ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗ ಜಸ್ಟ್​ ಪಾಸ್: ಸಂಭ್ರಮಿಸಿದ ಪಾಲಕರು, ನೆಟ್ಟಿಗರ ಪ್ರತಿಕ್ರಿಯೆ ವೈರಲ್​

Mumbai Family
Published on

ನವದೆಹಲಿ: ವಿದ್ಯಾರ್ಥಿ ಜೀವನದ ಯಶಸ್ಸನ್ನು ಅಂಕಗಳ ಆಧಾರದ ಮೇಲೆಯೇ ಅಳೆಯುತ್ತಾರೆ. ಪರೀಕ್ಷೆಗಳಲ್ಲಿ ನಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕೆಂದು ಪಾಲಕರು ತುಂಬಾ ಒತ್ತಡ ಹೇರುತ್ತಾರೆ. ಪಾಲಕರ ಒತ್ತಡದಿಂದ ಕೆಲವು ಮಕ್ಕಳು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಅಂಕಗಳನ್ನು ಮೀರಿ ಸಾಧಿಸಿದವರು ನಮ್ಮ ನಡುವೆ ಇದ್ದಾರೆ. ಹೀಗಾಗಿ ಮಕ್ಕಳನ್ನು ಅಂಕಗಳಿಗೆ ಸೀಮಿತ ಮಾಡದೇ ಅವರನ್ನು ಸಾಧನೆಯ ಹಾದಿಗೆ ಅಣಿಗೊಳಿಸಬೇಕಾದ್ದು, ಪಾಲಕರ ಕರ್ತವ್ಯ. ಅಂಕ ಕಡಿಮೆಯಾಯ್ತು ಎಂದು ದುಃಖಿಸುವವರ ನಡುವೆ ಇಲ್ಲೊಂದು ಕುಟುಂಬ ತಮ್ಮ ಮಗ ಜಸ್ಟ್​ ಪಾಸ್​ ಆದರೂ ಸಂಭ್ರಮಿಸುವ ಮೂಲಕ ಇತರರಿಗೆ ಮಾದರಿಯಾಗಿದೆ.

ಶೇ. 35 ಅಂಕ

ಮುಂಬೈ ಮೂಲದ ಕುಟುಂಬವೊಂದು ಅಂಕಗಳ ಆಧಾರದ ಯಶಸ್ಸಿನ ಮಾನದಂಡಕ್ಕೆ ಕೊನೆಯಾಡಿದ್ದಾರೆ. ಹೊಸ ಹಾದಿಯನ್ನು ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮಗ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಿಂದ ಕೇವಲ ಶೇ. 35 ಅಂಕಗಳಿಸಿದರೂ, ಆತನನ್ನು ನಿಂದಿಸದೇ ಅಥವಾ ಕೋಪ ಮಾಡಿಕೊಳ್ಳದೆ ಮಗನ ಸಣ್ಣ ಯಶಸ್ಸನ್ನೂ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಮುಂಬೈನ 10ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಶೇ.35 ಅಂಕ ಪಡೆದಿದ್ದಾನೆ. ಆದರೆ ಆತನ ಮೇಲೆ ದುಃಖ ಅಥವಾ ಕೋಪಗೊಳ್ಳುವ ಬದಲು, ಅವನ ಹೆತ್ತವರು ಅವನ ಯಶಸ್ಸನ್ನು ಸಂಭ್ರಮಿಸಿದರು ಎಂದು ಅವನೀಶ್​ ಶರಣ್​ ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮೊಬೈಲ್​ ಡಿಸ್​ಪ್ಲೈನಲ್ಲಿ 35 ಎಂದು ಬರೆದಿರುವುದನ್ನು ವಿದ್ಯಾರ್ಥಿ ಮತ್ತು ಪಾಲಕರು ನಗುಮುಖದಿಂದ ಕ್ಯಾಮೆರಾ ಮುಂದೆ ಪ್ರದರ್ಶಿಸಿ, ಥಂಬ್ಸ್​ ಅಪ್​ ಮಾಡಿ ಸಂಭ್ರಮಿಸಿದ್ದಾರೆ.

ನೆಟ್ಟಿಗರ ಬಹುಪರಾಕ್​

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದ್ದು, ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಇಂತಹ ಪಾಲಕರನ್ನು ಪಡೆದ ನೀನೆ ಅದೃಷ್ಟವಂತ, ಪ್ರತಿ ವಿದ್ಯಾರ್ಥಿಗಳು ಇಂತಹ ಪಾಲಕರು ಇರಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ನಡೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಅಂಕಗಳನ್ನು ಪಡೆಯಲು ಒತ್ತಡ ಹೇರಬಾರದು. ಅವರು ಧನಾತ್ಮಕವಾಗಿ ಉಳಿಯಬೇಕು. ಪೋಷಕರ ಒತ್ತಡವು ಮಕ್ಕಳನ್ನು ಆತಂಕಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವರು ಅಸುರಕ್ಷಿತರಾಗುತ್ತಾರೆ ಮತ್ತು ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಅನುಮಾನಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net