ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವೇಳೆ ಗುಂಪು ಘರ್ಷಣೆ, ಮೂವರಿಗೆ ಗಾಯ; ಒಬ್ಬನ ಸಾವು?

Ram Mandir
Published on

ಗಾಂಧಿಧಾಮ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯವಾದ ರಾಮಮಂದಿರಕ್ಕೆ ಈಗ ದೇಶಾದ್ಯಂತ ದೇಣಿಗೆ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆಂದೇ ರಾಮಮಂದಿರ ನಿಧಿ ಸಮರ್ಪಣಾ ಹೆಸರಿನಲ್ಲಿ ಅಭಿಯಾನ ಕೂಡ ನಡೆಯುತ್ತಿದೆ. ಅದರ ಅಂಗವಾಗಿ ರಾಮಭಕ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಮನೆಮನೆಗೆ ಹೋಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ ರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹ ನಡೆಯುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಪ್ರಕರಣದಲ್ಲಿ ಮೂವರಿಗೆ ತೀವ್ರ ಗಾಯಗಳಾಗಿವೆ. ಮತ್ತೊಂದೆಡೆ ಒಬ್ಬ ಸಾವಿಗೀಡಾಗಿದ್ದು, ಅದಕ್ಕೆ ಇದೇ ಗಲಭೆ ಕಾರಣವೇ ಎಂಬುದು ಇನ್ನೂ ಖಚಿತವಾಗಿಲ್ಲ.

ಗುಜರಾತ್​ನ ಕಛ್​ ಜಿಲ್ಲೆಯ ಗಾಂಧಿಧಾಮ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ದೇಣಿಗೆ ಸಂಗ್ರಹಿಸುತ್ತಿದ್ದಾಗ ಈ ದುರ್ಘಟನೆ ಜರುಗಿದೆ. ಎರಡು ಸಮುದಾಯದ ಗುಂಪುಗಳ ನಡುವೆ ಘರ್ಷಣೆ ಆಗಿದ್ದು, ಕಲ್ಲು ತೂರಾಟ, ಹೊಡೆದಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳೂ ಜರುಗಿವೆ. ಈ ಸಂದರ್ಭದಲ್ಲಿ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಲಭೆಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಬೀಸಿದ್ದಲ್ಲದೆ, ಅಶ್ರುವಾಯು ಸಿಡಿಸಬೇಕಾದ ಅನಿವಾರ್ಯತೆಯೂ ಎದುರಾಗಿತ್ತು. ಮತ್ತೊಂದೆಡೆ ಘರ್ಷಣೆ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಗ್ರಾಮದ ಹೊರಭಾಗದಲ್ಲಿ ಆಟೋದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಗುಂಪೊಂದು ದಾಳಿ ಮಾಡಿ ಚಾಕುವಿನಿಂದ ತಿವಿದಿದ್ದು, ಶವ ಪತ್ತೆಯಾಗಿದೆ. ಈತ ಜಾರ್ಖಂಡ್​ನಿಂದ ಬಂದಿದ್ದು, ತನ್ನ ಮನೆಗೆ ಮರಳುವ ವೇಳೆ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಅದಾಗ್ಯೂ ಈ ಪ್ರಕರಣಕ್ಕೂ ಆತನ ಸಾವಿಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ 3 ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡು ಪ್ರಕರಣ ಎರಡು ಗುಂಪುಗಳಿಗೆ ಸಂಬಂಧಿಸಿದ್ದು, ಇನ್ನೊಂದು ಪ್ರಕರಣ ಸಾವಿಗೆ ಸಂಬಂಧಿಸಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net