ಗೊಂದಲ ನಿವಾರಿಸಿ: ಮತದಾರರಿಗೆ ತೊಂದರೆ ಆಗದಿರಲಿ

Voter ID
Published on

ಸರ್ಕಾರದ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತು ಫಲಾನುಭವಿಗಳು ಒಂದಕ್ಕಿಂತ ಹೆಚ್ಚು ಬಾರಿ ಲಾಭ ಮಾಡಿಕೊಳ್ಳುವುದನ್ನು ತಪ್ಪಿಸಲು ಆಧಾರ್ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಗೊತ್ತಿರುವಂಥದ್ದೇ. ಇಂಥ ಸುಧಾರಣೆಯ ಕ್ರಮಗಳು ಜಾರಿಗೆ ಬರಬೇಕು ಎಂಬುದರಲ್ಲಿ ಎರಡನೇ ಮಾತಿಲ್ಲ. ವ್ಯವಸ್ಥೆ ಶುದ್ಧೀಕರಣ ನಿಟ್ಟಿನಲ್ಲಿ ಈ ಬಗೆಯ ಹೆಜ್ಜೆಗಳನ್ನು ಇರಿಸುವುದು ಅಗತ್ಯವೂ ಹೌದು. ಆದರೆ, ಆಧಾರ್ ಕಾರ್ಡನ್ನು ಮತದಾರರ ಗುರುತಿನ ಚೀಟಿಗೆ (ಎಪಿಕ್ ಕಾರ್ಡ್) ಜೋಡಿಸುವ ಪ್ರಕ್ರಿಯೆ ನನೆಗುದಿಗೆ ಬೀಳುವುದರೊಂದಿಗೆ ಮತದಾರರ ಗೊಂದಲಕ್ಕೂ ಕಾರಣವಾಗಿದೆ. ಮಾಹಿತಿಯ ಕೊರತೆಯಿಂದ ಮುಂದೇನು? ಎಂದು ತಿಳಿಯದಂಥ ಸ್ಥಿತಿ ಜನಸಾಮಾನ್ಯರದ್ದು. ಎರಡು ಕಡೆ ಹೆಸರನ್ನು ಹೊಂದಿರುವ ಮತದಾರರನ್ನು ಪತ್ತೆ ಹಚ್ಚಲು, ಮೃತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಮತ್ತು ಅನ್ಯರಾಜ್ಯದ ಮತದಾರರನ್ನು ಪತ್ತೆ ಹಚ್ಚಲು ಎಪಿಕ್ ಕಾರ್ಡ್ ಮತ್ತು ಆಧಾರ್​ನ್ನು ಲಿಂಕ್ ಮಾಡಲಾಗುತ್ತಿದೆ.

ಚುನಾವಣೆ ಆಯೋಗದ ಪ್ರಯತ್ನದ ಫಲವಾಗಿ, ರಾಜ್ಯದ ಒಟ್ಟು ಮತದಾರರ ಪೈಕಿ ಶೇಕಡ 68 ಮಂದಿ ಆಧಾರ್ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಆದರೆ, ಆಧಾರ್ ಮಾಹಿತಿಯನ್ನು ಬಳಸಿಕೊಂಡು ಮತದಾರರ ಪಟ್ಟಿಯೊಂದಿಗೆ ಸಮೀಕರಿಸಿ ಪರಿಶೀಲಿಸುವ ಕೆಲಸ ನಡೆದಿಲ್ಲ. ಹೀಗಾಗಿ ದೊಡ್ಡ ಪ್ರಮಾಣದ ದಾಖಲೆ ಬಳಕೆಯಾಗದೆ ಹಾಗೇ ಉಳಿದಿದೆ. ಕೇಂದ್ರ ಚುನಾವಣೆ ಆಯೋಗದಿಂದ ಯಾವುದೇ ಸೂಚನೆ ಬಾರದಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ ಎಂಬುದು ರಾಜ್ಯ ಚುನಾವಣಾಧಿಕಾರಿಗಳ ವಿವರಣೆ. ಅಲ್ಲದೆ, ಈ ಪ್ರಕ್ರಿಯೆ ಯಾವಾಗ ಮರುಚಾಲನೆ ಪಡೆಯಲಿದೆ, ಯಾವಾಗ ಪೂರ್ಣಗೊಳ್ಳಲಿದೆ ಎಂಬುದರ ಮಾಹಿತಿಯೂ ಇಲ್ಲ.

ಮೊದಲೇ ನಮ್ಮಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಜನರು ಮತಗಟ್ಟೆಗೆ ಆಗಮಿಸಿ ಮತ ಹಾಕಲು ಹಿಂದೇಟು ಹಾಕುತ್ತಾರೆ. ಹಾಗಾಗಿ, ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣೆ ಆಯೋಗ ಹತ್ತುಹಲವು ಕ್ರಮಗಳನ್ನು ಕೈಗೊಂಡಿದೆ. ಎಪಿಕ್ ಕಾರ್ಡ್ ಮತ್ತು ಆಧಾರ ಜೋಡಣೆ ವಿಷಯದಲ್ಲಿ ಗೊಂದಲ ಮುಂದುವರಿದರೆ, ಚುನಾವಣೆ ಸಮಯದಲ್ಲಿ ಸಾಕಷ್ಟು ಜನರು ಮತದಾನದಿಂದ ದೂರ ಉಳಿಯುವ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ, ಆಧಾರ್-ಮತದಾರರ ಗುರುತಿನ ಚೀಟಿ ಜೋಡಣೆಯ ಅವಶ್ಯಕತೆ, ಅದರಿಂದಾಗುವ ಲಾಭಗಳು ಮತ್ತು ಈ ನಿಟ್ಟಿನಲ್ಲಿ ನಡೆಸಬೇಕಾದ ಪ್ರಕ್ರಿಯೆ ಬಗ್ಗೆ ಆಯೋಗ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಆಂದೋಲನದ ಸ್ವರೂಪದಲ್ಲಿ ಮಾಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶವನ್ನೂ ಇದು ಒಳಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net