ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!

POK
Published on

ನವದೆಹಲಿ: ಲಡಾಕ್​ನಲ್ಲಿ ಅತಿಕ್ರಮಣ ತೋರಿದ ಚೀನಾದ ಗುರಿ ಪಿಒಕೆಯ ಗಿಲ್ಗಿಟ್-ಬಾಲ್ಟಿಸ್ತಾನ. ಅದನ್ನು ವಶಪಡಿಸಿಕೊಳ್ಳು ಚೀನಾ ಹವಣಿಸುತ್ತಿದ್ದು, ಪಾಕಿಸ್ತಾನದ ಐಎಸ್​ಐ ಮತ್ತು ಪ್ರತ್ಯೇಕತಾವಾದಿಗಳನ್ನು ದಾಳಗಳನ್ನಾಗಿ ಬಳಸುತ್ತಿದೆ ಎಂಬ ಅಂಶವೀಗ ಬಹಿರಂಗವಾಗಿದೆ.

ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್​(ಸಿಪಿಇಸಿ) ಮೂಲಕ ಪಾಕ್ ಮೇಲೆ ಒತ್ತಡ ಹೇರುತ್ತಿರುವ ಚೀನಾ, ಪಿಒಕೆ ಪ್ರದೇಶವನ್ನು ಸೆಮಿ ಆಟೋನೋಮಸ್​ ಪ್ರಾಂತ್ಯವನ್ನಾಗಿಸುವುದಕ್ಕೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಗಿಲ್ಗಿಟ್​-ಬಾಲ್ಟಿಸ್ತಾನ ಪ್ರದೇಶದ ಕುರಿತು ಪಾಕಿಸ್ತಾನ ತಣ್ಣಗಾಗಲು ಮತ್ತು ಭಾರತದ ವಿರುದ್ಧ ಭಯೋತ್ಪಾದಕರ ಆಕ್ರಮಣ ಕಡಿಮೆಯಾಗಿರುವುದರ ಹಿಂದೆ ಬಹುದೊಡ್ಡ ತಂತ್ರಗಾರಿಕೆ ಇದೆ. ಈ ತಂತ್ರವನ್ನು ಚೀನಾ ಹೆಣೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ತಿಳಿಸಿವೆ.

ಸಿಪಿಇಸಿ 3,218 ಕಿಲೋ ಮೀಟರ್​ನ ಪ್ರಾಜೆಕ್ಟ್​ ಆಗಿದ್ದು, ಇದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನ ಕನಸಿನ ಯೋಜನೆಯಾಗಿದೆ. ಇದಕ್ಕಾಗಿ ಚೀನಾ 19 ಶತಕೋಟಿ ಡಾಲರ್ ಹಣವನನು ವಿವಾದಿತ ಪ್ರದೇಶದ ಕಾರಿಡಾರ್​ಗೆ ಹೂಡಿಕೆ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಚೀನಾ ಹಸ್ತಕ್ಷೇಪ ಹೆಚ್ಚಾಗಿರುವುದನ್ನೂ ಕಾಣಬಹುದು. ಇದರಲ್ಲಿ ಚೀನಾದ ದೀರ್ಘಾವಧಿಯ ಚಿಂತನೆಗಳನ್ನೂ ಗಮನಿಸಬಹುದು.

ಕಳೆದ ಆಗಸ್ಟ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಇಡೀ ಭೌಗೋಳಿಕ ಪ್ರದೇಶವನ್ನು ಕೇಂದ್ರ ಸರ್ಕಾರದ ಅಧೀನ ತೆಗೆದುಕೊಂಡಿತ್ತು. ಅಲ್ಲದೆ, ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶ ತನ್ನದೆಂದು ಪದೇಪದೆ ಹೇಳಿದ್ದಲ್ಲದೆ, ಭಾರತದ ಭೌಗೋಳಿಕ ಸಾರ್ವಭೌಮತೆಯನ್ನು ಕೇಂದ್ರ ಸರ್ಕಾರ ಎತ್ತಿಹಿಡಿಯಲು ಪ್ರಯತ್ನಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net