ಸಾರ್ವಜನಿಕರಿಂದ ನೂರಾರು ಅಹವಾಲು ಸಲ್ಲಿಕೆ

ಸಾರ್ವಜನಿಕರಿಂದ ನೂರಾರು ಅಹವಾಲು ಸಲ್ಲಿಕೆ
Published on

ಎಚ್.ಡಿ.ಕೋಟೆ: ಜಮೀನಿಗೆ ರಸ್ತೆ ಬಿಡಿಸಿಕೊಡಿ, ಸಾಗುವಳಿ ಪತ್ರ ಒದಗಿಸಿಕೊಡಿ, ನಕಲು ಸಾಗುವಳಿ ರದ್ದು ಮಾಡಿ, ವಾಸದ ಮನೆಗೆ ಹಕ್ಕು ಪತ್ರ ನೀಡಿ, ಸ್ಮಶಾನ ಜಾಗ ಗುರುತು ಮಾಡಿ, ಕುಡಿಯುವ ನೀರು ಒದಗಿಸಿಕೊಡಿ ಸೇರಿದಂತೆ ಹಲವು ಬೇಡಿಕೆಗಳು ಅಧಿಕಾರಿಗಳಿಗೆ ಸಲ್ಲಿಕೆಯಾದವು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದರು.

ನಾಗನಹಳ್ಳಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ರೈತರು ಜಮೀನಿಗೆ ತೆರಳುತ್ತಿದ್ದ ರಾಜಕಾಲುವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಜಮೀನಿಗೆ ತೆರಳಲು ತೊಂದರೆ ಆಗಿದೆ. ಈ ಬಗ್ಗೆ ಹಲವಾರು ಬಾರಿ ತಹಸೀಲ್ದಾರ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಸರ್ವೇ ಮಾಡಿಸಿ ಜಮೀನಿಗೆ ತೆರಳಲು ಅನುವು ಮಾಡಿಕೊಡಬೇಕು ಎಂದರು.

ಸರ್ವೆಯರ್ ಶಂಭುಲಿಂಗಸ್ವಾಮಿ ಮಾತನಾಡಿ, ರಾಜಕಾಲುವೆ ಒಂದು ಮುಕ್ಕಾಲು ಕಿಲೋಮೀಟರ್ ದೂರ ಇದ್ದು, ಇದನ್ನು ಅಳತೆ ಮಾಡಲು ಹೆಚ್ಚು ಸರ್ವೇಯರು ಬೇಕು. ಹಾಗಾಗಿ ಅಳತೆ ಮಾಡಲು ಸಾಧ್ಯ ಆಗಿಲ್ಲ ಎಂದು ಸಭೆ ಗಮನಕ್ಕೆ ತಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಿಎ ಮತ್ತು ಆರ್‌ಐಗಳ ವರದಿ ಆಧಾರದ ಮೇಲೆ ಸಾಗುವಳಿ ಮಂಜೂರು ಮಾಡಿದ್ದೇವೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಸಾಗುವಳಿ ಮಂಜೂರು ಮಾಡಿರುವ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ, ಇಲ್ಲವೋ ಎಂಬುದನ್ನು ವಿಎ ವರದಿ ನೀಡಬೇಕು. ಇದನ್ನು ತಹಸೀಲ್ದಾರ್ ಸೂಕ್ತ ಸಮಯದಲ್ಲಿ ಖಾತೆ ಮಾಡಬೇಕು ಎಂದು ತಿಳಿಸಿದರು.

ಆನಗಟ್ಟಿ ಗ್ರಾಮಕ್ಕೆ ಎರಡು ವರ್ಷದ ಹಿಂದೆ ಸ್ಮಶಾನಕ್ಕೆ ಭೂಮಿ ಮಂಜೂರು ಆಗಿದ್ದು, ಜಾಗ ಗುರುತು ಮಾಡಿಲ್ಲ ಎಂದು ಗ್ರಾಮದ ಪಂಚಾಯಿತಿ ಸದಸ್ಯ ದೇವಯ್ಯ ತಿಳಿಸಿದರು. ಸರ್ಕಾರದ ನಿಯಮದ ಪ್ರಕಾರ ಪ್ರತಿ ಗ್ರಾಮದಲ್ಲಿ ಸ್ಮಶಾನ ಇರಬೇಕು ಎಂಬ ಆದೇಶ ಇದ್ದು ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಆದಿವಾಸಿ ಮುಖಂಡ ವಿಜಯಕುಮಾರ್ ಮಾತನಾಡಿ, ಮುಜಾಫರ್ ಅಸಾದಿ ವರದಿ ಜಾರಿ ಆಗದೆ ಇರುವುದರಿಂದ ಆದಿವಾಸಿಗಳು ಹಲವಾರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಅರಣ್ಯ ಇಲಾಖೆ ಭೂಮಾಪನ ಇಲಾಖೆಯ ಕಾರ್ಯವೈಫಲ್ಯದಿಂದ ಅರಣ್ಯ ವಾಸಿಗಳಿಗೆ ತುಂಬಾ ತೊಂದರೆ ಆಗಿದೆ. ಜಿಲ್ಲಾ ಮಟ್ಟದಲ್ಲಿ ಸಭೆ ಕರೆದು ಸಮಸ್ಯೆ, ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಬಸ್ ವ್ಯವಸ್ಥೆ ಬಗ್ಗೆ ಹಲವಾರು ಜನರು ದೂರು ನೀಡುತ್ತಿದ್ದು, ಈ ಬಗ್ಗೆ ಘಟಕ ವ್ಯವಸ್ಥಾಪಕರು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು. ಮಧ್ಯಾಹ್ನದವರೆಗೆ ಸುಮಾರು 75 ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಕಂಡುಹಿಡಿಯುವ ಕೆಲಸ ಪ್ರಯತ್ನ ಮಾಡಲಾಯಿತು. ತಹಸೀಲ್ದಾರ್ ಶ್ರೀನಿವಾಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಎಸಿಎಫ್ ಬಸವರಾಜ್, ಅಭಿಷೇಕ್, ಜಿಲ್ಲಾ ಭೂಮಾಪನ ಅಧಿಕಾರಿ ರಮ್ಯಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ನಾಗೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಜೀವನ್‌ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕುಮಾರಸ್ವಾಮಿ, ಇಒ ಧರಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net