

ಬೀಜಿಂಗ್: ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್ ಹುಟ್ಟಿಗೆ ಚೀನಾದ ಪ್ರಾಣಿ ಮಾರುಕಟ್ಟೆಯೇ ಕಾರಣ ಎಂದು ಹೇಳಲಾಗಿದೆ. ಅದರಲ್ಲು ಚೀನಿಯರ ಆಹಾರ ಪದ್ದತಿ ವಿಶ್ವದಲ್ಲೇ ತುಂಬಾ ವಿಭಿನ್ನ ಹಾಗೂ ವಿಚಿತ್ರವಾಗಿದೆ. ಹೀಗಾಗಿ ಕೆಟ್ಟ ಮೇಲೆ ಬುದ್ದಿ ಬಂತೂ ಎಂಬಂತೆ ಚೀನಾ ಸರ್ಕಾರ ಜೀವಂತ ಪ್ರಾಣಿ ಮಾರುಕಟ್ಟೆಗಳಿಂದಲೇ ವೈರಸ್ ಹರಡಿದೆ ಎಂಬುದನ್ನು ಒಪ್ಪಿಕೊಂಡಿದ್ದು, ಇದೀಗ ಅದರ ಸುಧಾರಣಾ ಕ್ರಮಗಳಿಗೆ ಒತ್ತು ನೀಡುವುದಾಗಿ ತಿಳಿಸಿದೆ.
ಚೀನಾ ರಾಜಧಾನಿ ಬೀಜಿಂಗ್ ಮಾರುಕಟ್ಟೆ ಕಾವಲು ಸಮಿತಿಯು ಒಂದು ನಿರ್ಧಾರಕ್ಕೆ ಬಂದಿದ್ದು, ವೆಟ್ ಮಾರ್ಕೇಟ್ ಅಥವಾ ಸಜೀವ ಮಾರುಕಟ್ಟೆಗಳಲ್ಲಿ ಕೋಳಿ, ಬಾತುಕೋಳಿ ಸೇರಿದಂತೆ ನೇರ ಕೃಷಿ ಪ್ರಾಣಿಗಳನ್ನು ಕೊಲ್ಲುವುದಾಗಲಿ ಮಾರಾಟ ಮಾಡುವುದಾಗಲಿ ಮಾಡಬಾರದೆಂಬ ನಿಷೇಧವನ್ನು ಹೇರಿದೆ. ಕೋಳಿ ವ್ಯವಹಾರವನ್ನು ಸಂಪೂರ್ಣ ಹೊರಗಿಡಲು ಚೀನಾ ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ಸಾಧ್ಯವಾದಾಗಲೆಲ್ಲಾ ಕೇಂದ್ರೀಕೃತ ಉತ್ಪಾದನಾ ಮಾರ್ಗಗಳು ಅನುಸರಿಸಲು ನಗರಗಳಿಗೆ ಪ್ರೋತ್ಸಾಹಿಸುವ ಮೂಲಕ ಸಾಂಪ್ರದಾಯಿಕ ವ್ಯವಹಾರಗಳನ್ನು ಹಂತ ಹಂತವಾಗಿ ಬದಿಗೆ ಸರಿಸಲಾಗುವುದು. ಕೋವಿಡ್-19 ಸಮಯದಲ್ಲಿ ಸಾರ್ವಜನಿಕ ಆಹಾರ ಭದ್ರತಾ ದೃಷ್ಟಿಯಿಂದ ಸಜೀವ ಮಾರುಕಟ್ಟೆಗಳಿಂದ ಕೃಷಿ ಅಥವಾ ಸಾಕು ಪ್ರಾಣಿಗಳ ಮಾರಾಟವನ್ನು ಹೊರ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇದರೊಂದಿಗೆ ಇನ್ನು ಮುಂದೆ ಕಾಡು ಪ್ರಾಣಿಗಳ ಮಾರಾಟ ಹಾಗೂ ತಿನ್ನುವುದರ ಮೇಲೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವುದಾಗಿ ಚೀನಾದ ಮಾರುಕಟ್ಟೆ ನಿಯಂತ್ರಣಕ್ಕಾಗಿ ಇರುವ ರಾಜ್ಯಾಡಳಿತ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದೆ. ಇನ್ನು ನೇರ ಕೋಳಿ ವ್ಯವಹಾರವನ್ನು ಕ್ರಮೇಣವಾಗಿ ನಿಲ್ಲಿಸಿ ಎಂದು ಮಾರುಕಟ್ಟೆ ಪರಿಶೀಲನೆ ತಜ್ಞ ಚೆನ್ ಕ್ಷು ಸಲಹೆ ನೀಡಿದ್ದಾರೆ. ಕೃಷಿ ಮಾರುಕಟ್ಟೆಗಳನ್ನು ಪರಿಶೀಲಿಸಿ, ಸಂಭಾವ್ಯ ಸುರಕ್ಷತಾ ಅಪಾಯಗಳನ್ನು ಗುರುತಿಸಲು ಚೆನ್ ಎಲ್ಲಾ ನಗರಗಳನ್ನು ಒತ್ತಾಯಿಸಿದ್ದಾರೆ.
ಇನ್ನು ಕರೊನಾ ವೈರಸ್ ದೇಶದ ಸಜೀವ ಮಾರುಕಟ್ಟೆಗಳ ಸಮಸ್ಯೆಯನ್ನು ಜಾಗತಿಕವಾಗಿ ಬಹಿರಂಗಪಡಿಸಿದೆ ಎಂಬುದನ್ನು ಚೀನಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹೊಸದಾದ ಕರೊನಾ ಸೋಂಕು ಬಜಾರ್, ಸಜೀವ ಮಾರುಕಟ್ಟೆ, ಸಗಟು ಮಾರುಕಟ್ಟೆ ಸೇರಿದಂತೆ ಸಾವಿರಾರು ಕೃಷಿ ಉತ್ಪನ್ನ ಮಾರುಕಟ್ಟೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿನ ಸಮಸ್ಯೆಯನ್ನು ಜಗತ್ತಿಗೆ ಎತ್ತಿ ತೋರಿಸಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಕರೊನಾ ವೈರಸ್ ಮಹಾಮಾರಿಗೆ ಜಾಗತಿಕವಾಗಿ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಚೀನಾದ ಹುಬೇ ಪ್ರಾಂತ್ಯದಲ್ಲಿರು ವುಹಾನ್ ನಗರದ ಸಮುದ್ರ ಆಹಾರ ಸಗಟು ಮಾರುಕಟ್ಟೆಯಲ್ಲಿ ಮೊದಲು ಇದು ಸ್ಪೋಟಗೊಂಡಿತು ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)