

ಬೀಜಿಂಗ್: ಇಡೀ ಜಗತ್ತಿಗೆ ಮಾರಕ ಕರೊನಾ ವೈರಸ್ ಹಬ್ಬಿಸಿ, ತನ್ನ ದೇಶದೊಳಗೆ ಎಲ್ಲವನ್ನೂ ಸರಿಪಡಿಸಿಕೊಂಡು ಬೀಗುತ್ತಿರುವ ಚೀನಾ ವಿರುದ್ಧ ತನ್ನ ಪ್ರಜೆಗಳೇ ಇದೀಗ ತಿರುಗಿಬಿದ್ದಿದ್ದಾರೆ. ಸ್ಮಾರ್ಟ್ಫೋನ್ ಆ್ಯಪ್ ಮೂಲಕ ತನ್ನ ಪ್ರಜೆಗಳ ಮೇಲೆ ನಿಗಾ ಇಡಲು ಮುಂದಾಗಿರುವ ಚೀನಾ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ಕೇಳಿಬಂದಿದೆ.
ಪೂರ್ವ ಚೀನಾದ ಪ್ರಮುಖ ನಗರ ಹ್ಯಾಂಗ್ಝೌನ ಆಡಳಿತವು ತನ್ನ ರಾಜ್ಯದ ಪ್ರಜೆಗಳ ಹವ್ಯಾಸ ಸೇರಿದಂತೆ ಜೀವನಶೈಲಿಯ ಮೇಲೆ ಕಣ್ಣಿಡಲು ಶಾಶ್ವತ ಮೊಬೈಲ್ ಪ್ರೋಗ್ರಾಮ್ ಅನ್ನು ಬಳಸಲು ಪ್ರಸ್ತಾವನೆಯನ್ನು ಸಲ್ಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಆಡಳಿತ ಹೇಳುವಾಗೆ, ಹೊಸ ಹೆಲ್ತ್ ಆ್ಯಪ್ ಮೂಲಕ ಪ್ರಜೆಗಳು ವೈದ್ಯಕೀಯ ದಾಖಲೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಶೇರ್ ಮಾಡಲಾಗುತ್ತದೆ. ಇದರಿಂದ ಆರೋಗ್ಯ ಸ್ಥಿತಿಯ ಬಗ್ಗೆ ಎಚ್ಚರಿಕೆ ವಹಿಸಲು ಸಹಾಯವಾಗಲಿದೆ ಎಂದು ಸ್ಪಷ್ಟನೆ ನೀಡಿದೆ. ಅಂದಹಾಗೆ ಹ್ಯಾಂಗ್ಝೌ ನಗರದಲ್ಲಿ 10 ಮಿಲಿಯನ್ (ಒಂದು ಕೋಟಿ) ಜನರು ವಾಸವಿದ್ದಾರೆ.
ಈ ಹೊಸ ಯೋಜನೆ ಸುದ್ದಿಯಾಗುತ್ತಿದ್ದಂತೆ ಚೀನಾದಲ್ಲಿ ಕಿಡಿಹೊತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳ ಸುರಿಮಳೆ ಹರಿದುಬರುತ್ತಿದೆ. ಕೆಲವರು ತಮ್ಮ ವೈಯಕ್ತಿಯ ಡಾಟಾ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಕರೊನಾ ಹೆಸರಿನಲ್ಲಿ ಖಾಸಗಿತನದ ಉಲ್ಲಂಘನೆ ಮಾಡಲು ಹೊರಟಿದೆ ಎಂದು ಆಪಾದಿಸಿದ್ದಾರೆ.
ಈಗಾಗಲೇ ಕೋವಿಡ್-19 ತಡೆಯುವ ಉದ್ದೇಶದಿಂದ ಕಲರ್ ಕೋಡೆಡ್ ಆ್ಯಪ್ ಅನ್ನು ಹ್ಯಾಂಗ್ಝೌ ನಗರ ಫೆಬ್ರವರಿಯಲ್ಲಿ ಪರಿಚಯಿಸಿದ್ದು, ಎಲ್ಲರೂ ಬಳಸುವಂತೆ ಕಡ್ಡಾಯ ಪಡಿಸಿದೆ. ಸಾರ್ವಜನಿಕ ಸ್ಥಳ ಹಾಗೂ ಸಾರಿಗೆ ವ್ಯವಸ್ಥೆಯನ್ನು ಬಳಸುವ ಮುನ್ನ ತಮಗೆ ಕರೊನಾ ವೈರಸ್ ಇಲ್ಲ ಎಂಬುದನ್ನು ಆ್ಯಪ್ ಮೂಲಕ ಸಾಬೀತುಪಡಿಸ ಬೇಕಾಗಿದೆ.
ಸದ್ಯ ಬಳಕೆಯಲ್ಲಿರುವ ಆ್ಯಪ್ ತಾತ್ಕಾಲಿಕವಷ್ಟೇ. ಇದೀಗ ಶಾಶ್ವತ ಆ್ಯಪ್ಗೆ ಸ್ಥಳೀಯ ಆಡಳಿತ ಚಿಂತನೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್)