

ರಾಮನಗರ: ಭೂವ್ಯಾಜ್ಯ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದ್ದು, ಐವರು ಗಾಯಗೊಂಡು, ಐದು ಬೈಕ್ಗಳು ಸುಟ್ಟು ಕರಕಲಾಗಿವೆ. ಇತರ ವಾಹನಗಳೂ ಜಖಂಗೊಂಡಿವೆ.
ಕಾಂಪೌಂಡ್ ಹಾಕುವ ವಿಚಾರವಾಗಿ ಗ್ರಾಮಸ್ಥರು ಹಾಗೂ ಆರ್ಟ್ ಆಫ್ ಲಿವಿಂಗ್ ಕಡೆಯವರ ನಡುವೆ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಕಾಂಪೌಂಡ್ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಬಳಿ ಈ ಗಲಾಟೆ ನಡೆದಿದ್ದು, ಪರಿಣಾಮವಾಗಿ ಸೆಕ್ಯುರಿಟಿ ರೂಮ್ ಗ್ಲಾಸ್ಗಳು ಪುಡಿಯಾಗಿವೆ. ಮಾತ್ರವಲ್ಲದೆ, ಐವರಿಗೆ ಗಾಯವಾಗಿದ್ದು, 5 ಬೈಕ್ ಹಾಗೂ 4 ಕಾರುಗಳಿಗೆ ಹಾನಿಯಾಗಿವೆ. ಐದು ಬೈಕ್ಗಳು ಸುಟ್ಟು ಕರಕಲಾಗಿವೆ.
36 ಗುಂಟೆ ಜಾಗದಕ್ಕೆ ಆಶ್ರಮದ ಕಡೆಯವರು ಏಕಾಏಕಿ ಕಾಂಪೌಂಡ್ ಹಾಕಲು ತೆರಳಿದ್ದಾಗ ಈ ಗಲಾಟೆ ನಡೆದಿದೆ. ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ರಾಮನಗರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ದೂರು-ಪ್ರತಿದೂರು ದಾಖಲಾಗಿವೆ.