

ತೀರ್ಥಹಳ್ಳಿ: ಮುಂಗಾರು ಆರಂಭಕ್ಕೆ ಮುನ್ನ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬದಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು ಮತ್ತು ಚರಂಡಿಯನ್ನು ಸ್ವಚ್ಛಗೊಳಿಸಿ ರಸ್ತೆ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ಮುಂಗಾರು ನಿರ್ವಹಣೆಗೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೆಲವೆಡೆ ರಸ್ತೆ ಬದಿಯಲ್ಲಿ ಅಕೇಶಿಯಾ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೆ ಬೀಳುವಂತಿವೆ. ಕಳೆದ ಬಾರಿ ಸಂಭವಿಸಿರುವ ಘಟನೆಗಳು ಮರುಕಳಿಸದಂತೆ ರಸ್ತೆಗೆ ಬಾಗಿರುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ಮಳೆ ನೀರಿನಿಂದ ರಸ್ತೆಗಳು ಹಾಳಾಗದಂತೆ ಚರಂಡಿಯನ್ನು ವ್ಯವಸ್ಥಿತವಾಗಿ ಸಿದ್ಧಗೊಳಿಸಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಹಲವರು ಜಾತಿ ಧೃಡೀಕರಣ ಪತ್ರ ಇಲ್ಲದೇ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಮಕ್ಕಳ ಕಲಿಕೆಗೆ ಜಾತಿ ಪ್ರಮಾಣ ಪತ್ರ ಸಕಾಲಿಕವಾಗಿ ಜನರಿಗೆ ದೊರೆಯುವಂತೆ ಕ್ರಮ ಕೈಗೊಳ್ಳುವುದು ಅಗತ್ಯ. ತಾಲೂಕಿನಲ್ಲಿ ಒಂದು ಕುಟುಂಬವೂ ಜಾತಿ ಧೃಡೀಕರಣದ ಕೊರತೆಯಿಂದ ಸವಲತ್ತುಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ಕಂದಾಯ ಇಲಾಖೆ ಸಹಕಾರ ಇಲ್ಲದ ಕಾರಣ ಬಗರ್‌ಹುಕುಂ ಸಮಿತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಈವರೆಗೆ ಒಂದೇ ಒಂದು ಹಕ್ಕುಪತ್ರವನ್ನು ಕೊಡಲು ಆಗದಿರುವುದರಿಂದ ಜನರಿಗೆ ಏನೂ ಹೇಳಲಾಗದ ಸ್ಥಿತಿಯಲ್ಲಿದ್ದೇನೆ. ಒಂದು ವಾರದೊಳಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ತಮ್ಮಲ್ಲಿರುವ ಅರ್ಜಿಗಳನ್ನು ಬಗರ್‌ಹುಕುಂ ಸಮಿತಿಗೆ ನೀಡಬೇಕು. ಅತಿ ಹೆಚ್ಚು ಅರ್ಜಿಗಳು ನಮ್ಮ ತಾಲೂಕಿನಲ್ಲೇ ಇದ್ದು, ಕಾನೂನು ಚೌಕಟ್ಟಿನಲ್ಲಿ ಇರುವುದನ್ನು ಮಾತ್ರ ಇತ್ಯರ್ಥಪಡಿಸಿ ಎಂದು ಹೇಳಿದರು.
ಮರಳಿನ ವಿಚಾರಕ್ಕೆ ಸಂಬಂಧಿಸಿ ಅರೆಹಳ್ಳಿ ಗ್ರಾಪಂನಲ್ಲಿ ಬುಧವಾರ ನಡೆದ ಘಟನೆಯಲ್ಲಿ ಸದಸ್ಯರ ಮೇಲೆ ದೂರು ದಾಖಲಿಸಿರುವ ಕ್ರಮವನ್ನು ಶಾಸಕರು ಖಂಡಿಸಿದರು. ಆಶ್ರಯ ಮನೆಗಳಿಗೆ ಮರಳು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳು ಕಳ್ಳ ದಂಧೆ ಮಾಡುವವರ ಬಗ್ಗೆ ಚಕಾರ ಎತ್ತುವುದಿಲ್ಲ. ಪೊಲೀಸರಿಗೆ ತಿಳಿಯದೆ ಸಾಗಣೆ ಸಾಧ್ಯವೇ? ಸರ್ಕಾರಿ ಮನೆಗಳು ಮತ್ತು ಸ್ಥಳೀಯರ ಅಗತ್ಯಗಳಿಗೆ ಮರಳಿನ ಕೊರತೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಚಿವರಿಗೆ ಅರಿವು ಇಲ್ಲ: ಡೀಮ್ಡ್ ಫಾರೆಸ್ಟ್ ವರದಿ ಅವೈಜ್ಞಾನಿಕವಾಗಿದೆ. ಮರಗಳೇ ಇಲ್ಲದ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸದೆ ಎಲ್ಲೋ ಕುಳಿತು ಮಾಡಿದ ಪರಿಣಾಮದಿಂದ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ವರದಿ ಮರುಪರಿಶೀಲನೆ ಅಗತ್ಯ. ತಾಲೂಕಿನ ಮೇಳಿಗೆ ಗ್ರಾಪಂ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಮರಗಳೇ ಇಲ್ಲವಾದರೂ ಆ ಗ್ರಾಮವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಗ್ರಾಮೀಣರ ಬದುಕು ದುಸ್ತರವಾಗಿದೆ. ಹಳ್ಳಿ ಬದುಕಿನ ಬಗ್ಗೆ ಅರಿವಿಲ್ಲದ ಕಂದಾಯ ಸಚಿವ ಹಾಗೂ ಗ್ರಾಮೀಣ ಸಮಸ್ಯೆ ತಿಳಿಯದ ಅರಣ್ಯ ಸಚಿವರಿಗೆ ಇದರ ಗಂಭೀರತೆಯ ಅರಿವು ಇಲ್ಲವಾಗಿದೆ ಎಂದು ಹರಿಹಾಯ್ದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ಡಿವೈಎಸ್ಪಿ ಅರವಿಂದ ಕಲಗುಚ್ಚಿ, ಕಂದಾಯ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳಿದ್ದರು.