

ಲಖೀಂಪುರ ಖೇರಿ, ಉತ್ತರಪ್ರದೇಶ: ಅಂಗನವಾಡಿಯಿಂದ ಮನೆಗೆ ಹೋಗುತ್ತಿದ್ದ ಇಬ್ಬರು ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು, ಗೋಣಿಚೀಲದೊಳಗೆ ತುಂಬಿ ಕಬ್ಬಿನ ಗದ್ದೆಗೆ ಎಸೆದು ಪರಾರಿಯಾದ ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿರುವ ಎಘರಾ ಗ್ರಾಮದಲ್ಲಿ ವರದಿಯಾಗಿದೆ.
ಇಬ್ಬರು ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು, ಒಂದು ಮಗುವನ್ನು ಮಾತ್ರ ಗೋಣಿಚೀಲದಲ್ಲಿ ತುಂಬಿ ಗ್ರಾಮದ ಕಬ್ಬಿನ ಗದ್ದೆಗೆ ಎಸೆದು ಹೋಗಿದ್ದರು. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.
ಮಕ್ಕಳನ್ನು ಗೋಣಿಚೀಲದಲ್ಲಿ ತುಂಬಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅಂಗನವಾಡಿಯಿಂದ ಬರಬೇಕಿದ್ದ ಮಕ್ಕಳು ಇನ್ನೂ ಬರಲಿಲ್ಲ ಎಂದು ಗಾಬರಿಗೊಂಡ ಪೋಷಕರು, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದ ಬಳಿಕ ಕಬ್ಬಿನ ಗದ್ದೆಯಲ್ಲಿ ನೋಡಿದಾಗ ಗೋಣಿಚೀಲವನ್ನು ಪತ್ತೆಹಚ್ಚಿದ ಕುಟುಂಬಸ್ಥರು, ಅದನ್ನು ತೆರೆದು ಮಗುವನ್ನು ರಕ್ಷಿಸಿದ್ದಾರೆ.
ಮತ್ತೊಂದು ಮಗು ಅದೇ ಸ್ಥಳದಿಂದ ಸ್ವಲ್ಪ ದೂರದಲ್ಲಿ ಸಿಕ್ಕಿದೆ. ಮಕ್ಕಳನ್ನು ಇಂದರ್ಪಾಲ್ ಮಗ ಅಂಕಿತ್ (4) ಮತ್ತು ಅವನೀಶ್ ಮಗ ಅನಿಕೇತ್ (4) ಎಂದು ಗುರುತಿಸಲಾಗಿದ್ದು, ಇಬ್ಬರೂ ಎಘರಾ ಗ್ರಾಮದ ನಿವಾಸಿಗಳು ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಂದೆ ಮತ್ತು ಮಗನಾಗಿದ್ದು, ರಾಕೇಶ್ ಮತ್ತು ಆತನ ಮಗ ನರ್ವೀರ್ ಎಂದು ಗುರುತಿಸಲಾಗಿದೆ.
ಸದ್ಯ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಮಕ್ಕಳನ್ನು ಮಾರಾಟ ಮಾಡಲು ತಂದೆ-ಮಗ ಯೋಜಿಸಿ, ನಮ್ಮ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಮಗುವಿನ ತಂದೆಯೊಬ್ಬರು ಹೇಳಿದ್ದಾರೆ. ಆದರೆ, ಈ ಪ್ರಕರಣ ಕುರಿತು ಇದೀಗ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).