ಬಿಸಿಯೂಟಕ್ಕಾಗಿ ಬಿರುಬಿಸಿಲಲ್ಲಿ ಮಕ್ಕಳ ಪಾದಯಾತ್ರೆ!

s
Published on

2-3 ಕಿ.ಮೀ. ನಡೆದು ಆಹಾರ ಪಡೆಯುವ ಅನಿವಾರ್ಯತೆ ಬರಪೀಡಿತ ತಾಲೂಕುಗಳಲ್ಲಿ ದುಸ್ಥಿತಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯದಲ್ಲಿ ಹಿಂದೆಂದೂ ಕಾಣದ ಬಿಸಿಲಿನ ಬೇಗೆ ಕಂಡುಬಂದಿದ್ದು, ಮನೆಯಿಂದ ಹೊರಗೆ ಕಾಲಿಡಲೂ ಜನರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕಾಗಿ 2-3 ಕಿ.ಮೀ. ದೂರ ನಡೆದು ಹೋಗಿ ಊಟ ಮಾಡಬೇಕಾಗಿದೆ. ಹಲವು ಜಿಲ್ಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಶಿಕ್ಷಣ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ 223 ಬರಪೀಡಿತ ತಾಲೂಕುಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಬಿಸಿಯೂಟ ವಿತರಣೆಗೆ ಗುರುತಿಸಿರುವ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ 2-3 ಕಿ.ಮೀ. ದೂರದಲ್ಲಿವೆ. ಸುಡುವ ಬಿಸಿಲಿನಲ್ಲಿ ಊಟಕ್ಕಾಗಿ ಮಕ್ಕಳು ನಡೆದುಕೊಂಡು ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಬೇಸಿಗೆ ರಜೆಯಿದ್ದರೂ ಮಕ್ಕಳಿಗೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 41 ದಿನ ಬಿಸಿಯೂಟ ವಿತರಣೆ ಮಾಡಲಾಗುತ್ತದೆ. ಮಕ್ಕಳ ಹಿತದೃಷ್ಟಿ ಪರಿಗಣಿಸಿ ಬಿಸಿಯೂಟ ವಿತರಣೆಯ ಕೇಂದ್ರವನ್ನು ನಿಗದಿ ಮಾಡಬೇಕು. ಯೋಜನೆ ಅನುಷ್ಠಾನಕ್ಕೆ ಶಾಲೆಗಳ ಪಟ್ಟಿಯನ್ನು ಡೈಸ್ ಮಾಹಿತಿ ಆಧಾರದ ಮೇಲೆ ಗುರುತಿಸಿ ಅಂತಿಮಗೊಳಿಸಬೇಕು. ಆಯಾ ಶಾಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮ್ಯಾಪಿಂಗ್ ಕಾರ್ಯವನ್ನು ಸಹಯೋಗದಲ್ಲಿ ಮಾಡಬೇಕು ಎಂದು ಶಾಲಾ ಶಿಕ್ಷಣ ಆಯುಕ್ತರು ಸೂಚಿಸಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಶಾಲೆಯನ್ನು ಗುರುತಿಸುವ ವೇಳೆ ಹೆಚ್ಚು ಮಕ್ಕಳಿರುವ ಶಾಲೆಯನ್ನು ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಇದರಿಂದ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಮಕ್ಕಳು ನಡೆದುಕೊಂಡು ಹೋಗಬೇಕಿದೆ. ಗ್ರಾಮದಿಂದ ಗ್ರಾಮಕ್ಕೆ ಕನಿಷ್ಠ 2-3 ಕಿ.ಮೀ. ಇರುವುದರಿಂದ ಸುಡುವ ಬಿಸಿಲಿನಲ್ಲಿ ಹೋಗಿ ಬರಲು ಮಕ್ಕಳಿಗೆ ಆಯಾಸವಾಗುತ್ತಿದೆ. ಸರ್ಕಾರದ ಯೋಜನೆ ಜನೋಪಕಾರಿಯಾಗಿದ್ದರೂ, ಅನುಷ್ಠಾನದಲ್ಲಿ ಸ್ಥಳೀಯ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಪಾಲಕರ ಸಲಹೆಗಳೇನು?: ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಬಿಸಿಯೂಟವನ್ನು ಆಯಾ ಶಾಲೆಗಳಲ್ಲಿಯೇ ವಿತರಣೆ ಮಾಡುವುದು ಉತ್ತಮ. ಒಂದು ಕಿ.ಮೀ. ನೊಳಗೆ ಕೇಂದ್ರವಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ, 2-3 ಕಿ.ಮೀ. ನಡೆದುಕೊಂಡು ಹೋಗುವುದು ಸರಿಯಾದ ಕ್ರಮವಲ್ಲ. ದೂರದ ಗ್ರಾಮಗಳಿಗೆ ಮಕ್ಕಳು ನಡೆದುಕೊಂಡು ಹೋಗುವುದನ್ನು ತಪ್ಪಿಸಲು ವಾಹನ ವ್ಯವಸ್ಥೆ ಮಾಡಿ, 5ರಿಂದ 10 ಮಕ್ಕಳಿರುವ ಜಾಗಕ್ಕೆ ಊಟ ತಲುಪಿಸುವ ಕ್ರಮ ಮಾಡಬಹುದೇ ಎಂಬ ಬಗ್ಗೆ ಯೋಚಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net