ಹೂಸ್ಟನ್ ಕಾನ್ಸುಲೇಟ್ ಬಂದ್ ಮಾಡಿ - ಚೀನಾಕ್ಕೆ ಅಮೆರಿಕ ಸೂಚನೆ

America China vvani
Published on

ಬೀಜಿಂಗ್: ಚೀನಾ-ಅಮೆರಿಕ ಸಂಘರ್ಷ ಇನ್ನೊಂದು ಹಂತ ತಲುಪಿದ್ದು, ಹೂಸ್ಟನ್ ನಗರದಲ್ಲಿರುವ ಚೀನಾದ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಅಮೆರಿಕ ಸೂಚಿಸಿದೆ. ಅಲ್ಲದೆ, ಮೂರು ದಿನಗಳ ಒಳಗಾಗಿ ಟೆಕ್ಸಾಸ್ ನಗರದಲ್ಲಿರುವ ಕಚೇರಿಯನ್ನೂ ಮುಚ್ಚುವಂತೆ ಅಮೆರಿಕ ಹೇಳಿದ್ದಾಗಿ ಚೀನಾ ತಿಳಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭೀಕರವಾದ ಪ್ರತೀಕಾರವನ್ನೂ ಎದುರಿಸಬೇಕಾದೀತು ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್​ ವೆನ್​ಬಿನ್​ ತಮ್ಮ ನಿಯತ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದು, ಅಮೆರಿಕ ಏಕಪಕ್ಷೀಯವಾಗಿ ಚೀನಾದ ಕಾನ್ಸುಲೇಟ್​ ಅನ್ನು ಮುಚ್ಚಲು ಹೇಳಿದೆ. ಕೂಡಲೇ ಈ ನಿರ್ಧಾರದಿಂದ ಅಮೆರಿಕ ಹಿಂದೆ ಸರಿಯಬೇಕು. ತಪ್ಪಿದಲ್ಲಿ, ಇದಕ್ಕೆ ಪ್ರತಿಯಾದ ಕ್ರಮವನ್ನೂ ಅಮೆರಿಕ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ನಡುವೆ, ಚೀನಾದ ಕಾನ್ಸುಲೇಟ್​ ಆವರಣದ ಬಯಲಿನಲ್ಲಿ ಬೆಂಕಿ ಉರಿಯುತ್ತಿರುವುದು ಕಂಡುಬಂದಿತ್ತು. ಅದೇನು ಎಂದು ಪರಿಶೀಲಿಸಲು ತಮಗೆ ಅವಕಾಶ ನೀಡಲಿಲ್ಲ ಎಂದು ಹೂಸ್ಟನ್​ ಫೈರ್ ಡಿಪಾರ್ಟ್​ಮೆಂಟ್​ನ ಚೀಫ್ ಸ್ಯಾಮುಯೆಲ್​ ಪೆನಾ ಪ್ರತಿಕ್ರಿಯಿಸಿದ್ದಾರೆ. ಉಭಯ ದೇಶಗಳ ನಡುವೆ ಸಂಘರ್ಷದಲ್ಲಿ ಈ ಪ್ರಕರಣದ ಮಹತ್ವ ಏನು ಎಂಬುದು ಇನ್ನೂ ವ್ಯಕ್ತವಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net