ಪ್ರತಿವರ್ಷ ಆಹಾರಕ್ಕಾಗಿ 2 ಕೋಟಿ ನಾಯಿ, 40 ಲಕ್ಷ ಬೆಕ್ಕು ಕೊಲ್ಲುವ ಚೀನಾದಲ್ಲೀಗ ಇದು ಹೊಸ ಟ್ರೆಂಡ್​​!

China
Published on

ಬೀಜಿಂಗ್: ಪ್ರಾಣಿಗಳ ಕಲ್ಯಾಣ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ರೋಗ ಹರಡುವುದನ್ನು ತಡೆಗಟ್ಟುವ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಾಳಜಿಯನ್ನು ಪರಿಗಣಿಸಿ ಚೀನಾ ಸರ್ಕಾರ ಶೀಘ್ರದಲ್ಲೇ ನಾಯಿ ಮಾಂಸಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಈ ಕುರಿತು ಚೀನಾದ ಕೃಷಿ ಸಚಿವಾಲಯ ಕರಡು ನೀತಿ ರೂಪಿಸಿದ್ದು, ಇದರಲ್ಲಿ ಮಾಂಸಕ್ಕಾಗಿ ಸಾಕಲಾಗುವ ಪ್ರಾಣಿಗಳ ಪಟ್ಟಿಯಿಂದ ನಾಯಿಯನ್ನು ಹೊರಗಿಡಲಾಗಿದೆ.

ಅಲ್ಲದೇ ನಾಯಿ ಮನುಷ್ಯನ ವಿಶೇಷ ಒಡನಾಡಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವುಗಳನ್ನು ಜಾನುವಾರುಗಳು ಎಂದು ಪರಿಗಣಿಸಲಾಗಿಲ್ಲ ಎಂದು ಕರಡು ನೀತಿಯಲ್ಲಿ ಉಲ್ಲೇಖಿಸಲಾಗಿದೆ. ನಾಯಿ ಮತ್ತು ಬೆಕ್ಕು ಮಾಂಸವನ್ನು ಅತಿಯಾಗಿ ಬಳಸಲಾಗುತ್ತಿರುವ ಶೆನ್ಜೆನ್ ನಗರದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಇದೇ ಕ್ರಮವನ್ನು ಉಳಿದ ಕಡೆಗಳಲ್ಲಿ ಅನುಸರಿಸಲು ಚಿಂತಿಸಲಾಗಿದೆ. ಚೀನಾದಲ್ಲಿ ಆಹಾರ ಉದ್ದೇಶಕ್ಕಾಗಿ ವಾರ್ಷಿಕವಾಗಿ ಸುಮಾರು 2 ಕೋಟಿ ನಾಯಿ ಹಾಗೂ ಸುಮಾರು 40 ಲಕ್ಷ ಬೆಕ್ಕುಗಳನ್ನು ಕೊಲ್ಲಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್​ನ ತನ್ನ ಜನ್ಮಸ್ಥಾನವಾದ ಚೀನಾದಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಐದು ವಾರಗಳ ನಂತರ ಚೀನಾದಲ್ಲಿ ಸೋಂಕಿನ ಪ್ರಕರಣ ಒಂದೇ ದಿನ ನೂರರ ಗಡಿ ದಾಟಿದೆ. ಶನಿವಾರ 99 ಹೊಸ ಪ್ರಕರಣಗಳು ವರದಿಯಾಗಿದ್ದವು. ಮಾತ್ರವಲ್ಲದೆ, ಕಳೆದ 24 ತಾಸಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಂದು ಕರೊನಾ ಅಲೆ ಸೃಷ್ಟಿಯಾಗುವ ಭೀತಿ ಎದುರಾಗಿದೆ.

ಚೀನಾದ ಈಶಾನ್ಯ ಗಡಿಯಲ್ಲಿ ಹೊಸ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಕಳೆದೊಂದು ತಿಂಗಳ ಹಿಂದೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದ ಹಿನ್ನೆಲೆ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿ ಸಾರಿಗೆ ಕ್ಷೇತ್ರಗಳಿಗೆ ಕಾರ್ಯನಿರ್ವಹಿಸಲು ಕಮ್ಯುನಿಸ್ಟ್ ಸರ್ಕಾರ ಅನುಮತಿ ನೀಡಿತ್ತು. ಚೀನಾದಲ್ಲಿ ಕರೊನ ಕಾಲ್ತೆಗೆದಿತ್ತು. ಆದರೆ, ಹೊರಗಿನಿಂದ ಮತ್ತೆ ಈ ಸೋಂಕು ಆಮದಾಗಿದೆ. ಈ ಹೊತ್ತಿಲ್ಲಿ ಸಾರಿಗೆ ಸೇರಿ ಹಲವು ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ಹೊಸ ಪ್ರಕರಣಗಳ ತಲೆಬೇನೆ ಶುರುವಾಗಿದೆ ಎಂದು ಅಧಿಕಾರಿಯೊಬವ್ಬರು ಹೇಳಿದ್ದಾರೆ.

ರಷ್ಯಾದಿಂದ ಮರಳುತ್ತಿರುವ ಚೀನಾ ಪ್ರಜೆಗಳು ಮತ್ತೆ ಸೋಂಕು ಹೊತ್ತು ತರುತ್ತಿದ್ದಾರೆ. ಪ್ರತಿ ದಿನ ಬೆಳಕಿಗೆ ಬರುವ ಪ್ರಕರಣಗಳಲ್ಲಿ ಶೇ.40 ರಿಂದ 50 ರಷ್ಟು ಪ್ರಕರಣಗಳು ಅಂತಾರಾಷ್ಟ್ರೀಯ ವಿಮಾನಗಳಿಂದ ಬಂದ ಪ್ರಯಾಣಿಕರಿಂದಲೇ ವರದಿಯಾಗಿವೆ ಎಂದು ಎಂದಿದ್ದಾರೆ. ಚೀನಾದಲ್ಲಿ ಒಟ್ಟು ಮರಣ ಸಂಖ್ಯೆ 3,341ಕ್ಕೆ ಮುಟ್ಟಿದೆ. ಒಟ್ಟು ಸೋಂಕಿತ ಪ್ರಕರಣ 82,160. ಈ ಪೈಕಿ 77,663 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,156 ಇದೆ.

ಸಿಂಗಾಪುರದಲ್ಲಿ ಭಾರತೀಯರಿಗೆ ಸೋಂಕು

ಸಿಂಗಾಪುರದಲ್ಲಿ ಭಾನುವಾರ ಹೊಸದಾಗಿ 233 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 59 ಜನರು ಭಾರತೀಯರಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಸಿಂಗಾಪುರದಲ್ಲಿ ಸೋಂಕಿತರ ಸಂಖ್ಯೆ 2,532ಕ್ಕೆ ಏರಿಕೆಯಾಗಿದೆ. ಹೊಸದಾಗಿ ಬೆಳಕಿಗೆ ಬಂದಿರುವ ಪ್ರಕರಣಗಳಲ್ಲಿ ಭಾರತೀಯ ಮೂಲದ ಮೆಗಾ ಸ್ಟೋರ್ ಮುಸ್ತಫಾಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಿವೆ. ಈವರೆಗೆ ಸಿಂಗಾಪುರದಲ್ಲಿ 8 ಜನರು ಸಾವನ್ನಪ್ಪಿದ್ದು, 988 ಜನರು ಗುಣಮುಖರಾಗಿದ್ದಾರೆ.

ದಿವಾಳಿ ಕಾನೂನು ತಿದ್ದುಪಡಿಗೆ ಸುಗ್ರೀವಾಜ್ಞೆ?

ಕರೊನಾ ವೈರಸ್ ಕಾರಣ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕಂಪನಿಗಳ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ದಿವಾಳಿತನ ಕಾಯ್ದೆಗೆ ತಿದ್ದುಪಡಿತರಲು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ.

2016ರ ದಿವಾಳಿತನ ಕಾಯ್ದೆ ಪ್ರಕಾರ ಕಂಪನಿಗಳು ಪಡೆದ ಸಾಲ ಮರುಪಾವತಿಗೆ ಒಂದು ದಿನ ವಿಳಂಬವಾದರೂ ಅದನ್ನು ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಪರಿಗಣಿಸಲಾಗುತ್ತದೆ. ಆದರೆ, ಈಗ ಲಾಕ್​ಡೌನ್ ಇರುವ ಕಾರಣ ಈ ನಿಯಮವನ್ನು ಸಡಿಲಿಸಲು ಸರ್ಕಾರ ಮುಂದಾಗಿದ್ದು, ಪರಿಸ್ಥಿತಿ ಅವಲೋಕಿಸಿ ಈ ಅವಧಿಯನ್ನು ವಿಸ್ತರಿಸುವ ಬಗ್ಗೆ ನಿರ್ಧರಿಸಲಿದೆ. ಮೂಲಗಳ ಪ್ರಕಾರ, ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳು ತಡೆ ನೀಡುವ ತಿದ್ದುಪಡಿಯನ್ನು ಸೇರಿಸಲು ಸರ್ಕಾರ ಬಯಸಿದೆ. ಆದರೆ, ಈಗಾಗಲೇ ದಿವಾಳಿತನ ಕಾಯ್ದೆಯಡಿ ಕ್ರಮ ಎದುರಿಸುತ್ತಿರುವ ಕಂಪನಿಗಳಿಗೆ ಸುಗ್ರೀವಾಜ್ಞೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.

ಸುದೀರ್ಘ ಲಾಕ್​ಡೌನ್​ನಿಂದಾಗಿ ಅನೇಕ ಕಂಪನಿಗಳು ಒಪ್ಪಂದಗಳನ್ನು ಪೂರ್ತಿಗೊಳಿಸುವಲ್ಲಿ ಹಾಗೂ ಪಾವತಿ ಮಾಡುವಲ್ಲಿ ಹಿಂದೆ ಬಿದ್ದಿವೆ. ಸಾಮಾನ್ಯ ಸನ್ನಿವೇಶದಲ್ಲಾದರೆ ಸಾಲದಾತರು ಅವುಗಳ ವಿರುದ್ಧ ಕ್ರಮಕೈಗೊಳ್ಳಲು ಅವಕಾಶವಿತ್ತು. ವೇತನ, ಸಾಲ ಮರುಪಾವತಿ ಮತ್ತು ಜಿಎಸ್​ಟಿ ಪಾವತಿಸಲು ಅನೇಕ ಸಣ್ಣ ಕಂಪನಿಗಳು ಪರದಾಡುತ್ತಿದ್ದು ಎನ್​ಪಿಎಗಳಾಗುವ ಅಪಾಯ ಎದುರಿಸುತ್ತಿವೆ.

ಏಪ್ರಿಲ್ 30ರ ಲಾಕ್​ಡೌನ್ ನಂತರವೂ ಮುಂದುವರಿದರೆ ದಿವಾಳಿ ಕಾನೂನಿನ ನಿರ್ದಿಷ್ಟ ನಿಯಮಗಳನ್ನು ಆರು ತಿಂಗಳ ಅವಧಿಗೆ ಅಮಾನತಿನಲ್ಲಿಡುವ ಬಗ್ಗೆ ಪರಿಶೀಲಿಸಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಪ್ರಕಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net