ಕರೊನಾ ಲಸಿಕೆ ಅನಾವರಣಗೊಳಿಸಿದ ಚೀನಾ; ಅಂತಿಮ ಹಂತದ ಫಲಿತಾಂಶದ ಬಳಿಕ ಬಳಕೆಗೆ ಮುಕ್ತ

China- corona vaccine
Published on

ಬೀಜಿಂಗ್: ಕರೊನಾ ಮೊದಲಿಗೆ ಕಾಣಿಸಿಕೊಂಡ ಚೀನಾದಲ್ಲಿ ಆ ವೈರಸ್​ ನಿಗ್ರಹಕ್ಕೆ ಕಂಡು ಹಿಡಿದಿರುವ ಲಸಿಕೆಯನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ.

ಇಲ್ಲಿನ ವ್ಯಾಪಾರಿ ವಸ್ತು ಪ್ರದರ್ಶನದಲ್ಲಿ (ಟ್ರೇಡ್​ ಫೇರ್​) ಕರೊನಾ ಲಸಿಕೆ ಹೊಂದಿರುವ ಗಾಜಿನ ನಳಿಕೆ ( ವಯಲ್​) ಇರಿಸಲಾಗಿದೆ. ಚೀನಿ ಕಂಪನಿಗಳಾದ ಸಿನೊವಾಕ್​ ಬಯೋಟೆಕ್​, ಸಿನೋಫಾರ್ಮ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ಸದ್ಯ ಜಗತ್ತಿನಲ್ಲಿ ಅಂತಿಮ ಹಂತದ ಪರೀಕ್ಷೆಯಲ್ಲಿರುವ 10ಕ್ಕೂ ಹೆಚ್ಚು ಲಸಿಕೆಗಳ ಪೈಕಿ ಇವೆರಡೂ ಸೇರಿವೆ.

ಆದರೆ, ಈವೆರಡೂ ಲಸಿಕೆಗಳು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಾರ್ವತ್ರಿಕ ಬಳಕೆಗೂ ಮುಕ್ತವಾಗಿಲ್ಲ. ಇವುಗಳನ್ನು ಮೂರನೇ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಇದಾದ ಬಳಿಕ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಬೀಜಿಂಗ್​ ಹೊರವಲಯದಲ್ಲಿ ವರ್ಷಕ್ಕೆ 30 ಕೋಟಿ ಡೋಸ್​ ಉತ್ಪಾದನಾ ಸಾಮರ್ಥ್ಯವುಳ್ಳ ಔಷಧ ತಯಾರಿಕಾ ಘಟಕವೊಂದನ್ನು ಸಿನೊವಾಕ್​ ಸ್ಥಾಪಿಸಿದೆ ಎಂದು ಕಂಪನಿ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟ್ರೇಡ್​ ಫೇರ್​ನಲ್ಲಿ ಅತ್ಯಧಿಕ ಜನರು ಈ ಲಸಿಕೆ ಪ್ರದರ್ಶಿಸಿರುವ ಮಳಿಗೆಗಳ ಬಳಿ ಜಮಾಯಿಸಿದ್ದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ನಡುವೆ ಕರೊನಾ ಜನ್ಮಸ್ಥಾನವಾದ ವುಹಾನ್​ ಕೋವಿಡ್​ನಿಂದ ಸಂಪೂರ್ಣ ಚೇತರಿಸಿಕೊಂಡಿದೆ. ಇದರ ಯಶಸ್ಸಿನ ಕಥೆಯನ್ನು ಜಗತ್ತಿಗೆಲ್ಲ ಹೇಳಲು ಚೀನಾ ಅಧಿಕಾರಿಗಳೆಲ್ಲ ಸಜ್ಜಾಗಿದ್ದಾರೆ.

ಜತೆಗೆ, ಕರೊನಾಗೆ ಲಸಿಕೆ ಕಂಡುಹಿಡಿದಿರುವುದನ್ನು ಜಗತ್ತಿಗೆ ಚೀನಿಯರ ಮುಂದಾಳತ್ವದ ಪ್ರತೀಕ ಎಂಬಂತೆ ಬಿಂಬಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net