9-10ನೇ ತರಗತಿ ಸೋಮವಾರವೇ ಶುರು; ಕ್ಲಾಸ್​ಗೆ ಹದಿನಾರೇ ಮಕ್ಕಳು...

Untitled-1
Published on

ಅಮರಾವತಿ: ಕೋವಿಡ್​-19 ಹಾವಳಿ ಆರಂಭವಾದ ಬಳಿಕ ಕೇಳಿಬಂದ ಎರಡು ಪ್ರಮುಖ ಪ್ರಶ್ನೆಗಳೆಂದರೆ, ಒಂದು- ಈ ಕರೊನಾ ಯಾವಾಗ ಮುಗಿಯುತ್ತೆ?, ಇನ್ನೊಂದು- ಈ ಶಾಲೆಗಳು ಯಾವಾಗ ಶುರು ಆಗುತ್ವೆ? ಮೊದಲನೇ ಪ್ರಶ್ನೆಗಂತೂ ಸದ್ಯಕ್ಕೆ ಉತ್ತರ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಎರಡನೇ ಪ್ರಶ್ನೆಗೆ ಈಗ ಒಂದುಮಟ್ಟಿಗೆ ಉತ್ತರ ಸಿಕ್ಕಿದೆ.

ಹೌದು.. 9 ಮತ್ತು 10ನೇ ತರಗತಿ ಸೋಮವಾರವೇ ಆರಂಭವಾಗಲಿವೆ. ವಿಶೇಷವೆಂದರೆ ತರಗತಿಗೆ ಹದಿನಾರು ಮಕ್ಕಳಷ್ಟೇ ಇರಲಿದ್ದಾರೆ. 2020-21ರ ಶೈಕ್ಷಣಿಕ ವರ್ಷವನ್ನು ಏಪ್ರಿಲ್​ 30ರವರೆಗೂ ವಿಸ್ತರಿಸಿರುವ ಸರ್ಕಾರ, ಎಲ್ಲ ಮುಂಜಾಗ್ರತೆ ಕ್ರಮಗಳೊಂದಿಗೆ 9 ಮತ್ತು 10ನೇ ತರಗತಿಯನ್ನು ನ. 2ರಂದೇ ಆರಂಭಿಸಲು ನಿರ್ಧರಿಸಿದೆ.

ಅಂದಹಾಗೆ ಇಂಥದ್ದೊಂದು ನಿರ್ಧಾರವನ್ನು ಪ್ರಕಟಿಸಿರುವುದು ಆಂಧ್ರಪ್ರದೇಶದ ಶಿಕ್ಷಣ ಇಲಾಖೆ. ಆಂಧ್ರಪ್ರದೇಶದಲ್ಲಿ ಹಂತಹಂತವಾಗಿ ಶಾಲೆಗಳನ್ನು ಮರು ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಆಯುಕ್ತ ವಿ. ಚಿನ್ನ ವೀರಭದ್ರುಡು ನಿರ್ಧಾರ ಪ್ರಕಟಿಸಿದ್ದಾರೆ.

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಸೋಮವಾರದಿಂದ ಮಧ್ಯಾಹ್ನದ ಅವಧಿಗೆ ಶಾಲೆಗೆ ಬರಬಹುದು. ಅವರಿಗೆ ದಿನ ಬಿಟ್ಟು ದಿನ ತರಗತಿ ಇರುತ್ತದೆ. ಹಾಗೆಯೇ 6ರಿಂದ 8ರ ವರೆಗಿನ ತರಗತಿಗಳು ನ. 23ರಂದು ಆರಂಭಗೊಳ್ಳಲಿವೆ. ಒಂದರಿಂದ ಐದನೇ ತರಗತಿ ಡಿಸೆಂಬರ್ 14ರಂದು ಆರಂಭಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ಮಾಸ್ಕ್​ ಧರಿಸುವುದು, ಕೈತೊಳೆದುಕೊಳ್ಳುವುದು, ದೈಹಿಕ ಅಂತರ ಸೇರಿ ಎಲ್ಲ ಮುಂಜಾಗ್ರತಾ ಕ್ರಮಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರಿಗೂ ಕಡ್ಡಾಯ. ಅದಾಗ್ಯೂ ಸದ್ಯ ಮನೆಯಲ್ಲೇ ಇರಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಆ್ಯಪ್​ಗಳ ಮೂಲಕ ಆನ್​ಲೈನ್ ತರಗತಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net