ಅಮೆರಿಕದಲ್ಲಿದ್ದೇ ಬಲಾಢ್ಯ ರಾಷ್ಟ್ರಗಳ ಕಂಪ್ಯೂಟರ್​ ಜಾಲ ಹ್ಯಾಕ್​ ಮಾಡಿದ ಚೀನಿಯರು..! ಕರೊನಾ ಲಸಿಕೆ ಮಾಹಿತಿಯೇ ಗುರಿ

hackers
Published on

ವಾಷಿಂಗ್ಟನ್​: ರಷ್ಯಾದ ಸೈಬರ್​ ಬೇಹುಗಾರರು ಅಥವಾ ಹ್ಯಾಕರ್​ಗಳು ಕರೊನಾ ಲಸಿಕೆ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ಮೇಲೆ ಆನ್​​ಲೈನ್​ ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗಷ್ಟೇ ಕೇಳಿ ಬಂದಿತ್ತು. ಇದರ ನಡುವೆ, ಇದೇ ಆರೋಪದಲ್ಲಿ ಇಬ್ಬರು ಚೀನಿ ಹ್ಯಾಕರ್​ಗಳಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಿಕ್ಷೆ ವಿಧಿಸಿದೆ.

ವಿವಿಧ ದೇಶಗಳಲ್ಲಿ ಕರೊನಾ ಲಸಿಕೆ ಸಂಶೋಧನೆ ನಡೆಸುತ್ತಿರುವ ಬಯೋಟೆಕ್​ ಕಂಪನಿಗಳು ಸೇರಿ ವಹಿವಾಟು, ಗೌಪ್ಯ ಮಾಹಿತಿಗಳನ್ನು ಕದಿಯುತ್ತಿದ್ದ ಆರೋಪದಲ್ಲಿ ಲೀ ಕ್ಸಿಆಯು (34) ಹಾಗೂ ಡಾಂಗ್​ ಜಿಯಾಜಿ (33) ಎಂಬುವರಿಗೆ ಶಿಕ್ಷೆ ವಿಧಿಸಿದೆ.

ಅಮೆರಿಕ ಗೃಹ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕಳೆದ ಹತ್ತು ವರ್ಷಗಳಿಂದ ಇಂಥ ಹ್ಯಾಕಿಂಗ್​ ಮಾಡುತ್ತಿದ್ದರು ಎನ್ನಲಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಜಪಾನ್​, ಲಿಥುವೇನಿಯಾ, ನೆದರ್ಲೆಂಡ್​ ಸ್ಪೇನ್​, ದಕ್ಷಿಣ ಕೊರಿಯಾ, ಸ್ವೀಡನ್​ ಹಾಗೂ ಬ್ರಿಟನ್​ ಸಂಸ್ಥೆಗಳ ಮೇಲೆ ಆನ್​ಲೈನ್​ ದಾಳಿ ನಡೆಸಿದ್ದರು.

ಈ ಮೂಲಕ ಚೀನಾದ ನಿಜವಾದ ಮುಖವಾಡ ಬಯಲಾಗಿದೆ. ಯಾವುದನ್ನು ಸೃಷ್ಟಿಸಲಾಗುವುದಿಲ್ಲವೋ ಅದನ್ನು ಕದಿಯುತ್ತಾರೆ. ಯಾವುದನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಮೌನವಾಗಿಸುತ್ತಾರೆ ಎಂದು ಚೀನಾ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಎಫ್​ಬಿಐ ಸಹಾಯಕ ನಿರ್ದೇಶಕ ಡೇವಿಡ್​ ಬೌಡಿಚ್​ ಕಿಡಿ ಕಾರಿದ್ದಾರೆ.

ಚೀನಾದ ಈ ಕೃತ್ಯ ಅಮೆರಿಕಕ್ಕೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ನಿಯಮ ಪಾಲಿಸುವ, ನ್ಯಾಯಪರವಾಗಿರುವ ಯಾವುದೇ ರಾಷ್ಟ್ರಕ್ಕೂ ಕಂಟಕವಾಗಿ ಪರಿಣಮಿಸಿದೆ ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net