ಪ್ರಕೃತಿ ಆರಾಧನೆಯ ಚೂಡಿ ಪೂಜೆ

choodi pooje
ಶ್ರಾವಣ ಮಾಸದಲ್ಲಿ ಆಕರ್ಷಕವಾಗಿ ಕಟ್ಟುವ ಚೂಡಿ.
Published on

ಶೃಂಗೇರಿ: ಮಲೆನಾಡಿನಲ್ಲಿ ಶ್ರಾವಣ ಮಾಸವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕೃಷಿ ಚಟುವಟಿಕೆಗಳ ನಡುವೆಯೂ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕರಿಸಿ, ಮನೆಯಂಗಳಕ್ಕೆ ಸಗಣಿ ಸಾರಿಸಿ, ರಂಗೋಲಿ ಇಟ್ಟು ಹೂಗಳನ್ನು ಇಡಲಾಗುತ್ತದೆ. ಮನೆಗೆ ಗೋಮೂತ್ರ ಸಿಂಪಡಿಸಿ ಶ್ರಾವಣ ಶನಿವಾರವನ್ನು ಆಚರಿಸಲಾಗುತ್ತದೆ.

ಶ್ರಾವಣ ಮಾಸದ ಮತ್ತೊಂದು ವಿಶಿಷ್ಟ ಆಚರಣೆ ಚೂಡಿ ಪೂಜೆ. ಶುಕ್ರವಾರ ಮತ್ತು ಭಾನುವಾರ ತುಳಸಿ ಸನ್ನಿಧಿಯಲ್ಲಿ ಕುಟುಂಬದವರೆಲ್ಲರೂ ಸೇರಿ ಚೂಡಿ ಪೂಜೆ ನೆರವೇರಿಸುತ್ತಾರೆ.
ಈ ಮಾಸದಲ್ಲಿ ಈ ಮಾಸದಲ್ಲಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಶ್ರದ್ಧೆಯಿಂದ ಹಬ್ಬವನ್ನ ಆಚರಿಸಲಾಗುತ್ತದೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ಸಿಂಹ ರಾಶಿಗೆ ಆಗಮಿಸುತ್ತಾನೆ. ಈ ಸಂದರ್ಭ ಸೂರ್ಯದೇವನ ಬಿಂಬವನ್ನು ಬರೆದು ಗರಿಕೆ, ಬಣ್ಣಬಣ್ಣದ ಹೂಗಳನ್ನು ಅರ್ಪಿಸುವ ಪದ್ಧತಿ ಇಂದಿಗೂ ಇದೆ.
ಚೂಡಿ ಎಂದರೆ ಅರ್ಥಾತ್ ಗಂಟು ಅಥವಾ ಗುಂಪು. ಗರಿಕೆ ಹುಲ್ಲು, ರಥಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಕಾಗೆಕಣ್ಣು, ಸಾಸಿವೆ ಹೂವುಗಳನ್ನು ಒಗ್ಗೂಡಿಸಿ ಬಾಳೆನಾರಿನಲ್ಲಿ ಕಟ್ಟಿದ್ದರೆ ಅದೇ ಚೂಡಿ.
ಪ್ರಾತಃಕಾಲ ಚೂಡಿಪೂಜೆಗೆ ಪ್ರಶಸ್ತ. ಒಂದುವೇಳೆ ಪೂಜೆ ಮಾಡಲು ಆಗದಿದ್ದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ ಮುಗಿಸಬೇಕು. ಬೆಳಗ್ಗೆ ಮಂಗಳ ಸ್ನಾನದ ಬಳಿಕ ಮುತ್ತೈದೆಯರು ಸಾಂಪ್ರಾದಾಯಿಕ ಶೈಲಿಯ 18 ಮೊಳದ ಸೀರೆಯನ್ನುಟ್ಟು ಬಾವಿ ದಂಡೆಗೆ ಅರಿಶಿಣ, ಕುಂಕುಮ ಹಚ್ಚಿ ಹೂವು ಇಡುತ್ತಾರೆ. ನೀರಿಗೆ ಅರಿಶಿಣ-ಕುಂಕುಮ ಸಮರ್ಪಿಸಿ, ಗಂಗೆಯನ್ನು ಸ್ಮರಿಸಿ ನೀರು ತೆಗೆಯುತ್ತಾರೆ. ಅದನ್ನು ತುಳಸಿಕಟ್ಟೆ ಮುಂದಿಟ್ಟು, ರಂಗೋಲಿ ಹಾಕಿ ಹೊಸ್ತಿಲಿಗೆ ಶೇಡಿ ಬರೆದು ಚೂಡಿ ಪೂಜೆ ಆರಂಭಿಸುತ್ತಾರೆ. ಬಳಿಕ ದೀಪ ಹಚ್ಚಿ ತುಳಸಿಗೆ ನೀರು ಎರೆದು ಗಂಧ ಹಚ್ಚಿ, ವೀಳ್ಯದ ಜತೆ ಚೂಡಿ ಅರ್ಪಿಸಲಾಗುತ್ತದೆ.
ಹಣ್ಣುಕಾಯಿ, ಪಂಚಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ತುಳಸಿಗೆ ಐದು ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿಗೂ ತುಳಸಿ ಹಾಗೂ ಸೂರ್ಯದೇವನಿಗೆ ಅಕ್ಷತೆ ಹಾಕುತ್ತಾರೆ. ಬಳಿಕ ದೇವರ ಕೋಣೆಯಲ್ಲಿ ದೀಪ ಬೆಳಗಿ ಕುಟುಂಬದ ಗೃಹಿಣಿಯರಿಗೆ ಮುತ್ತೈದೆ ಭಾಗ್ಯ ಹಾಗೂ ಕುಟುಂಬದ ಸಂಬಂಧಗಳು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಮನೆಯ ಪ್ರಧಾನ ಹೊಸ್ತಿಲಿಗೆ ಪೂಜೆ ಮಾಡಿ ಚೂಡಿ ಅರ್ಪಿಸಲಾಗುತ್ತದೆ. ದೇವರ ಕೋಣಿಯಲ್ಲಿ ಮನೆ, ಗ್ರಾಮದೇವತೆಗಳ ಸನ್ನಿಧಿಗೂ ಚೂಡಿ ಸಮರ್ಪಿಸಲಾಗುತ್ತದೆ.
ಮುತ್ತೈದೆ ಭಾಗ್ಯಕ್ಕಾಗಿ ಪ್ರಾರ್ಥನೆ: ತೆಂಗಿನ ಮರಕ್ಕೆ ಒಂದು ಚೂಡಿ ಅರ್ಪಿಸಿ, ಮಡಿದ ಹಿರಿಯರಿಗಾಗಿ ಮನೆಯ ಛಾವಣಿ ಮೇಲೆ ಒಂದು ಚೂಡಿ ಇಡಲಾಗುತ್ತದೆ. ಮುತ್ತೈದೆಯಾಗಿ ಮಡಿದರೆ ಎರಡು ಚೂಡಿ ಇಡುವ ಪದ್ಧತಿಯಿದೆ. ಪೂಜಿಸಿದ ಚೂಡಿ ಮುಡಿದ ಬಳಿಕ ಪತಿಗೆ ವೀಳ್ಯವನ್ನು ನೀಡಿ ಆಶೀರ್ವಾದ ಪಡೆಯುತ್ತಾರೆ. ಸಂಬಂಧಿಕರಿಗೆ, ನೆರೆಹೊರೆಯರಿಗೆ ಚೂಡಿ ನೀಡುತ್ತಾರೆ. ಸಂಬಂಧಿಕರು ಬೇರೆ ಊರುಗಳಲ್ಲಿದ್ದರೆ ಅಂಚೆ ಮೂಲಕ ಚೂಡಿ ಕಳುಹಿಸುವ ಪದ್ಧತಿ ಇಂದಿಗೂ ಇದೆ.
ಶ್ರಾವಣ ಮಾಸದಲ್ಲಿ ಚೂಡಿ ಪೂಜೆ ಅತ್ಯಂತ ಮಹತ್ವ ಪಡೆದಿದೆ. ಮದುವೆಯಾದ ಮೊದಲ ವರ್ಷ ವಧುವಿನ ಅತ್ತೆಮನೆ, ತವರುಮನೆ ಎರಡೂ ಕಡೆ ಚೂಡಿ ಪೂಜೆಯನ್ನು ಸಂಭ್ರಮದಿಂದ ಮಾಡುತ್ತಾರೆ. ಆಧ್ಯಾತ್ಮಿಕ ಮೌಲ್ಯಗಳ ಸಂಕೇತ. ಸಂಬಂಧಗಳ ಬೆಸುಗೆಯನ್ನು ಕಟ್ಟುವ ಶ್ರಾವಣ ಮಾಸದ ಈ ಪೂಜೆ ಕೌಟುಂಬಿಕ ಸಾಮರಸ್ಯ ಗಟ್ಟಿಗೊಳಿಸುತ್ತದೆ ಎನ್ನುತ್ತಾರೆ ಗೃಹಿಣಿ ಜ್ಯೋತಿ ಕಾಮತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net