More

    ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್​ಒ ವರಸೆ

    ನವದೆಹಲಿ: ಕರೊನಾ ವೈರಸ್​ ಕೋವಿಡ್ 19 ಸೋಂಕಿನ ಕುರಿತಾಗಿ ಆರಂಭಿಕ ಹಂತದಲ್ಲೇ ಚೀನಾ ಮಾಹಿತಿ ನೀಡಿರಲಿಲ್ಲ ಎಂದು ಮಾಹಿತಿ ತಿದ್ದುಪಡಿ ಮಾಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ ) ತನ್ನ ವರಸೆಯನ್ನು ಸ್ವಲ್ಪ ಬದಲಾಯಿಸಿಕೊಂಡಿದೆ.
    ಆರಂಭಿಕ ಹಂತದಲ್ಲಿ ಡಬ್ಲ್ಯುಎಚ್​ಒ ವರದಿ ಗಮನಿಸಿದರೆ ಅಲ್ಲಿ ಅದು, ಚೀನಾ ಮಾಹಿತಿ ಒದಗಿಸಿತ್ತು ಎಂದೇ ಹೇಳುತ್ತ ಬಂದಿತ್ತು. ಆದರೆ, ಹೊಸ ಮಾಹಿತಿಯಲ್ಲಾದ ಪರಿಷ್ಕರಣೆ ಎಲ್ಲರನ್ನೂ ಚಿಂತೆಗೀಡು ಮಾಡುವಂತೆ ಇದೆ. ಅಮೆರಿಕದ ವಾಷಿಂಗ್ಟನ್ ಎಕ್ಸಾಮಿನರ್ ಎಂಬ ವಾರಪತ್ರಿಕೆ ಈ ವಿಷಯದತ್ತ ಜಗತ್ತಿನ ಗಮನಸೆಳೆದಿದೆ.

    ಡಬ್ಲ್ಯುಎಚ್​ಒ ವೆಬ್​ಸೈಟ್​ನಲ್ಲಿ ಬದಲಾಗಿದ್ದೇನು?
    ಕರೊನಾ ವೈರಸ್ ಸೋಂಕು ಆರಂಭಿಕ ಹಂತದಲ್ಲಿ ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರಕ್ಕೆ ಮಾತ್ರ ಸೀಮಿತವಾಗಿತ್ತು ಎಂಬ ಟೈಮ್​ಲೈನ್​ ಅನ್ನು ಡಬ್ಲ್ಯುಎಚ್​ಒ ಸೈಟ್​ ನಿರ್ವಹಿಸುತ್ತ ಬಂದಿದೆ.

    ಟೈಮ್​ಲೈನ್​ನಲ್ಲಿರುವ ಹಳೆಯ ಮಾಹಿತಿ ಹೀಗಿದೆ: ಡಿಸೆಂಬರ್ 31, 2019 – ಚೀನಾದ ವುಹಾನ್​ ಮುನ್ಸಿಪಲ್ ಹೆಲ್ತ್ ಕಮಿಷನ್​ ನೀಡಿದ ಮಾಹಿತಿ ಪ್ರಕಾರ ಹುಬೈ ಪ್ರಾಂತ್ಯದ ವುಹಾನ್​ನಲ್ಲಿ ಒಂದಷ್ಟು ನ್ಯುಮೋನಿಯಾ ಕೇಸ್​ಗಳು ಕಂಡುಬಂದಿವೆ. ನಂತರದಲ್ಲಿ ಇದು ನೋವೆಲ್ ಕರೊನಾ ವೈರಸ್​ ಸೋಂಕು ಎಂಬುದನ್ನು ದೃಢೀಕರಿಸಲಾಗಿದೆ.

    ಪರಿಷ್ಕೃತ ಮಾಹಿತಿ ಹೀಗಿದೆ: ಡಿಸೆಂಬರ್ 31, 2019 – ಪೀಪಲ್ಸ್ ರಿಪಬ್ಲಿಕ್ ಆಫ್​ ಚೀನಾದಲ್ಲಿನ ಡಬ್ಲ್ಯುಎಚ್​ಒ ಕಂಟ್ರಿ ಆಫೀಸ್​ ಅಲ್ಲಿ ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್​ ನೀಡಿದ ಮಾಧ್ಯಮ ಹೇಳಿಕೆಯನ್ನು ಅವರ ವೆಬ್​ಸೈಟ್​ನಿಂದ ಸಂಗ್ರಹಿಸಿದೆ. ಅದರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್​ ಚೀನಾದ ವುಹಾನ್​ನಲ್ಲಿ “ವೈರಲ್ ನ್ಯುಮೋನಿಯಾ” ಕೇಸ್​ಗಳು ಕಂಡುಬಂದಿವೆ ಎಂದಿತ್ತು.

    ಪರಿಣಾಮ ಏನು?: ಚೀನಾದಿಂದ ಹೊರಬಿದ್ದಿರುವ ಕರೊನಾ ವೈರಸ್​ ಸಾಂಕ್ರಾಮಿಕ ಜಗತ್ತನ್ನು ವ್ಯಾಪಿಸಿದ್ದು, ಚೀನಾ ಬಗ್ಗೆ ಅನೇಕ ಸಂದೇಹಗಳನ್ನು ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಚೀನಾ ಮತ್ತು ಡಬ್ಲ್ಯುಎಚ್​ಒ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದರು. ಅಲ್ಲದೆ, ಡಬ್ಲ್ಯುಎಚ್​ಒದ ಚೀನಾ ಪರ ಮೃದು ನೀತಿಯನ್ನು ಪ್ರಶ್ನಿಸಿದ್ದರಲ್ಲದೆ, ಅನುದಾನವನ್ನು ತಡೆಹಿಡಿದಿದ್ದರು.

    ಈಗ ಡಬ್ಲ್ಯುಎಚ್​ಒ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ಪರಿಷ್ಕರಿಸಿರುವುದರಿಂದ ಅಮೆರಿಕ ಅಧ್ಯಕ್ಷರ ಹೇಳಿಕೆ ಮತ್ತು ಇತರೆ ಪಿತೂರಿ ಸಿದ್ಧಾಂತಗಳ ವಾದಗಳಿಗೆ ಪುಷ್ಟಿ ಸಿಕ್ಕಂತಾಗಿದೆ. ಜಾಗತಿಕವಾಗಿ ಈಗಾಗಲೇ ಎಲ್ಲರ ವಿರೋಧ ಎದುರಿಸುತ್ತಿರುವ ಚೀನಾಕ್ಕೆ ಇದು ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts