

ನವದೆಹಲಿ: ಆಗಸ್ಟ್ 15ಕ್ಕೆ ದೇಶೀಯ ಕರೊನಾ ಲಸಿಕೆ ಸಜ್ಜಾಗಲಿದೆ ಎಂಬ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಸ್ಪಷ್ಟನೆ ನೀಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಂಶೋಧಕರು ಆಗಸ್ಟ್ 15ಕ್ಕೆ ಲಸಿಕೆ ಸಜ್ಜುಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ, ಕನಿಷ್ಠ ಮುಂದಿನ ವರ್ಷಾರಂಭದವರೆಗೂ ಕರೊನಾ ನಿಗ್ರಹಕ್ಕೆ ದೇಶೀಯ ಲಸಿಕೆ ಸಜ್ಜಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಲಸಿಕೆ ಸಜ್ಜುಗೊಳಿಸುವಲ್ಲಿ ಉಂಟಾಗುವ ವಿಳಂಬವನ್ನು ತಪ್ಪಿಸಲು ಐಸಿಎಂಆರ್ನಿಂದ ಪತ್ರ ಬರೆಯಲಾಗಿತ್ತು. ಇದರರ್ಥ ಯಾವುದೇ ಪ್ರಕ್ರಿಯೆಯನ್ನು ಕೈಬಿಡುವ ಉದ್ದೇಶವಿರಲಿಲ್ಲ ಎಂದು ಸ್ಥಾಯಿ ಸಮಿತಿಗೆ ಸ್ಪಷ್ಟಪಡಿಸಲಾಗಿದೆ.
ಸಂಸತ್ನಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಸಲಹೆಗಾರರು, ಅಧಿಕಾರಿಗಳು ಸಂಸದರಿಗೆ ಈ ವಿಷಯ ತಿಳಿಸಿದ್ದಾರೆ. ಭಾರತ ಲಸಿಕೆ ತಯಾರಿಕೆ ಹಾಗೂ ಜನರಿಕ್ ಔಷಧ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಅಂತೆಯೇ ಕರೊನಾ ಲಸಿಕೆ ಕಂಡು ಹಿಡಿಯುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಬಾ ರಾಮ್ದೇವ್ ಅವರ ಕರೊನಾ ಔಷಧದ ಬಗ್ಗೆಯೂ ಸಮಿತಿ ಸದಸ್ಯರ ಪ್ರಶ್ನೆಗಳನ್ನು ಕೇಳಿದರೂ, ಅಧಿಕಾರಿಗಳು ಆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.
ಸೋಮವಾರ (ಜು.13) ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್ಅನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸಲಾಗಿದೆ. ಜು.7ರಿಂದಲೇ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ.