

ಮುಂಬೈ: ಖ್ಯಾತ ಸಿನಿಮಾಟೋಗ್ರಾಫರ್ ನದೀಮ್ ಖಾನ್ ಅವರಿಗೆ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಬುಧವಾರ ಮಿದುಳು ಶಸ್ತ್ರಕ್ರಿಯೆ ನಡೆಸಲಾಗಿದೆ.
ಸೋಮವಾರ ಮೆಟ್ಟಿಲುಗಳಿಂದ ಉರುಳಿ ಬಿದ್ದ ಅವರಿಗೆ ತಲೆ, ಹೆಗಲು ಮತ್ತು ಎದೆಗೆ ತೀವ್ರ ಗಾಯವಾಗಿತ್ತು. ನದೀಮ್ ಖಾನ್ ಅವರು ಹಿಂದಿಯ ಪ್ರಸಿದ್ಧ ಕಾದಂಬರಿಕಾರ ಮತ್ತು ಸಿನಿಮಾ ಸ್ಕ್ರಿಪ್ಟ್‌ರೈಟರ್ ರಾಹಿ ಮಾಸೂಮ್ ರಾಜಾ ಅವರ ಪುತ್ರ.
‘‘ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್ ಇದ್ದ ಕಾರಣ ಮನೆಯಿಂದ ಎಲ್ಲೂ ಹೋಗಿರಲಿಲ್ಲ. ಮೂರು ದಿನಗಳ ಹಿಂದೆ, ಸ್ವಲ್ಪ ಅಡ್ಡಾಡಿಕೊಂಡು ಬರೋಣ ಅಂತ ಮನೆಯಿಂದ ಹೊರಟಿದ್ದೆವು. ಆಗ ನದೀಮ್ ಇದ್ದಕ್ಕಿದ್ದಂತೆ ಆಯ ತಪ್ಪಿ ಮೆಟ್ಟಿಲುಗಳ ಮೇಲಿನಿಂದ ಉರುಳಿ ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದೆವು’’ ಎಂದು ನದೀಮ್ ಪತ್ನಿ, ಗಾಯಕಿಯೂ ಆಗಿರುವ ಪಾರ್ವತಿ ಹೇಳಿದರು.
‘‘ಈಗ ಅವರು ಐಸಿಯುನಲ್ಲಿದ್ದಾರೆ. ಮಿದುಳಿನ ಶಸ್ತ್ರಕ್ರಿಯೆ ಆಗಿದೆ. ಮುಂದಿನ 48 ಗಂಟೆಗಳು ನಿರ್ಣಾಯಕ ಅಂತ ವೈದ್ಯರು ಹೇಳಿದ್ದಾರೆ. ಆರೋಗ್ಯವಾಗಿ ಮನೆಗೆ ಮರಳುತ್ತಾರೆ ಎಂಬ ವಿಶ್ವಾಸವಿದೆ’’ ಎಂದು ಹೇಳಿದರು.
ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನದೀಮ್ ಖಾನ್ ಸಿನೆಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಡಿಸ್ಕೋ ಡಾನ್ಸರ್, ಜಮಾನಾ, ಆಂಧಿ ತೂಫಾನ್, ಆಗ್ ಹಿ ಆಗ್, ಕಿಂಗ್ ಅಂಕಲ್, ಗುನಾಹ್ ಮುಂತಾದವು ಪ್ರಮುಖವಾದವುಗಳು. 1998ರಲ್ಲಿ ತಿರ್ಚಿ ಟೋಪಿವಾಲೆ ಎಂಬ ಒಂದು ಚಿತ್ರವನ್ನು ನಿರ್ದೇಶಿಸಿದ್ದರು. ಅದರಲ್ಲಿ ಚಂಕಿ ಪಾಂಡೆ, ಇಂದರ್ ಕುಮಾರ್, ಮೋನಿಕಾ ಬೇಡಿ ನಟಿಸಿದ್ದರು. (ಏಜೆನ್ಸೀಸ್)