

ನವದೆಹಲಿ/ಬೀಜಿಂಗ್: ಪೂರ್ವ ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಬಳಿಯ ಕೆಲವು ಸ್ಥಳಗಳಿಂದ ಉಭಯ ಸೇನೆಗಳು ಹಿಂದೆ ಸರಿದಿರುವ ಬೆನ್ನಿಗೆ ಭಾರತ-ಚೀನಾ ಸೇನೆಯ ಉನ್ನತಾಧಿಕಾರಿಗಳ ಮಧ್ಯೆ ಬುಧವಾರ ನಡೆದ ಮಾತುಕತೆಯಲ್ಲಿ ಮತ್ತಷ್ಟು ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ 10 ದಿನಗಳಲ್ಲಿ ಬಟಾಲಿಯನ್, ಬ್ರಿಗೇಡ್ ಮತ್ತು ಮೇಜರ್ ಜನರಲ್ ಹಂತದ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಎಸಿ ಬಳಿಯ ಉದ್ವಿಗ್ನತೆ ತಗ್ಗಿಸಲು ಜೂನ್ 6ರಂದು ಭಾರತದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಟಿಬೆಟ್ ಮಿಲಿಟರಿ ಜಿಲ್ಲೆಯ ಮೇಜರ್ ಜನರಲ್ ಲಿಯು ಲಿನ್ ನಡುವೆ ಮಾತುಕತೆ ಹಾಗೂ ಜೂನ್ 5ರಂದು ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಮತ್ತು ಚೀನಾ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕ ವು ಜಿಯಾಂಗ್ಹಾವೊ ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ಸಭೆಯ ಬಳಿಕ ಉಭಯ ದೇಶಗಳ ಸೇನೆಗಳು ಗಾಲ್ವಾನ್ ಕಣಿವೆಯ 14, 15 ಗಸ್ತು ಪಾಯಿಂಟ್ ಹಾಗೂ ಹಾಟ್ ಸ್ಪಿ ›ಂಗ್ ಬಳಿ 17ನೇ ಪಾಯಿಂಟ್ಗಳಿಂದ ಒಂದೂವರೆಯಿಂದ 2 ಕಿ.ಮೀ. ದೂರ ಹಿಂದೆ ಸರಿದಿವೆ.
ರಾಹುಲ್ಗೆ ಲಡಾಖ್ ಸಂಸದ ತಿರುಗೇಟು
ಲಡಾಖ್ ಭಾಗವನ್ನು ಚೀನಿ ಯೋಧರು ಅತಿಕ್ರಮಿಸಿದ್ದಾರೆಯೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಡಾಖ್ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸರಿಂಗ್ ನಾಮ್್ಯಾಲ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶತ್ರು ಪಡೆಗಳು ಭಾರತ ಭೂಭಾಗವನ್ನುಅತಿಕ್ರಮಿಸಿಕೊಂಡಿವೆ ಹೊರತು ಈಗಲ್ಲ. 1962ರ ಯುದ್ಧದ ವೇಳೆ ಲಡಾಖ್ನಲ್ಲಿ ವಶಪಡಿಸಿಕೊಂಡ 38 ಸಾವಿರ ಚದುರ ಕಿ.ಮೀ. ಪ್ರದೇಶ ಅಕ್ಸಾಯ್ ಚಿನ್ ಹೆಸರಿನಲ್ಲಿ ಚೀನಾದ ಹಿಡಿತದಲ್ಲೇ ಇದೆ ಎಂದು ಜಮ್ಯಾಂಗ್ ಟ್ವೀಟ್ ಮಾಡಿದ್ದಾರೆ.
ಮಾತುಕತೆಗಳು ಧನಾತ್ಮಕವಾಗಿದ್ದು, ಉಭಯ ದೇಶಗಳು ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುನ್ನಡೆದಿವೆ. ಇದರ ಭಾಗವಾಗಿಯೇ ಕೆಲವೆಡೆ ಸೇನೆ ಹಿಂಪಡೆಯಲಾಗಿದೆ. |ಹುವಾ ಚುನಿಯಿಂಗ್ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರೆ
ಯೋಧರು, ಶಸ್ತ್ರಾಸ್ತ್ರ ಹಿಂಪಡೆಯಿರಿ
ಎಲ್ಎಸಿ ಬಳಿ ನಿಯೋಜಿಸಿರುವ 10 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಿರಿ ಎಂದು ಚೀನಾಕ್ಕೆ ಭಾರತ ಒತ್ತಾಯಿಸಿದೆ. ಎಲ್ಎಸಿಯ ಕೆಲವು ಸ್ಥಳಗಳಲ್ಲಿ ಕೆಲವು ಕಿ.ಮೀ. ದೂರಕ್ಕೆ ಸೇನೆ ಹಿಂದೆ ಸರಿದಿರುವುದು ಶಾಂತಿ ಸ್ಥಾಪನೆ ವಿಷಯದಲ್ಲಿ ಉತ್ತಮ ಬೆಳವಣಿಗೆ. ಸೇನೆ ಹಿಂಪಡೆದಾಗ ಮಾತ್ರ ಉದ್ವಿಗ್ನತೆ ತಗ್ಗುತ್ತದೆ ಎಂದು ಭಾರತ ಹೇಳಿದೆ.