ಚೀನಾದ ಮಹತ್ವದ ನಿರ್ಧಾರದಿಂದ ಇನ್ಮುಂದೆ ಪ್ರತಿವರ್ಷ 1 ಕೋಟಿ ಶ್ವಾನಗಳು ಬಚಾವ್​!

Dog Meat
Published on

ಬೀಜಿಂಗ್​: ಕರೊನಾ ವೈರಸ್​ನಿಂದ ಎಚ್ಚೆತ್ತುಕೊಂಡಿರುವ ಚೀನಾ ಹೊಸ ಕರಡು ನಿರ್ದೇಶನದಲ್ಲಿ ಫಾರ್ಮ್​ ಅನಿಮಲ್ಸ್​ ಪಟ್ಟಿಯಿಂದ ಶ್ವಾನಗಳನ್ನು ಹೊರಗಿಟ್ಟಿದ್ದು, ಇನ್ಮುಂದೆ ದೇಶಾದ್ಯಂತ ನಾಯಿ ಮಾಂಸ ತಿನ್ನುವುದು ಹಾಗೂ ಮಾರಾಟ ಮಾಡುವುದು ಬ್ಯಾನ್​ ಆಗಲಿದೆ.

ಚೀನಾದ ಕೃಷಿ ಮತ್ತು ಗ್ರಾಮಾಂತರ ವ್ಯವಹಾರಗಳ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಯಿಗಳನ್ನು "ಒಡನಾಡಿ ಪ್ರಾಣಿ" ಎಂದು ಪರಿಗಣಿಸಿದ್ದು, ಜಾನುವಾರುಗಳು ಎಂದು ಕರೆಯುವುದು ಸೂಕ್ತವಲ್ಲ ಎಂದು ಬುಧವಾರ ನೂತನ ದಾಖಲೆಯನ್ನು ಚೀನಾ ಸರ್ಕಾರ ಹೊರಡಿಸಿದೆ.

ಚೀನಾದ ಪಶುಸಂಗೋಪನೆ ಕಾನೂನಿನ ಪ್ರಕಾರ ಜಾನುವಾರು ಮತ್ತು ಪೌಲ್ಟ್ರಿ ಪ್ರಾಣಿಗಳೆಂದು ಅಧಿಕೃತವಾಗಿ ಪರಿಗಣಿಸಿದ ಜೀವಿಗಳನ್ನು ಮಾತ್ರ ವಾಣಿಜ್ಯಾತ್ಮಕ ಉದ್ದೇಶಗಳಿಗಾಗಿ ವ್ಯಾಪಾರ ಹಾಗೂ ಸಾಗಾಟ ಮಾಡಬಹುದಾಗಿದೆ. ಇದೀಗ ಹೊಸ ಪ್ರಸ್ತಾವನೆಯಿಂದಾಗಿ ಪ್ರತಿವರ್ಷ ಹತ್ಯೆಯಾಗುತ್ತಿದ್ದ ಸುಮಾರು 10 ಮಿಲಿಯನ್​(1 ಕೋಟಿ) ಶ್ವಾನಗಳು ಬಚಾವ್​ ಆಗುವ ಸಾಧ್ಯತೆ ಇದೆ.

ಚೀನಾ ಸರ್ಕಾರದ ನೂತನ ಪ್ರಸ್ತಾವನೆಗೆ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಬಹುಪರಾಕ್​ ಹೇಳಿದ್ದು, ಚೀನಾದಲ್ಲಿನ ಪ್ರಾಣಿ ರಕ್ಷಣೆಗೆ ಈ ಪ್ರಸ್ತಾವನೆ "ಗೇಮ್​ ಚೇಂಜರ್​" ಆಗಲಿದೆ ಎಂದು ಕೊಂಡಾಡಿದ್ದಾರೆ.

ಕಳೆದ ವಾರವಷ್ಟೇ ಶೆನ್ಜೆನ್​​ ನಗರ ಶ್ವಾನ ಮಾಂಸವನ್ನು ನಿಷೇಧಿಸಿ, ಚೀನಾ ಮೊದಲ ನಗರ ಎನಿಸಿಕೊಂಡಿತ್ತು. ಇದರ ಬೆನ್ನಲ್ಲೇ ಚೀನಾ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪ್ರತಿವರ್ಷ ಚೀನಾದಲ್ಲಿ ಶ್ವಾನ ಮಾಂಸ ಮೇಳ ನಡೆಯುತ್ತಿತ್ತು. ಇದಕ್ಕೆ ಭಾರಿ ವಿರೋಧವೂ ಕೇಳಿಬಂದಿತ್ತು. ಈ ಮೇಳದಲ್ಲಿ ಸಾವಿರಾರು ಶ್ವಾನಗಳನ್ನು ಬಲಿ ನೀಡುತ್ತಿದ್ದರು. ಅಘಾತಕಾರಿಯೆಂದರೆ ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಸಹ ಕದಿಯಲಾಗುತ್ತಿತ್ತು. ಅಲ್ಲದೆ, ಬೀದಿ ನಾಯಿಗಳನ್ನು ಅಪಹರಿಸಿ ಶ್ವಾನ ಮಾಂಸ ಮೇಳದಲ್ಲಿ ಬಲಿ ನೀಡಲಾಗುತ್ತಿತ್ತು. ಇದೀಗ ಚೀನಾ ಸರ್ಕಾರದ ನಿರ್ಧಾರದಿಂದ ಇದೆಲ್ಲದಕ್ಕೂ ಪೂರ್ಣ ವಿರಾಮ ಬೀಳುವ ಸಾಧ್ಯತೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net