ಹೆದ್ದಾರಿ ಮೇಲೆಯೇ ವಿಮಾನ ಪತನ: 8 ಪ್ರಯಾಣಿಕರು, ಇಬ್ಬರು ವಾಹನ ಸವಾರರು ಸೇರಿ 10 ಮಂದಿ ದುರ್ಮರಣ

Flight
Published on

ಕೌಲಾಲಂಪುರ್: ಲಘು ವಿಮಾನವೊಂದು ಚತುಷ್ಪಥ ಹೆದ್ದಾರಿಯಲ್ಲೇ ಪತನವಾದ ಭಯಾನಕ ದೃಶ್ಯ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಡ್ಯಾಶ್​ಕ್ಯಾಮೆರಾದಲ್ಲಿ ಸರೆಯಾಗಿದೆ. ಈ ಘಟನೆ ಮಲೇಶಿಯಾದಲ್ಲಿ ನಡೆದಿದ್ದು, ವಿಮಾನದಲ್ಲಿದ್ದ 8 ಮಂದಿ ಮತ್ತು ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ವಾಹನ ಸವಾರರು ದುರಂತ ಸಾವಿಗೀಡಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?

ನೋಡು ನೋಡುತ್ತಿದ್ದಂತೆ ಲಘು ವಿಮಾನವು ಕೆಳಮುಖವಾಗಿ ಹಾರುತ್ತಾ ನೇರವಾಗಿ ರಸ್ತೆ ಬಂದು ಅಪ್ಪಳಿಸಿದ ಕೂಡಲೇ ಅದು ಸ್ಫೋಟಗೊಂಡು ಆ ಸ್ಥಳದಲ್ಲಿ ದೊಡ್ಡ ಬೆಂಕಿಯ ಜ್ವಾಲೆ ಹೊತ್ತಿಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಭಗ್ನಾವಶೇಷದಿಂದ ದಟ್ಟ ಹೊಗೆಯು ಆವರಿಸಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈವರೆಗೂ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಬಹುದು. ಇದರಲ್ಲಿ ಇಬ್ಬರು ವಾಹನ ಸವಾರರು ಸೇರಿದ್ದಾರೆ. ಒಬ್ಬರು ಬೈಕ್​ ಸವಾರರು ಮತ್ತು ಇನ್ನೊಬ್ಬರು ಕಾರು ಚಾಲಕರಾಗಿದ್ದಾರೆ. ವಿಮಾನದಲ್ಲಿ 8 ಮಂದಿಯು ಮೃತರಾಗಿದ್ದಾರೆ ಎಂದು ಮಲೇಶಿಯಾ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಪಹಾಂಗ್ ರಾಜ್ಯದ ವಸತಿ ಮತ್ತು ಪರಿಸರದ ಉಸ್ತುವಾರಿ ವಹಿಸಿರುವ ರಾಜ್ಯ ಅಸೆಂಬ್ಲಿ ಸದಸ್ಯ ಜೋಹರಿ ಹರುನ್ ಸಹ ಮೃತಪಟ್ಟ ವಿಮಾನ ಪ್ರಯಾಣಿಕರಲ್ಲಿ ಒಬ್ಬರು ಎಂದು ತಿಳಿದುಬಂದಿದೆ.

ಉತ್ತರದ ರೆಸಾರ್ಟ್​ ದ್ವೀಪ್​ ಲಂಗಾವಿಯಿಂದ ಟೇಕಾಫ್​ ಆದ ಈ ವಿಮಾನ ಮಲೇಶಿಯಾ ರಾಜಧಾನಿ ಕೌಲಾಲಂಪುರದ ಪಶ್ಚಿಮದಲ್ಲಿರುವ ಸುಲ್ತಾನ್​ ಅಬ್ದುಲ್​ ಅಜೀಜ್​ ಶಾ ವಿಮಾನ ನಿಲ್ದಾಣದ ಕಡೆಗೆ ಬರುತ್ತಿತ್ತು. ವಿಮಾನವು ಪತನಗೊಂಡಾಗ ಅದರಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಇದ್ದರು ಎಂದು ಮಲೇಶಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಲೇಶಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net