ಗ್ಯಾರಂಟಿ ಬಜೆಟ್​ಗೆ ಸಿದ್ಧತೆ: ಬಿಜೆಪಿ ಯೋಜನೆಗೆ ಕೊಕ್; ಸಂಪನ್ಮೂಲ ಸಂಗ್ರಹಕ್ಕೆ ಆದ್ಯತೆ

Vidhanasoudha
Published on

ಬೆಂಗಳೂರು: ಹೊಸ ಸರ್ಕಾರ ರಚನೆಯ ಬಳಿಕ ಐದು ಗ್ಯಾರಂಟಿ ಯೋಜನೆ ಜಾರಿಗೆ ಅನುದಾನ ಹೊಂದಿಸಲು ಹಾಗೂ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂಡ ಆಯವ್ಯಯ ಮಂಡನೆಗೆ ತಯಾರಿ ಆರಂಭಿಸಿದೆ. ಪರಿಣಾಮ ಬಿಜೆಪಿ ಅವಧಿಯ ಹಲವು ಯೋಜನೆಗೆ ಕೊಕ್ ಬೀಳಲಿದ್ದು, ಸಂಪನ್ಮೂಲ ಕ್ರೋಡೀಕರಣ ಕಸರತ್ತು ನಡೆದಿದೆ.

ಬಜೆಟ್ ಮಂಡನೆಗೆ ಜುಲೈ 7ರ ಮುಹೂರ್ತ ನಿಗದಿ ಆಗಿದೆ. ಇದಕ್ಕೆ ಪೂರಕವಾಗಿ ಹಣಕಾಸು ಇಲಾಖೆ ನೇತೃತ್ವದಲ್ಲಿ ಸರ್ವ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. ಮುಂದಿನ ಎಂಟು ತಿಂಗಳ ಅವಧಿಗೆ ಆಯವ್ಯಯದಲ್ಲಿ ಮಾಡಬಹುದಾದ ವೆಚ್ಚಗಳನ್ನು ಅಂತಿಮಗೊಳಿಸಲು ಹಣಕಾಸು ಇಲಾಖೆ ಪ್ರತಿಯೊಂದು ಇಲಾಖೆಯಿಂದ ಮಾಹಿತಿ ಬಯಸಿದೆ. ಜತೆಗೆ, ಇನ್ನೊಂದು ಮಹತ್ವದ ಸಂಗತಿಯನ್ನೂ ಪ್ರಸ್ತಾಪಿಸಿದೆ. ಸರ್ಕಾರ ಬದಲಾವಣೆಯಾದ ಕಾರಣ ಹೊಸ ಬಜೆಟ್ ಮಂಡಿಸುತ್ತಿದ್ದು, 2023-24ರ ಹಣಕಾಸು ವರ್ಷದ ಹೊಸ ಬಜೆಟನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಮಂಡಿಸಲಾಗುವುದು. ಹೀಗಾಗಿ ತಮ್ಮ ತಮ್ಮ ಇಲಾಖೆಗಳ ಹೊಸ ಕಾರ್ಯಕ್ರಮಗಳು, ಬಜೆಟ್ ಪ್ರಕಟಣೆಗಳನ್ನು ಪ್ರಸ್ತಾಪಿಸಿ ಜೂ.12ರೊಳಗೆ ಹಣಕಾಸು ಇಲಾಖೆಗೆ ಕಳುಹಿಸಿ ಎಂದು ಸೂಚಿಸಲಾಗಿದೆ.

ಐದು ಪ್ರಮುಖ ಗ್ಯಾರಂಟಿಗೆ ಗಮನಾರ್ಹ ಪ್ರಮಾಣದಲ್ಲಿ ಹಣಕಾಸು ಒದಗಿಸಬೇಕಾಗಿರುವುದರಿಂದ ಹೆಚ್ಚಿನ ಹಣಕಾಸಿನ ಸಂಪನ್ಮೂಲಗಳಿಗೆ ಬೇಡಿಕೆ ಇದೆ. ಹೀಗಾಗಿ ಹೊಸ ಘೊಷಣೆಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಇಲಾಖೆಗಳಿಗೆ ತಿಳಿಸಲಾಗಿದೆ.

‘ಗ್ಯಾರಂಟಿ’ಗಳಿಗಾಗಿ ಚಾಲ್ತಿಯಲ್ಲಿರುವ ಹಲವು ಯೋಜನೆಗಳನ್ನು ಕೊನೆಗಾಣಿಸುವುದು ಅನಿವಾರ್ಯವಾಗಿದೆ. ಅಲ್ಲದೇ ಕೇಂದ್ರದ ಹಲವು ಯೋಜನೆಗಳು ರಾಜ್ಯದ ಯೋಜನೆಗಳೊಂದಿಗೆ ಪುನರಾವರ್ತಿತವಾಗುವಂತಿವೆ. ಅಂಥವನ್ನು ಗುರುತಿಸಿ ಕೈಬಿಡುವಂತೆ ಸೂಚ್ಯವಾಗಿ ತಿಳಿಸಲಾಗಿದೆ. ಹೀಗಾಗಿ ಕೊನೆಗೊಳಿಸಬಹುದಾದ, ವೆಚ್ಚ ಕಡಿತಗೊಳಿಸಬಹುದಾದ ಚಾಲ್ತಿಯಲ್ಲಿರುವ ಯೋಜನೆಗಳ ಪಟ್ಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಗ್ಯಾರಂಟಿಗೆ ಬೇಕು ವರ್ಷಕ್ಕೆ 40 ಸಾವಿರ ಕೋಟಿ ರೂ.

ಈ ಬಜೆಟ್ ಮುಂದಿನ ಎಂಟು ತಿಂಗಳಿಗೆ ಅನ್ವಯವಾಗುವ ಕಾರಣ ಐದು ಗ್ಯಾರಂಟಿ ಅನುಷ್ಠಾನಕ್ಕಾಗಿ 40 ಸಾವಿರ ಕೋಟಿ ರೂ. ವರೆಗೂ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಆ ಹಣವನ್ನು ಹೊಂದಿಸುವ ಕೆಲಸ ನಡೆದಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿಗೆ ಒಂದು ವರ್ಷಕ್ಕೆ 50- 60 ಸಾವಿರ ಕೋಟಿ ರೂ.ವರೆಗೂ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಅರ್ಜಿ ಸ್ವೀಕಾರ, ಫಲಾನುಭವಿಯ ಅರ್ಹತೆ ಆಧಾರದಲ್ಲಿ ಎಷ್ಟು ಮೊತ್ತ ಬೇಕಾಗಬಹುದೆಂದು ಸ್ಪಷ್ಟವಾಗಲಿದೆ. ಪ್ರಸ್ತುತ ಗರಿಷ್ಠ ಲೆಕ್ಕದ ಅಗತ್ಯ ಗಮನದಲ್ಲಿಟ್ಟುಕೊಂಡು ತಯಾರಿ ನಡೆಸಲಾಗಿದೆ.

ಯಾವ ಯೋಜನೆಗಳು ಟಾರ್ಗೆಟ್?

  • 25ರಿಂದ 100 ಕೋಟಿ ರೂ. ಮೊತ್ತದ ಹಲವು ಯೋಜನೆಗಳಿವೆ. ಇವುಗಳ ಅನುಷ್ಠಾನ ಸಂದರ್ಭದಲ್ಲಿ ತಾಲೂಕುವಾರು ಹಂಚಿಕೆ ವೇಳೆ ಕೆಲವು ಲಕ್ಷ ರೂ.ಗಳು ಮಾತ್ರ ಲಭ್ಯವಾಗುತ್ತದೆ. ಅಂತಹ ಯೋಜನೆಗಳಿಂದ ಸಮಾಜದ ಬೆಳವಣಿಗೆಯಾಗಲ್ಲ. ಅಂತಹ ಯೋಜನೆಗಳನ್ನು ಮೊದಲು ಗುರುತಿಸುವಂತೆ ತಿಳಿಸಲಾಗಿದೆ.
  • ಬಿಜೆಪಿ ಸರ್ಕಾರದಲ್ಲಿ ಹೊಸದಾಗಿ ಜಾರಿಗೆ ತಂದ ಯೋಜನೆಗಳನ್ನು ಸ್ಪಷ್ಟವಾಗಿ ಗುರುತಿಸಿ, ಅದಕ್ಕೆ ಕೊನೆಹಾಡುವುದು ಅಥವಾ ಸ್ವರೂಪ ಬದಲಿಸುವುದು.
  • ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಕಡೆಯಿಂದ ರೈತರಿಗೆ ವಾರ್ಷಿಕ 4 ಸಾವಿರ ರೂ. ನೀಡಲಾಗುತ್ತಿದೆ. ವಿದ್ಯಾನಿಧಿ ಸ್ಕಾಲರ್​ಶಿಪ್ ಯೋಜನೆಗೆ ಹೆಚ್ಚಿನ ಹಣದ ಹರಿವು ಇದೆ. ಇಂತಹ ಡಿಬಿಟಿ ಆಧಾರಿತ ಯೋಜನೆಗೆ ಕೊಕ್ಕೆ ಬೀಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net