ಸಿಐಡಿಯಿಂದ ಕೋವಿಡ್ ಹಗರಣ ತನಿಖೆ

Covid
Published on

ಬೆಂಗಳೂರು: ಕೋವಿಡ್ ಬಹುಕೋಟಿ ಹಗರಣದಲ್ಲಿ ಆರೋಪಿತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ರಾಜ್ಯ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಸರ್ಕಾರ ಮಂಗಳವಾರ ಅನುಮತಿ ನೀಡಿದೆ.

ಈ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಜಿ.ಪಿ.ರಘು ಹಾಗೂ ಆರೋಗ್ಯ ಸಂರಕ್ಷಣಾಧಿಕಾರಿ ಎನ್.ಮುನಿರಾಜು ಹೆಸರು ಉಲ್ಲೇಖವಾಗಿತ್ತು. ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯೂ ಒಪ್ಪಿಗೆ ಸೂಚಿಸಿದೆ ಸಿಐಡಿ ಮೂಲಗಳು ಖಚಿತಪಡಿಸಿವೆ.

ಉಪಕರಣ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಅಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಆರೋಪಿಸಿತ್ತು. ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಗೆ ವಹಿಸಲು ನಿರ್ಧರಿಸಿ 2024ರ ಡಿಸೆಂಬರ್‌ನಲ್ಲಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಎಫ್‌ಐಆರ್ ದಾಖಲಿಸಿದಾಗ ವಂಚನೆ ಹಾಗೂ ವಿಶ್ವಾಸದ್ರೋಹದ ಆರೋಪಗಳು ಉಲ್ಲೇಖವಾಗಿದ್ದವು. ಈಗ ಗುತ್ತಿಗೆ ನೀಡಿಕೆಯಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಲಂಚ ಪಡೆದಿರುವ ಶಂಕೆ ವ್ಯಕ್ತವಾಯಿತು. ಹೀಗಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 17 (ಎ) ರಡಿ ತನಿಖೆಗೆ ಸಿಐಡಿ ನಿರ್ಧರಿಸಿತು.

ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಈಗ ಅಧಿಕೃತವಾಗಿ ಅನುಮತಿ ಕೊಟ್ಟಿದೆ ಎಂದು ತಿಳಿದು ಬಂದಿದೆ.

ಉಪಕರಣಗಳ ಖರೀದಿಯಲ್ಲಿ 167 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. 2024ರ ಡಿಸೆಂಬರ್ 13ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ದೂರು ನೀಡಿದ್ದರು. ಇದರನ್ವಯ ಲಾಜ್ ಎಕ್ಸ್‌ಪೊರ್ಟ್ಸ್, ಮುಂಬೈ ಮೂಲದ ಎಂ.ಎಸ್.ಪ್ರೂಡೆಂಟ್ ಮ್ಯಾನೇಜ್ಮೆಂಟ್ ಹಾಗೂ ಚುನಾಯಿತ ಪ್ರತಿನಿಧಿಗಳು ಸೇರಿ ಇತರೆ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net