ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ

Ladakh-china
Published on

ನವದೆಹಲಿ: ಭಾರತ-ಚೀನಾ ಮಧ್ಯೆ ಎಲ್​ಎಸಿ ಬಳಿಯ ಪ್ಯಾಂಗೊಂಗ್ ತ್ಸೋ ಸರೋವರದ ಬಳಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಘರ್ಷಣೆ ಮುಂದುವರಿದಿದೆ. ಗಡಿಯಲ್ಲಿ ಗಸ್ತು ತಿರುಗುವ ಬಗ್ಗೆ ಎರಡು ವಾರಗಳ ಹಿಂದೆ ಕ್ಯಾತೆ ತೆಗೆದಿದ್ದ ಚೀನಾ, ಈಗ ಭಾರತ ಗಾಲ್ವಾನ್ ನದಿ ಪ್ರದೇಶದಲ್ಲಿ ನಿರ್ವಿುಸಿರುವ ರಸ್ತೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಅಗತ್ಯ ಪ್ರತೀಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ರಸ್ತೆ ನಿರ್ವಣವಾಗಿರುವ ಪ್ರದೇಶ ಸಂಪೂರ್ಣ ಭಾರತದ ವ್ಯಾಪ್ತಿಗೆ ಒಳಪಟ್ಟಿದೆ.

ಪಾಂಗೊಂಗ್ ತ್ಸೋ ಸರೋವರದ ಉತ್ತರಕ್ಕೆ ಸುಮಾರು 200 ಕಿ.ಮೀ ದೂರದಲ್ಲಿರುವ ಶಿಯೋಕ್ ಮತ್ತು ಗಾಲ್ವಾನ್ ನದಿಗಳ ಸಂಗಮದ ಸಮೀಪದಲ್ಲಿ ಭಾರತ ಸುಮಾರು 255 ಕಿ.ಮೀ ಉದ್ದದ ರಸ್ತೆ ನಿರ್ವಿುಸಿದೆ. ಇದು ಕರಕೋರಂ ಪಾಸ್​ನ ಬುಡದಲ್ಲಿರುವ ಶೌಕ್ ಮತ್ತು ಡಾರ್​ಬುಕ್​ನೊಂದಿಗೆ ದೌಲತ್ ಬೇಗ್ ಓಲ್ಡಿಯನ್ನು ಸಂರ್ಪಸುತ್ತದೆ. ಕಳೆದ ವರ್ಷ ರಸ್ತೆ ಕಾಮಗಾರಿ ಮುಗಿದಿದ್ದು, ಇದರಿಂದಾಗಿ ಗಡಿಯಲ್ಲಿ ಭಾರತದ ಸಂಪರ್ಕ ಜಾಲ ಹೆಚ್ಚಾಗಿದೆ. ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ‘ಗಡಿಯಲ್ಲಿನ ಬೈಜಿಂಗ್ ಮತ್ತು ಲುಜಿನ್ ಡುವಾನ್ ಪ್ರದೇಶದಲ್ಲಿ ಭಾರತ ಚೀನಾದ ಭೂಪ್ರದೇಶ ಪ್ರವೇಶಿಸಿದ್ದು, ಗಡಿ ಪ್ರದೇಶದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದೆ.

ಈ ಪ್ರದೇಶದಲ್ಲಿ ಉಭಯ ದೇಶಗಳೂ ಎಲ್​ಎಸಿಯನ್ನು ಒಪ್ಪಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದು, ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಯಾವುದೇ ಗಲಾಟೆ ಸಂಭವಿಸಿಲ್ಲ. ಆದರೆ ಈಗ ಅಲ್ಲಿ ನಿರ್ವಿುಸಿರುವ ರಸ್ತೆ ಸಂಪೂರ್ಣ ಭಾರತದ ವ್ಯಾಪ್ತಿಯಲ್ಲಿದ್ದರೂ ಕೂಡ ಚೀನಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಹೆಚ್ಚು ಪಡೆ ನಿಯೋಜನೆ: ಸ್ಥಳಕ್ಕೆ ಚೀನಾ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದು, 70 - 80 ಡೇರೆಗಳನ್ನು ಹಾಕಿದೆ. ಡೇರೆಗಳಿರುವ ಪ್ರದೇಶ ಭಾರತದಿಂದ ಬಹಳ ದೂರವಿಲ್ಲವಾದ್ದರಿಂದ ಮುಂಜಾಗ್ರತಾ ಕ್ರಮವಾಗಿ ಭಾರತವೂ ಹೆಚ್ಚುವರಿ ಪಡೆಗಳನ್ನು ರವಾನಿಸಿದೆ. ಆದರೆ ಈ ಪಡೆಗಳನ್ನು ಇನ್ನೂ ಗಡಿಯಲ್ಲಿ ನಿಯೋಜಿಸಲಾಗಿಲ್ಲ ಎಂದು ತಿಳಿದುಬಂದಿದೆ. ಇದರ ಜತೆಗೆ ಪಾಂಗೊಂಗ್ ತ್ಸೋ ಸರೋವರದಲ್ಲೂ ಚೀನಾ ಗಸ್ತಿಗಾಗಿ ಅಧಿಕ ಬೋಟ್​ಗಳನ್ನು ನಿಯೋಜಿಸಿದೆ.

ಚೀನಾ ಕೂಡ ರಸ್ತೆ ನಿರ್ವಿುಸಿದೆ: ಭಾರತದ ಬಗ್ಗೆ ಆರೋಪಿಸುವ ಚೀನಾ ಈವರೆಗೆ ಗಡಿಯುದ್ದಕ್ಕೂ ಹಲವು ಬಾರಿ ರಸ್ತೆ ಕಾಮಗಾರಿಗಳನ್ನು ನಡೆಸಿದೆ. 1999ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಲ್ಲಿ ನಿಯೋಜಿಸಲಾಗಿದ್ದ ಭಾರತದ ಪಡೆಗಳನ್ನು ಪಾಕ್ ಗಡಿಗೆ ಕರೆಸಿಕೊಳ್ಳಲಾಗಿತ್ತು. ಆ ಸಮಯ ಉಪಯೋಗಿಸಿಕೊಂಡು ಚೀನಾ ಪ್ಯಾಂಗೊಂಗ್ ತ್ಸೋ ಸರೋವರದ ಉದ್ದಕ್ಕೂ ಭಾರತದೊಳಗೆ 5 ಕಿ.ಮೀ ಪ್ರವೇಶಿಸಿ ರಸ್ತೆ ನಿರ್ಮಾಣ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net