VIDEO| ಪರಸ್ತ್ರೀ ಜತೆ ಸಿಕ್ಕಿಬಿದ್ದವನಿಗೆ ಘೋರ ಶಿಕ್ಷೆ : ವೈರಲ್​ ವಿಡಿಯೋದಲ್ಲಿದೆ ಭಯಾನಕ ದೃಶ್ಯ!

Punishment 1
Published on

ಬೀಜಿಂಗ್​: ಪತ್ನಿಗೆ ವಂಚನೆ ಮಾಡಿ ಬೇರೆ ಮಹಿಳೆಯೊಂದಿಗಿದ್ದ ವ್ಯಕ್ತಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದು ಆತನನ್ನು ಪಂಜರಲ್ಲಿ ಕಟ್ಟಿಹಾಕಿ ನದಿಯ ನೀರಿನಲ್ಲಿ ಮುಳುಗಿಸಿರುವ ಆತಂಕಕಾರಿ ಘಟನೆ ಚೀನಾದಲ್ಲಿ ನಡೆದಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಣೆಯೊಂದರಲ್ಲಿ ಮಹಿಳೆಯೊಬ್ಬಳ ಜತೆ ಅರೆಬೆತ್ತಲೆ ಅವತಾರದಲ್ಲಿ ಸಿಕ್ಕವನನ್ನು ಪಂಜರದಲ್ಲಿಟ್ಟು ಹಗ್ಗದಿಂದ ಬಿಗಿದು ಜನರ ಗುಂಪೊಂದು ಆತನನ್ನು ಹೊತ್ತುಕೊಂಡು ಹೋಗಿ ನದಿ ನೀರಿನಲ್ಲಿ ಮುಳುಗಿಸಿರುವ ದೃಶ್ಯ ವಿಡಿಯೋದಲ್ಲಿದೆ.

ಈ ಶಿಕ್ಷೆಯ ವಿಧಾನವನ್ನು ಸ್ಥಳೀಯವಾಗಿ "ಹಂದಿ ಪಂಜರದಲ್ಲಿ ಅದ್ದಿ" ಎಂದು ಕರೆಯಲಾಗುತ್ತದೆ. ಇದು ಚೀನಾದಲ್ಲಿ ಹೆಚ್ಚಾಗಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿತ್ತು. ಇದೊಂದು ಅನಧಿಕೃತ ಶಿಕ್ಷೆ ಆಗಿದ್ದು, ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ವ್ಯಕ್ತಿಯನ್ನ ಸಾಯುವರೆಗೂ ನೀರಿನಲ್ಲಿ ಬಿಡಲಾಗುತ್ತದೆ. ಸಂತ್ರಸ್ತ ವ್ಯಕ್ತಿಯ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ. ಪ್ರಕರಣ ದಾಖಲಿಸಿ, ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಅಂದಹಾಗೆ ಈ ಘಟನೆ ದಕ್ಷಿಣ ಚೀನಾದ ಮೋಮಿಂಗ್​ ನಗರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಬಿದಿರಿನ ಪಂಜರದಲ್ಲಿ ವ್ಯಕ್ತಿಯನ್ನು ಕಟ್ಟಿ ಗುಂಪೊಂದು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು ಈ ಶಿಕ್ಷೆಯ ಅರ್ಥ ಇಂತಹ ನೀಚ ಕೆಲಸಗಳನ್ನು ಮಾಡುವವರು ಹಂದಿ ಮತ್ತು ನಾಯಿಗಿಂತ ಲೇಸಂತೆ. ಆದರೆ, ಇಂತಹ ಶಿಕ್ಷೆಗೆ ಚೀನಾ ಸರ್ಕಾರ ಎಂದಿಗೂ ಕಾನೂನಿನಲ್ಲಿ ಅನುಮೋದನೆ ನೀಡಿಲ್ಲ. ಹೀಗಾಗಿ ಇತ್ತೀಚೆಗೆ ಇಂತಹ ಶಿಕ್ಷೆ ಸಂಪೂರ್ಣ ಅಳಿಸಿಹೋಗಿದೆ. ಆದರೆ, ಚೀನಾದ ಕೆಲ ಗ್ರಾಮೀಣ ಭಾಗಗಳಲ್ಲಿ ಇನ್ನೂ ಜೀವಂತವಿದೆ. ಸದ್ಯ ಪ್ರಕರಣ ಭಾರಿ ಚರ್ಚೆಯಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net