More

    ನೀವಿರುವ ಪ್ರದೇಶ ಕಂಪ್ಲೀಟ್​ ಸೀಲ್​ ಆದರೆ ಹೇಗಿರುತ್ತೆ ಪರಿಸ್ಥಿತಿ ಗೊತ್ತಾ?

    ಬೆಂಗಳೂರು: ಕರೊನಾ ಸೋಂಕು ವ್ಯಾಪಿಸುವುದು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ದೇಶಾದ್ಯಂತ ಲಾಕ್​ಡೌನ್​ ವಿಸ್ತರಿಸಬೇಕೆಂದು ಬಹುತೇಕ ಎಲ್ಲ ರಾಜ್ಯಗಳು ಕೇಂದ್ರಕ್ಕೆ ಮನವಿ ಸಲ್ಲಿಸಿವೆ.

    ಇದರ ಹೊರತಾಗಿ ಸೋಂಕು ಹೆಚ್ಚಾಗಿರುವ ಪ್ರದೇಶಗಳನ್ನು ಕಂಪ್ಲೀಟ್​ ಸೀಲ್​ ಮಾಡಬೇಕೆಂಬ ಸಲಹೆ ಕೇಳಿ ಬಂದಿದೆ. ಹೀಗಾದರೆ, ರಾಜ್ಯದಲ್ಲಿ ಬೆಂಗಳೂರು, ಮೈಸೂರು ಸೇರಿ ಸೋಂಕು ಹೆಚ್ಚಾಗಿರುವ ಪ್ರದೇಶಗಳನ್ನು ಕಂಪ್ಲೀಟ್​ ಸೀಲ್​ ಮಾಡುವ ಆಲೋಚನೆ ಸರ್ಕಾರಕ್ಕಿದೆ. ಈಗಾಗಲೇ ಉತ್ತರಪ್ರದೇಶದ 15 ಜಿಲ್ಲೆಗಳ ವಿವಿಧ ಪ್ರದೇಶಗಳು ಹಾಗೂ ದೆಹಲಿ 23 ಸ್ಥಳಗಳಲ್ಲಿ ಸಂಪೂರ್ಣ ಬಂದ್​ ಮಾಡಲಾಗಿದೆ. ಹಾಗಾದರೆ ಆಗ ಪರಿಸ್ಥಿತಿ ಹೇಗಿರಲಿದೆ ಎಂಬುದರ ಪ್ರಶ್ನೋತ್ತರ ಇಲ್ಲಿದೆ?

    * ಸಂಪೂರ್ಣ ಬಂದ್​ (ಕಂಪ್ಲೀಟ್​ ಸೀಲ್​) ಎಂದರೆ ಏನು?
    ನೀವಿರುವ ಪ್ರದೇಶವನ್ನು ಕರೊನಾ ಸೋಂಕು ವ್ಯಾಪಿಸಿರುವ ಪ್ರದೇಶ (ಕಂಟೇನ್​ಮೆಂಟ್​ ಝೋನ್​) ಎಂದು ಘೋಷಣೆಯಾದಲ್ಲಿ ಅಥವಾ ಹಾಟ್​ಸ್ಪಾಟ್​ ಎಂದು ಗುರುತಿಸಿದಲ್ಲಿ ನೀವು ಮನೆಯಿಂದ ಹೊರಬರುವಂತೆಯೇ ಇಲ್ಲ.

    * ಅಗತ್ಯ ಸಾಮಗ್ರಿಗಳನ್ನು ಪಡೆಯುವುದೇ ಹೇಗೆ?
    ಸ್ಥಳಿಯಾಡಳಿತವು ಈ ಹೊಣೆ ಹೊತ್ತು ಕೊಳ್ಳುತ್ತದೆ ಅಥವಾ ಸ್ವಯಂ ಸೇವಕರ ಮೂಲಕ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಲಾಗುತ್ತದೆ.

    * ಯಾವೆಲ್ಲ ಅಂಗಡಿಗಳು ತೆರೆದಿರುತ್ತವೆ?
    ಔಷಧ ಅಂಗಡಿಗಳು ಸೇರಿ ಯಾವುದೇ ಮಳಿಗೆಗಳು ತೆರೆದಿರುವುದಿಲ್ಲ. ಔಷಧಗಳು ಬೇಕಾದರೂ ಮನೆಗೆ ತಲುಪಿಸಲಾಗುತ್ತದೆ.

    * ಯಾರು ಈ ಪ್ರದೇಶವನ್ನು ಪ್ರವೇಶಿಸಬಹುದು ಅಥವಾ ಹೊರ ಹೋಗಬಹುದು?
    ಸ್ಥಳೀಯಾಡಳಿತದ ಅಧಿಕಾರಿಗಳು, ಪೊಲೀಸರು, ಆರೋಗ್ಯಾಧಿಕಾರಿಗಳು ಮಾತ್ರ ಇಲ್ಲಿಗೆ ಬರಲು ಹಾಗೂ ಇಲ್ಲಿಂದ ತೆರಳು ಅವಕಾಶವಿರುತ್ತದೆ. ಯಾರೇ ಬಂದರೂ ಅಥವಾ ಹೊರಗೆ ಹೋದರೂ ಅವರ ಮಾಹಿತಿ ದಾಖಲು ಮಾಡಲಾಗುತ್ತದೆ. ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾದವರನ್ನು ಹೊರಗೆ ಕರೆದೊಯ್ಯಬಹುದು. ಮಾಧ್ಯಮದವರೂ ಕೂಡ ಈ ಪ್ರದೇಶ ಪ್ರವೇಶಿಸುವಂತಿಲ್ಲ. ಆದರೆ, ಮಾಧ್ಯಮದವರೂ ಸೇರಿ ಅಗತ್ಯ ಸೇವೆಯಲ್ಲಿ ತೊಡಗಿರುವವರು ಈ ಸ್ಥಳದಲ್ಲಿ ವಾಸವಾಗಿದ್ದರೆ ಅವರಿಗೆ ಕರ್ತವ್ಯ ನಿರ್ವಹಿಸಲು ವಿನಾಯ್ತಿ ನೀಡಲಾಗುತ್ತದೆ. ಆದರೆ, ಅವರು ಪ್ರತಿಬಾರಿಯೂ ಆರೋಗ್ಯ ತಪಾಸಣೆಗೆ ಒಳಗಾಗಬೇಕು.

    * ಎಷ್ಟು ಅವಧಿವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ?
    ಕರೊನಾ ಸೋಂಕು ವ್ಯಾಪಿಸುವ ಅಪಾಯವಿಲ್ಲ ಎಂಬುದು ದೃಢವಾಗುವವರೆಗೆ ಈ ನಿರ್ಬಂಧವನ್ನು ಜಾರಿಯಲ್ಲಿ ಇಡಲಾಗುತ್ತದೆ.

    * ನಮ್ಮ ವಾಸಸ್ಥಳ ಈ ಪ್ರದೇಶದಲ್ಲಿ ಬರಲಿದೆ ಎಂಬುದನ್ನು ತಿಳಿಯುವುದು ಹೇಗೆ?
    ಸ್ಥಳೀಯಾಡಳಿತ, ಬೆಂಗಳೂರಿನ ವಿಷಯದಲ್ಲಿ ಹೇಳುವುದಾದರೆ ಬಿಬಿಎಂಪಿ ಇಂಥ ಪ್ರದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅದರ ವ್ಯಾಪ್ತಿಯನ್ನು ನಿಗದಿಪಡಿಸುತ್ತದೆ.

    * ಈ ಅವಧಿಯಲ್ಲಿ ಯಾವೆಲ್ಲ ಕಾರ್ಯ ನಡೆಸಲಾಗುತ್ತದೆ?
    ಪೊಲೀಸರು, ಸ್ಥಳೀಯಾಡಳಿತ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಹಲವು ಬಾರಿ ಭೇಟಿ ನೀಡಬಹುದು. ಆಗಾಗ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಯಾರಾದರೂ ಕೋವಿಡ್​-19 ಕಾಯಿಲೆ ಪೀಡಿತರಾಗುವ ಲಕ್ಷಣ (ಜ್ವರ, ಗಂಟಲು ಕೆರೆತ, ಉಸಿರಾಟದಲ್ಲಿ ತೊಂದರೆ) ಹೊಂದಿದ್ದಾರೆಯೇ ಎಂಬ ಬಗ್ಗೆ ನಿಗಾ ವಹಿಸಲಾಗುತ್ತದೆ.

    * ಈ ನಿರ್ಬಂಧಿತ ಪ್ರದೇಶ ಎಷ್ಟು ವ್ಯಾಪ್ತಿಯನ್ನು ಹೊಂದಿರುತ್ತದೆ?
    ಕೆಲವೇ ಮನೆಗಳಿರುವ ಒಂದು ರಸ್ತೆಯೂ ಆಗಿರಬಹುದು ಅಥವಾ ಒಂದಿಡೀ ವಾರ್ಡ್​ ವ್ಯಾಪ್ತಿಯನ್ನು ಒಳಗೊಂಡಿರಬಹುದು. ಸೋಂಕಿತರ ಸಂಖ್ಯೆ, ಎಷ್ಟು ಪ್ರಮಾಣದಲ್ಲಿ ಹಬ್ಬಿದೆ, ಅವರು ವಾಸಿಸಿತ್ತಿರುವ ಸ್ಥಳ ಹಾಗೂ ಅಲ್ಲಿನ ಜನದಟ್ಟಣೆ ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ.

    * ಹಾಟ್​ಸ್ಪಾಟ್​ ಹಾಗೂ ಸೋಂಕಿತ ಪ್ರದೇಶಕ್ಕೆ ಇರುವ ವ್ಯತ್ಯಾಸಗಳೇನು?
    ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾದ ಪ್ರದೇಶವನ್ನು ಹಾಟ್​ಸ್ಪಾಟ್​ ಎಂದು ಗುರುತಿಸಲಾಗುತ್ತದೆ. ಈ ಹಾಟ್​ಸ್ಪಾಟ್​ ಆಧರಿಸಿ ಇದು ಇನ್ನಷ್ಟು ಕಡೆ ಹಬ್ಬದಂತೆ ಹಾಗೂ ಆ ಸರಣಿ ತುಂಡಾಗಿಸಲು ಯೋಜನೆ ರೂಪಿಸಲಾಗುತ್ತದೆ. ಇದರನ್ವಯ ನಿರ್ಬಂಧಿತ ಪ್ರದೇಶಗಳನ್ನು ಘೋಷಿಸಲಾಗುತ್ತದೆ. ಒಂದು ವೇಳೆ ಸೋಂಕಿತನೊಂದಿಗೆ ಯಾರು ಯಾರು ಸಂಪರ್ಕಕ್ಕೆ ಬಂದಿದ್ದಾರೆ ಎಂಬುದು ಗೊತ್ತಾಗದ ವೇಳೆಯೂ ಅವರಿರುವ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಬಹುದು.

    * ಈ ಪ್ರದೇಶದಲ್ಲಿ ಸ್ವಚ್ಛತೆ ಹೇಗೆ ಕಾಪಾಡಲಾಗುತ್ತದೆ?
    ಈ ಪ್ರದೇಶದಲ್ಲಿ ಶುಚಿತ್ವ ಕೈಗೊಳ್ಳುವುದು ಸ್ಥಳೀಯಾಡಳಿತದ ಪ್ರಥಮ ಆದ್ಯತೆಯಾಗಿರುತ್ತದೆ. ಇಲ್ಲಿನ ಎಲ್ಲ ಮೂಲೆಗಳಲ್ಲಿ ರಾಸಾಯನಿಕಗಳನ್ನು ದಿನವೂ ಸಿಂಪಡಿಸಿ ಸೋಂಕು ಹಬ್ಬುವುದನ್ನು ತಡೆಯಲಾಗುತ್ತದೆ.

    * ಈ ನಿರ್ಬಂಧಗಳನ್ನು ಪಾಲಿಸದಿದ್ದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ?
    ಆರಂಭದಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಲಾಗುತ್ತದೆ. ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಬಹುದು. ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

    ಕರೊನಾ ಸೋಂಕಿಗೆ ಭಾರತದ ಮೊದಲ ವೈದ್ಯ ಬಲಿ: ಕೊಳೆಗೇರಿ ನಿವಾಸಿಗಳ ಸೇವೆ ಸಲ್ಲಿಸುತ್ತಿದ್ದ ಡಾಕ್ಟರ್‌

    ನಿಲ್ಲಿಸಲು ಯತ್ನಿಸಿದ ಪೊಲೀಸ್​ ಸಿಬ್ಬಂದಿಯನ್ನೇ ದರದರ ಎಳೆದೊಯ್ಡ ದ್ವಿಚಕ್ರವಾಹನ ಸವಾರ, ಪೇದೆಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts