿದೆ. ಇದರಿಂದ ಸುಮಾರು 100 ಮಿಲಿಯನ್ ಡಾಲರ್ ನಷ್ಟ ಸಂಭವಿಸಿರಬಹುದು. ಈ ನಿಷೇಧ ತೆರವುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿವೆ ಎಂದು ಡಾ.ಶಿವಕುಮಾರ ಹರಗಿ ತಿಳಿಸಿದರು.

ಮತ್ಸ್ಯ ಇಳುವರಿ ಯೋಜನೆ

ಡಾ.ಪ್ರತಿಭಾ ರೋಹಿತ್

ವರ್ಷಂಪ್ರತಿ ಮತ್ಸ್ಯ ಸಂತತಿ ಕುಸಿಯುತ್ತಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ. ನಮ್ಮ ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆ ದೇಶ ಹಾಗೂ ಎಲ್ಲ ರಾಜ್ಯಗಳಲ್ಲಿ ವಾರ್ಷಿಕ ಮತ್ಸ್ಯ ಇಳುವರಿ ಬಗ್ಗೆ ಒಂದು ಯೋಜನೆ ರೂಪಿಸಿಕೊಂಡಿದೆ ಎಂದು ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಪ್ರತಿಭಾ ರೋಹಿತ್ ಹೇಳಿದರು.

ಕರ್ನಾಟಕಕ್ಕೆ ಆರು ಲಕ್ಷ ಟನ್ ಮೀನು ಇಳುವರಿ ನಿಗದಿಪಡಿಸಲಾಗಿದೆ. ಕಳೆದ 2020- 21 ನೇ ಸಾಲಿನಲ್ಲಿ ಮೂರು ಲಕ್ಷ ಟನ್ ಮಾತ್ರ ಮೀನು ಇಳುವರಿ ದೊರೆತಿದೆ. ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಟ್ರಾಲ್ ಬೋಟ್, ಪರ್ಸೀನ್, ಸಾಂಪ್ರದಾಯಿಕ ಎಲ್ಲ ರೀತಿಯ ಮೀನುಗಾರಿಕೆಯಲ್ಲಿ ಒಟ್ಟು ಸರಾಸರಿ ನಾಲ್ಕು ಲಕ್ಷ ಟನ್ ಇತ್ತು. ನಮಗೆ ವಾರ್ಷಿಕ ಆರು ಲಕ್ಷ ಟನ್ ತನಕ ಮೀನು ಇಳುವರಿ ಪಡೆಯುವ ಅವಕಾಶವಿದೆ. ಮೀನುಗಾರಿಕೆ ಕೃಷಿ ಅಭಿವೃದ್ಧಿಪಡಿಸಲು ನಮ್ಮ ಸಂಶೋಧನಾ ಸಂಸ್ಥೆಗಳು ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿವೆ. ಇವುಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಮೊದಲನೆಯದು ಇರುವ ಸಂಪನ್ಮೂಲಗಳಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವುದು. ಮೀನಿನ ಮರಿಗಳನ್ನು ಹಿಡಿಯದಂತೆ ಎಚ್ಚರಿಕೆ ವಹಿಸುವುದು. ಆ ಮರಿಗಳು ಬೆಳೆದು ಕನಿಷ್ಠ ಒಂದು ಬಾರಿ ಹೊಸ ಮರಿಗಳಿಗೆ ಜನ್ಮ ನೀಡಲು ಅವಕಾಶ ಒದಗಿಸುವುದು. ಎರಡನೆಯದು ಯಾವುದೇ ಪ್ರದೇಶದಲ್ಲಿ ನಿರ್ದಿಷ್ಟ ಸಂಖ್ಯೆಯ ಬೋಟುಗಳು ಮಾತ್ರ ಮೀನುಗಾರಿಕೆ ನಡೆಸುವುದು. ಸಣ್ಣ ಬೋಟುಗಳು ಮೀನುಗಾರಿಕೆ ನಡೆಸಲು ಒಂದು ವ್ಯಾಪ್ತಿ ನಿಗದಿಪಡಿಸುವುದು. ಹಾಗೆಯೇ ಮಧ್ಯಮ ಗಾತ್ರದ ಹಾಗೂ ದೊಡ್ಡ ಗಾತ್ರದ ಬೋಟುಗಳು ಪ್ರತ್ಯೇಕ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಬಹುದಾದ ವ್ಯಾಪ್ತಿಯನ್ನು ನಿಗದಿಪಡಿಸುವುದು. ವಾಸ್ತವವಾಗಿ ಕರ್ನಾಟಕ ಮರೈನ್ ಫಿಶರೀಸ್ ರೆಗುಲೇಶನ್ ಆಕ್ಟ್​ನಲ್ಲಿ ಈ ಬಗ್ಗೆ ಉಲ್ಲೇಖವಿದೆ. ಇದು ಸರಿಯಾಗಿ ಪಾಲನೆಯಾದರೂ ಮೀನಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ. ಮೂರನೆಯದು ಆಧುನಿ ತಂತ್ರಜ್ಞಾನ ಬಳಸಿ ಮೀನು ಇಳುವರಿ ಹೆಚ್ಚಿಸುವುದು. ಕೇಜ್ ಫಾರ್ವಿುಂಗ್ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಸಮುದ್ರ ಹಾಗೂ ಹಿನ್ನೀರು ಎರಡು ಕಡೆ ಕೂಡ ಕೇಜ್ ಫಾರ್ವಿುಂಗ್ ಮಾಡಬಹುದು. ಆದರೆ ಎಲ್ಲ ಕಡೆ ಎಲ್ಲ ಮೀನುಗಳ ಕೃಷಿ ಸಾಧ್ಯವಾಗುವುದಿಲ್ಲ. ಹಿನ್ನೀರಿನಲ್ಲಿ ಕೆಂಬೇರಿ, ಕುರುಡಿ ಮೀನು, ಸಮುದ್ರ ಕೇಜ್ ಫಾರ್ವಿುಂಗ್​ನಲ್ಲಿ ಮೆಲ್ಗ್, ಮುರು ಮುಂತಾದ ಮೀನುಗಳ ಕೃಷಿ ಮಾಡಬಹುದು. ನಮ್ಮಲ್ಲಿ ಈ ಮೀನುಗಳ ಮರಿ ಉತ್ಪಾದನಾ ಕೇಂದ್ರಗಳಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net