

ಬೊಗೋಟಾ: ಲಘು ವಿಮಾನ ಪತನದ ಬಳಿಕ ಸುಮಾರು 1 ತಿಂಗಳಿಗೂ ಅಧಿಕ ಸಮಯ ಕೊಲಂಬಿಯಾದ ಅಮೆಜಾನ್ ಮಳೆಕಾಡು ಪ್ರದೇಶದಲ್ಲಿ ಸಿಲುಕಿದ್ದ ನಾಲ್ವರು ಸ್ಥಳೀಯ ಮಕ್ಕಳನ್ನು ಶುಕ್ರವಾರ ಪತ್ತೆಹಚ್ಚಿರುವುದಾಗಿ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ತಿಳಿಸಿದ್ದಾರೆ.
ಇಡೀ ದೇಶಕ್ಕೆ ಇದು ಸಂತೋಷದ ಸುದ್ದಿಯಾಗಿದೆ. 40 ದಿನಗಳ ಹಿಂದೆ ಕೊಲಂಬಿಯಾದ ದಟ್ಟ ಕಾಡಿನಲ್ಲಿ ಕಳೆದುಹೋದ ನಾಲ್ವರು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಪೆಟ್ರೋ ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪೋಟೋಗಳನ್ನೂ ಹಂಚಿಕೊಂಡಿದ್ದಾರೆ.
ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು 13, 9, 4 ಮತ್ತು 1 ವರ್ಷ ವಯೋಮಾನದವರು. ಮಕ್ಕಳು ಸಿಕ್ಕಿದ್ದಾರೆ, ಆದರೆ ಅವರನ್ನು ತುರ್ತಾಗಿ ಕರೆದುಕೊಂಡು ಹೋಗಲು ನನಗೆ ವಿಮಾನ ಅಥವಾ ಹೆಲಿಕಾಪ್ಟರ್ ಬೇಕು ಎಂದು ಮಕ್ಕಳ ಅಜ್ಜ ಫಿಡೆನ್ಸಿಯೊ ವೆಲೆನ್ಸಿಯಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಪತ್ತೆಯಾದ ಮಕ್ಕಳು ಮೂಲತಃ ಉಯಿಟೊಟೊ ಸ್ಥಳೀಯ ಗುಂಪಿನವರು. ಅವರು ಪ್ರಯಾಣಿಸುತ್ತಿದ್ದ ಸೆಸ್ನಾ 206 ಲಘು ವಿಮಾನ ಅಪಘಾತಕ್ಕೀಡಾಗಿದ ಬಳಿಕ ಮೇ 1 ರಿಂದ ಕಾಡಿನಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದರು. ವಯಸ್ಕರ ಮೂರು ಮೃತದೇಹಗಳು ಮಕ್ಕಳು ಪತ್ತೆಯಾದ ಜಾಗದಲ್ಲೇ ಪತ್ತೆಯಾಗಿವೆ. ಮೃತದೇಹಗಳನ್ನು ಮಕ್ಕಳ ತಾಯಿ, ಪೈಲಟ್ ಮತ್ತು ಸಂಬಂಧಿ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)