ಸ್ಯಾಮ್ ಅಮೆರಿಕಕ್ಕೆ ತೆರಳಿದ್ದು ಚಿಕಿತ್ಸೆಗಾಗಿ ಅಲ್ವಂತೆ, ಮತ್ತೇಕೆ…?

samantha
Published on

ಆಂಧ್ರಪ್ರದೇಶ: ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸದ್ಯದಲ್ಲೇ ಹಾಲಿವುಡ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ‘ಖುಷಿ’ ಸಿನಿಮಾದ ಶೂಟಿಂಗ್ ಮುಗಿಸಿ ಇತ್ತೀಚೆಗಷ್ಟೇ ಸ್ಯಾಮ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ರಜೆಯನ್ನು ಎಂಜಾಯ್ ಮಾಡಿದ ಅವರು, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಗಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದರು. ನಮಗೆಲ್ಲರಿಗೂ ತಿಳಿದಿರುವಂತೆ ಸಮಂತಾ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದರು. ಸಮಂತಾ ಕೆಲವು ತಿಂಗಳುಗಳ ಕಾಲ ಅಮೆರಿಕದಲ್ಲಿ ಮಯೋಸಿಟಿಸ್ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ವರದಿಗಳೂ ಕೇಳಿಬಂದಿದ್ದವು.

ಸಮಂತಾ ಅಮೆರಿಕದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಮೆರಿಕ ಪ್ರವಾಸದ ಭಾಗವಾಗಿ, ಸಮಂತಾ ಇತ್ತೀಚೆಗೆ ಹಾಲಿವುಡ್ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ ಸ್ಟುಡಿಯೋಗೆ ಭೇಟಿ ನೀಡಿದ್ದು, ಕೆಲವು ಸಂಬಂಧಿತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನ ಸ್ಟ್ರೀಟ್​​ನಲ್ಲಿ ಸುತ್ತಾಟ ನಡೆಸಿದ್ದು, ಸಮಂತಾ ಭೇಟಿ ನೀಡಿದ ಈ ಸ್ಥಳಗಳೆಲ್ಲ ಹಾಲಿವುಡ್​​ಗೆ ಸಂಬಂಧಿತ ಸ್ಥಳಗಳಾದ್ದರಿಂದ ಸಮಂತಾ ಹಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಅಷ್ಟೇ ಅಲ್ಲ, ಹಾಲಿವುಡ್ ಆಫರ್ ಗಳಿಗಾಗಿಯೇ ಸಮಂತಾ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದೆ. ಅವರು ಅನೇಕ ಹಾಲಿವುಡ್ ಸ್ಟುಡಿಯೋಗಳಲ್ಲಿ ಪಾತ್ರಗಳಿಗಾಗಿ ಆಡಿಷನ್ ನೀಡಲಿದ್ದಾರೆ ಎಂದು ವರದಿಗಳಿವೆ. ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಮಂತಾ ಅಮೆರಿಕಾಕ್ಕೆ ಹೋಗಿದ್ದಾರೆಯೇ? ಅಥವಾ ಇದೆಲ್ಲವೂ ರಜೆಯ ಭಾಗವಾಗಿ ನಡೆದಿದೆಯೇ? ಸ್ಪಷ್ಟೀಕರಣದ ಅಗತ್ಯವಿದೆ.

ಇನ್ನೊಂದೆಡೆ ಸಮಂತಾ ಅಭಿನಯದ ‘ಖುಷಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದು, ಸಮಂತಾ ಜೊತೆಗೆ ವಿಜಯ್ ದೇವರಕೊಂಡ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ.

ಇತ್ತೀಚೆಗಷ್ಟೇ ಚಿತ್ರತಂಡದ ಜೊತೆಗೆ ಸಮಂತಾ ಕೂಡ ಪ್ರಚಾರಕ್ಕೆ ಹಾಜರಾಗಿದ್ದರು. ಸದ್ಯ ವಿಜಯ್ ಮತ್ತು ಸಮಂತಾ ಸರಣಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿವೆ. ಅಲ್ಲದೆ, ಟ್ರೇಲರ್ ಕೂಡ ಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟುಹಾಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಮತ್ತು ಸಮಂತಾ ಇಬ್ಬರೂ ಉತ್ತಮ ಪುನರಾಗಮನವನ್ನು ಬಯಸಿದ್ದಾರೆ. ಏಕೆಂದರೆ ಇವರಿಬ್ಬರ ಹಿಂದಿನ 'ಲೈಗರ್' ಮತ್ತು 'ಶಾಕುಂತಲಂ' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಡಿಸಾಸ್ಟರ್ ಆಗಿದ್ದವು. ಇದರೊಂದಿಗೆ ಇವರಿಬ್ಬರ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತು ರೊಮ್ಯಾಂಟಿಕ್ ಲವ್ ಡ್ರಾಮಾ ಚಿತ್ರ 'ಖುಷಿ' ಬಾಕ್ಸ್ ಆಫೀಸ್ ನಲ್ಲಿ ಎಷ್ಟರಮಟ್ಟಿಗೆ ಸಕ್ಸಸ್ ಪಡೆಯುತ್ತೆ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net