ನೇಪಾಳ ಪವರ್ ಕಾರಿಡಾರ್​ನಲ್ಲಿ ಚೀನೀ ರಾಯಭಾರಿ ಹೂವು!

Edit-2
Published on

ಕಳೆದ ಕೆಲ ತಿಂಗಳುಗಳ ಭಾರತ-ಚೀನಾ ಗಡಿ ತಿಕ್ಕಾಟಗಳ ಮಧ್ಯೆ, ಸಾಂಸ್ಕೃತಿಕವಾಗಿ ಭಾರತದೊಂದಿಗೆ ಬೆಸೆದುಕೊಂಡಿರುವ ನೇಪಾಳದ ‘ಭಾರತ ವಿರೋಧಿ’ ನಡೆ ಅನೇಕರನ್ನು ಅಚ್ಚರಿಗೊಳಪಡಿಸಿತ್ತು. ದಿನ ಕಳೆದಂತೆ ಇದು ಚೀನೀ ಕುತಂತ್ರದ ಮುಂದುವರಿದ ಭಾಗ ಎಂಬುದು ಸ್ಪಷ್ಟವಾಯಿತು. ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳ ಭೂಭಾಗವನ್ನು ತನ್ನದೆಂದು ಸಾರುವ ಹೊಸ ನಕಾಶೆಯೊಂದನ್ನೂ ಬಿಡುಗಡೆ ಮಾಡಿದ್ದ ನೇಪಾಳ, ಚೀನಾದ ಕಮ್ಯುನಿಸ್ಟ್ ಸರ್ಕಾರದ ಪ್ರಭಾವಕ್ಕೊಳಗಾಗಿ ಇಂಥದ್ದೊಂದು ಸಾಹಸಕ್ಕೆ ಕೈಹಾಕಿತು ಎಂಬ ವಿಷಯವೀಗ ಗುಟ್ಟಾಗಿ ಉಳಿದಿಲ್ಲ. ಆದರೆ, ಈ ಎಲ್ಲ ಕುಕೃತ್ಯಗಳ ಹಿಂದೆ ‘ಚೀನಿ ಮಹಿಳೆ’ಯೊಬ್ಬಳು ಮಹತ್ತರ ಪಾತ್ರವಹಿಸಿದ್ದಳು ಎಂಬುದು ಗಮನಾರ್ಹ ಅಂಶ.

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿರುವ ಚೀನಾ ರಾಯಭಾರ ಕಚೇರಿ ಮುಖ್ಯಸ್ಥೆ ಹೂ ಯಾಂಕಿ ಆ ದೇಶದ ರಾಜಕೀಯ ಕಾರಿಡಾರ್​ನಲ್ಲಿ ಬಹು ಚರ್ಚೆಗೆ ಹಾಗೂ ಆಕರ್ಷಣೆಗೆ ಗುರಿಯಾಗಿರುವ ಮಹಿಳೆ ಕೂಡ ಹೌದು. ನೇಪಾಳ ಪ್ರಧಾನಿ, ಕಮ್ಯುನಿಸ್ಟ್ ಪಕ್ಷದ ಮುಖಂಡ ಕೆ.ಪಿ. ಶರ್ಮ ಓಲಿ ಜತೆಗೆ ನಿರಂತರ ಸಂಪರ್ಕ ಸಾಧಿಸಿರುವ ಹೂ ಯಾಂಕಿ, ಚೀನೀ ಅಜೆಂಡಾಗಳನ್ನು ನೇಪಾಳದ ಮೇಲೆ ವ್ಯವಸ್ಥಿತವಾಗಿ ಹೇರುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ‘ನೇಪಾಳ-ಭಾರತ ಗಡಿ ಬಗ್ಗೆ ಹೊಸ ನಕಾಶೆ ಬಿಡುಗಡೆ ಮಾಡಿ’ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದು ಇದೇ ಯಾಂಕಿ. ಈ ಹಿಂದೆ ಪಾಕಿಸ್ತಾನದ ಚೀನೀ ರಾಯಭಾರ ಕಚೇರಿಯಲ್ಲಿದ್ದ ಯಾಂಕಿ, ಈಗ ನೇಪಾಳ ರಾಜಕೀಯದಲ್ಲಿ ಎಲ್ಲಿಲ್ಲದ ಮಹತ್ವ ಗಿಟ್ಟಿಸಿಕೊಂಡಿದ್ದಾರೆ.

ನೇಪಾಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದ್ದಷ್ಟು ದಿನ ನೇಪಾಳವನ್ನು ಭಾರತದ ಮೇಲೆ ಎತ್ತಿಕಟ್ಟಲು ಚೀನಾಕ್ಕೆ ಅನುಕೂಲವಾಗಲಿದೆ. ಕೆ.ಪಿ.ಶರ್ಮ ಓಲಿಯವರನ್ನು ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಯುವಂತೆ ಮಾಡಲು ಚೀನಾ ಬಳಸಿಕೊಂಡಿರುವುದು ಇದೇ ಹೂ ಯಾಂಕಿಯವರನ್ನು. ದೆಹಲಿಯ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಅಧಿಕೃತ ನಿವಾಸ ಮತ್ತು ಕಚೇರಿಗೆ ಹೂ ಯಾಂಕಿ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಪ್ರಧಾನಿ ಕಚೇರಿಯೊಂದಿಗೆ ಯಾಂಕಿ ಸಾಧಿಸಿರುವ ಸಂಪರ್ಕ, ಪಕ್ಷದ ಇತರ ನಾಯಕರ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ. ಹಾಗಂತ, ಆಕೆ ವಿರುದ್ಧ ಮಾತನಾಡುವ ‘ಶಕ್ತಿ’ ಯಾರೊಬ್ಬರಿಗೂ ಇಲ್ಲ!

ಏಪ್ರಿಲ್ ತಿಂಗಳಲ್ಲಿ ಸ್ವಪಕ್ಷೀಯರ ಬಂಡಾಯದಿಂದಾಗಿ ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕಿದ್ದ ಓಲಿಯವರನ್ನು ಕಾಪಾಡಿದ್ದ ಹೂ ಯಾಂಕಿ, ನ್ಯಾಷನಲ್ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಪುಷ್ಪ ಕುಮಾರ್ ದಹಲ್ (ಪ್ರಚಂಡ) ಮತ್ತು ಮಾಧವ್ ಕುಮಾರ್ ನೇಪಾಳ್​ರೊಂದಿಗೆ ಸಂಧಾನ ಮಾತುಕತೆ ನಡೆಸುವಲ್ಲೂ ಸಫಲರಾಗಿದ್ದರು. ನೇಪಾಳದಲ್ಲಿರುವ ಬೇರೆ ಯಾವುದೇ ದೇಶದ ರಾಯಭಾರ ಕಚೇರಿ ಉನ್ನತಾಧಿಕಾರಿಗಳಿಗೆ ನೇಪಾಳ ರಾಜಕೀಯದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಅವಕಾಶ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಆದರೆ, ಹೂ ಯಾಂಕಿ ಮಾತ್ರ ಇವೆಲ್ಲವನ್ನು ಮೀರಿ ಇಲ್ಲಿನ ರಾಜಕೀಯ ಮುಖಂಡರನ್ನು ತಲುಪಿದ್ದಾರೆ!

ಕೆ.ಪಿ. ಶರ್ಮ ಓಲಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ನಡುವೆ ಆಪ್ತ ಸಂಪರ್ಕವಿದೆ. ಭಾರತದ ವಿರುದ್ಧದ ಕುತಂತ್ರ ರಾಜಕಾರಣಕ್ಕೆ ಚೀನಾಕ್ಕೆ ಓಲಿಯೇ ಸೂಕ್ತ ವ್ಯಕ್ತಿ. ಆದ್ದರಿಂದ ಅವರ ಸ್ಥಾನ ಬಲಪಡಿಸಲು ಭಾರತದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ತನ್ನದೆಂದು ಪ್ರತಿಪಾದಿಸುವ ಪರಿಷ್ಕೃತ ನಕಾಶೆ ಸಿದ್ಧಪಡಿಸಿ ಎಂದು ಓಲಿಗೆ ನಿರ್ದೇಶಿಸಿದ್ದು ಮತ್ತು ಆ ಮಾಸ್ಟರ್​ಪ್ಲಾನ್ ರೂಪಿಸಿದ್ದೇ ಹೂ ಯಾಂಕಿ. ಇದಕ್ಕೆ ಓಲಿಯವರನ್ನು ಒಪ್ಪಿಸುವುದೂ ಯಾಂಕಿಗೆ ಹೆಚ್ಚೇನೂ ಕಷ್ಟವೂ ಆಗಿರಲಿಲ್ಲ! ಅಲ್ಲದೆ, ನಕಾಶೆ ಸಿದ್ಧಪಡಿಸುವ ನೇಪಾಳ ಸರ್ಕಾರದ ನಿಯೋಗಕ್ಕೂ ಚೀನೀ ರಾಯಭಾರ ಕಚೇರಿ ‘ಸೂಕ್ತ ಸಲಹೆ’ಗಳನ್ನು ನೀಡಿತ್ತು.

ಏತನ್ಮಧ್ಯೆ, ನೇಪಾಳ ಕಮ್ಯುನಿಸ್ಟ್ ಪಕ್ಷದ ಯುವ ಘಟಕವನ್ನು ಸೆಳೆದ ಚೀನಾ ರಾಯಭಾರ ಕಚೇರಿ, ಇಂಡೋ-ನೇಪಾಳ ಗಡಿ ಭಾಗದ ಪಿತೋರಾಗಢ ಜಿಲ್ಲೆಯಲ್ಲಿ ಭಾರತದ ವಿರುದ್ಧ ಪ್ರತಿಭಟನೆಗಳನ್ನು ನಡೆಸುವಂತೆ ಪ್ರೇರೇಪಿಸಿತು. ನೇಪಾಳದಲ್ಲಿ ಭಾರತ ವಿರೋಧಿ ಮನಸ್ಸುಗಳನ್ನು ಓಲಿ ಗಟ್ಟಿಗೊಳಿಸುವ ಕೃತ್ಯಗಳ ಹಿಂದಿನ ರೂವಾರಿ ಹೂ ಯಾಂಕಿ ಎನ್ನುವುದೀಗ ನಿಗೂಢವಾಗೇನೂ ಉಳಿದಿಲ್ಲ.

ಓಲಿ ನಾಯಕತ್ವದ ಬಗ್ಗೆ ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲಿ ಮತ್ತೆ ಅಸಮಾಧಾನಗಳೆದ್ದಿವೆ. ಓಲಿಯನ್ನು ಉಳಿಸಬೇಕೆಂದರೆ ಅದು ಹೂ ಯಾಂಕಿಗೆ ಮಾತ್ರ ಸಾಧ್ಯ. ಯಾಂಕಿ ಕೊಟ್ಟಿರುವ ಸಲಹೆಯಂತೆ, ‘ನನ್ನ ಸರ್ಕಾರ ಪತನಗೊಳಿಸಲು ಭಾರತ ಷಡ್ಯಂತ್ರ ಮಾಡಿದೆ. 2016ರಲ್ಲೂ ಬಾಹ್ಯಶಕ್ತಿಗಳಿಂದಾಗಿ ಅಧಿಕಾರ ಕಳೆದುಕೊಂಡೆ. ಚೀನಾದೊಂದಿಗೆ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದಲೇ ಸರ್ಕಾರ ಉರುಳಿಸಲಾಯಿತು’ ಎಂದು ಓಲಿ ಗುಡುಗಿದ್ದಾರೆ. ಈ ನಡುವೆ, ನೇಪಾಳ ಕಮ್ಯುನಿಸ್ಟ್ ಪಕ್ಷದ ನಾಯಕ

ಪ್ರಚಂಡ ಸೇರಿ ಹಲವು ಮುಖಂಡರನ್ನು ಭೇಟಿ ಮಾಡಿರುವ ಹೂ ಯಾಂಕಿ, ‘ಯಾವುದೇ ಕಾರಣಕ್ಕೂ ಪಕ್ಷ ಒಡೆಯಬಾರದು. ಓಲಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದರೆ ಭಾರತ ನಮ್ಮೆಲ್ಲರ ವಿರುದ್ಧ ಮೇಲುಗೈ ಸಾಧಿಸಿದೆ ಎಂಬ ಸಂದೇಶ ರವಾನೆಯಾಗಲಿದೆ’ ಎಂದು ಎಚ್ಚರಿಸಿದ್ದಾರೆ.

ಓಲಿ ಹುದ್ದೆ ಕಾಪಾಡಲು ಯಾಂಕಿ ಇನ್ನಿಲ್ಲದ ಯತ್ನ ಮಾಡಿದ್ದರೂ, ನೇಪಾಳ ರಾಜಕೀಯದಲ್ಲಿ ತನ್ನದೇನೂ ಪ್ರಭಾವವಿಲ್ಲ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ‘ನೇಪಾಳ ಚೀನಾ ಹೇಳಿದಂತೆ ನಡೆದುಕೊಳ್ಳುತ್ತಿದೆ’ ಎಂಬ ಮಾತುಗಳು ಉಭಯ ದೇಶಗಳ ಸಂಬಂಧಕ್ಕೆ ಹಾನಿಯುಂಟು ಮಾಡಲಿದೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ ಭಾರತವಂತೂ ಇಲ್ಲ. ಇದೇ ಕಾರಣಕ್ಕೆ ಭಾರತದ ಕೆಲ ರಕ್ಷಣಾ ತಜ್ಞರು ಮತ್ತು ಮಾಜಿ ಸೇನಾಧಿಕಾರಿಗಳು ಕೆಂಡ ಕಾರುತ್ತಿದ್ದಾರೆ.

ವಿಚಿತ್ರ ಎಂದರೆ, ಹೂ ಯಾಂಕಿ ಕಾರ್ಯಾಚರಣೆ, ಹಸ್ತಕ್ಷೇಪಗಳ ಬಗ್ಗೆ ನೇಪಾಳದ ವಿಪಕ್ಷಗಳೂ ಬಾಯಿ ಬಿಚ್ಚಿಲ್ಲ. ಅಷ್ಟರಮಟ್ಟಿಗೆ, ಯಾಂಕಿ ನೇಪಾಳ ಪವರ್ ಕಾರಿಡಾರ್​ಗಳ ಆಳ ಭೇದಿಸಿದ್ದಾರೆ. ಇತ್ತೀಚೆಗೆ ನೇಪಾಳ ಮಾಧ್ಯಮದ ವಿರುದ್ಧ ಆಕ್ರೋಶ ಹೊರಹಾಕಿದ್ದ ಯಾಂಕಿ, ‘ದ ಕಠ್ಮಂಡು ಪೋಸ್ಟ್’ ಸಂಪಾದಕ ಚೀನಾ ಕುರಿತು ಪೂರ್ವಗ್ರಹ ನಿಲುವು ಹೊಂದಿದ್ದಾರೆಂದು ಟೀಕಿಸಿದ್ದರು. ಅದನ್ನೂ ನೇಪಾಳದ ಪಕ್ಷಗಳು ಸಹಿಸಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯಾಂಕಿ, ತಮ್ಮ ‘ಸೌಂದರ್ಯ’ಪ್ರಜ್ಞೆಯನ್ನೂ ಆಗಾಗ ಹೊರಹಾಕುತ್ತಿರುತ್ತಾರೆ. ಒಟ್ಟಿನಲ್ಲಿ, ನೇಪಾಳ ರಾಜಕೀಯ ವಿಚಿತ್ರಗಳಿಗೆ ಸಾಕ್ಷಿಯಾಗುತ್ತಿವೆ. ದೇಶದ ಸರ್ಕಾರವೊಂದು ಅನ್ಯ ದೇಶದ ರಾಯಭಾರ ಕಚೇರಿ ಮುಖ್ಯಸ್ಥೆಯೊಬ್ಬರ ಕೈಗೊಂಬೆಯಾಗಿರುವುದು ವಿಪರ್ಯಾಸ.

ಪ್ರಚಂಡ ಸಿಕ್ಕಿಲ್ಲ: ಸರ್ಕಾರವನ್ನು ರಕ್ಷಿಸಲು ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ, ಕಮ್ಯುನಿಸ್ಟ್ ನಾಯಕ ಮಾಧವ ಕುಮಾರ್ ನೇಪಾಳ್​ರೊಂದಿಗೆ ಹೂ ಯಾಂಕಿ ರ್ಚಚಿಸಿದ್ದಾರೆ. ಆದರೆ, ಪುಷ್ಪಕುಮಾರ್ (ಪ್ರಚಂಡ) ಮಾತ್ರ ಈ ಬಾರಿ ಆಕೆಯನ್ನು ಭೇಟಿಯಾಗಲೊಲ್ಲೆ ಎನ್ನುತ್ತಿದ್ದಾರೆ. ಓಲಿ ಕೂಡ ಪಿಎಂ ಸ್ಥಾನ ಬಿಗಿಯಾಗಿಟ್ಟುಕೊಂಡಿದ್ದಾರೆ. ಪಕ್ಷ ಒಡೆದರೆ, ಶೇರ್ ಬಹಾದೂರ್ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಸರ್ಕಾರ ರಚಿಸುವ ಯೋಚನೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net