

ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದ ಕೊಂಚ ಹೊರಬಂದು, ಶಾಲಾ-ಕಾಲೇಜು ಪರೀಕ್ಷೆ ಮುಗಿಸಿ ಬೇಸಿಗೆ ದಿನ ಕಳೆಯುತ್ತಿರುವ ಮಕ್ಕಳ ಬಗ್ಗೆ ಹೆತ್ತವರು ಜಾಗೃತಿವಹಿಸಿ. ಕಳೆದೆರಡು ತಿಂಗಳಲ್ಲಿ ಕೆರೆ, ನದಿ, ಬೀಚ್, ಕಾಲುವೆಗಳಲ್ಲಿ ಈಜಲು ಅಥವಾ ಆಟಕ್ಕೆಂದು ಹೋಗಿ ನೀರಿನಲ್ಲಿ ಮುಳುಗಿ ಮಕ್ಕಳು ಸಾವಿಗೀಡಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಜಲಸಮಾಧಿ ಆಗುತ್ತಿರುವರಲ್ಲಿ 10 ರಿಂದ 18 ವರ್ಷದವರೇ ಹೆಚ್ಚಾಗಿದ್ದಾರೆ.
ಎಲ್ಲೆಡೆ ಮಳೆ ಸುರಿಯುತ್ತಿರುವ ಕಾರಣ ಕೆರೆ, ಕಾಲುವೆ, ಕುಂಟೆಗಳು ತುಂಬಿವೆ. ಕಲ್ಲು ಕ್ವಾರಿಗಳಲ್ಲಿ ನೀರು ತುಂಬಿಕೊಂಡಿದೆ. ಕಡಲ ತೀರದಲ್ಲಿ ಅಲೆಗಳು ಅಬ್ಬರ ಹೆಚ್ಚಾಗಿದೆ. ಕಾಲುವೆಗಳಲ್ಲಿ ನೀರು ಬಿಟ್ಟಿರುತ್ತಾರೆ. ಹೀಗೆ ಒಂದಿಲ್ಲೊಂದು ಕಾರಣಕ್ಕೆ ನೀರಿನ ಸೆಳೆತ ಹೆಚ್ಚಾಗಿರುತ್ತದೆ. ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ. ಹೀಗಾಗಿ ಪಾಲಕರು ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕಿದೆ.
ಮಕ್ಕಳು ಯಾರ ಜತೆಗೆ ಹೋದರೂ ನೀರಿಗೆ ಇಳಿದಾಗ ಎಚ್ಚರಿಕೆ ಇರಲಿ. ಈಜಲು ಹೋದಾಗ ಆಳ ಎಷ್ಟಿದೆ ಎಂಬ ಅರಿವಿಲ್ಲದೆ ಗುಂಡಿಯಲ್ಲಿ ಇಳಿಯುವುದು ಅಪಾಯಕಾರಿ. ಬಾವಿ ಮೇಲಿಂದ ನೀರಿಗೆ ಧುಮುಕಲು ಹೋಗಿ ಕಲ್ಲಿಗೆ ತಲೆಬಡಿದು ಮೃತಪಟ್ಟಿರುವ ಘಟನೆಗಳು ನಡೆದಿವೆ. ಪ್ರವಾಸಕ್ಕೆಂದು ಸಮುದ್ರ ತೀರಕ್ಕೆ ಹೋಗಿ ಮೋಜು-ಮಸ್ತಿ ಮಾಡುವಾಗ ಅಲೆಗೆ ಸಿಲುಕಿ ಉಸಿರು ಚೆಲ್ಲಿರುವುದೂ ಇದೆ. ಕೃಷಿ ಹೊಂಡದಲ್ಲಿ ಇಳಿದು ಪ್ರಾಣ ಬಿಟ್ಟಿರುವ ಘಟನೆಗಳೂ ನಡೆದಿವೆ. ಮೊಬೈಲ್ನಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಹೊರಬರಲು ಸಾಧ್ಯವಾಗದೆ ಜಲಸಮಾಧಿ ಸಹ ಆಗಿದ್ದಾರೆ. ಒಟ್ಟಾರೆ ನೀರಿಗಿಳಿದಾಗ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರಿಂದ ಪ್ರಾಣಹಾನಿ ತಪ್ಪಿಸಬಹುದು.
ಗೌರಿಬಿದನೂರು: ತಾಲೂಕಿನ ಹಂಪಸಂದ್ರ ಗ್ರಾಮದ ಕೃಷಿ ಹೊಂಡವೊಂದರಲ್ಲಿ ಭಾನುವಾರ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾ ಗಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ರಾಜೇಶ್ (16), 9ನೇ ತರಗತಿ ಓದುತ್ತಿದ್ದ ಲಿಖಿತ್ (15), ಮನೋಜ್ (15) ಮೃತರು. ಕೃಷಿ ಹೊಂಡದ ಬಳಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿಗಳು ಈಜಲು ಹೋಗಿದ್ದಾರೆ. ಈ ವೇಳೆ ಮುಳುಗುತ್ತಿದ್ದ ಒಬ್ಬನನ್ನು ರಕ್ಷಿಸಲು ಹೋದ ಮತ್ತಿಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಜತೆಯಲ್ಲಿದ್ದ ಸಹಪಾಠಿಗಳು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಸ್ಥಳಕ್ಕೆ ತೆರಳುವಷ್ಟರಲ್ಲಿ ವಿದ್ಯಾರ್ಥಿಗಳು ಅಸುನೀಗಿದ್ದರು.