BBKS10: ರೊಚ್ಚಿಗೆದ್ದ ಮನೆಮಂದಿ; ಸಂಗೀತಾ-ಕಾರ್ತಿಕ್ ವ್ಯಕ್ತಿತ್ವ ಮಾತಿನಲ್ಲೇ ಚಿಂದಿ!

Untitled design (6)
Published on

ಬೆಂಗಳೂರು: ಬಿಗ್‌ಬಾಸ್‌ ಮನೆಯ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ದಿನಕಳೆದಂತೆ ಸ್ನೇಹಗಳು, ಸಂಬಂಧಗಳೆಲ್ಲ ಮೆಲ್ಲಗೆ ಹಿಂದೆ ಸರಿದು ಸ್ಪರ್ಧಿಗಳ ಅಸಲಿ ಬಣ್ಣ ಹೊರಬರುತ್ತಿದೆ.

ಹೊಸ ಹೊಸ ರೀತಿಯ ಟಾಸ್ಕ್‌ಗಳ ಮೂಲಕ ವೀಕ್ಷಕರ ಎದುರು ಹಾಜರಾಗುತ್ತಿರುವ ಬಿಗ್‌ಬಾಸ್‌ ಸ್ಪರ್ಧಿಗಳು , ಮಾತಿನ ಹಿಡಿತ, ಬಳಸುವ ಪದಗಳ ಬಗ್ಗೆ ಹೆಚ್ಚು ಗಮನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಇದೀಗ ಸಂಗೀತಾ ಮತ್ತು ಕಾರ್ತಿಕ್​ ವಿರುದ್ಧ ಮನೆಮಂದಿ ರೊಚ್ಚಿಗೆದ್ದಿದ್ದು, ವ್ಯಕ್ತಿತ್ವವನ್ನು ಮಾತಿನಲ್ಲೇ ಚಿಂದಿ ಮಾಡಿದ್ದಾರೆ.

ಕಾರ್ತಿಕ್​ ಮತ್ತು ಸಂಗೀತಾ ಒಂದೊಂದು ಚೇರಿನಲ್ಲಿ ಕೂತಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳೆಲ್ಲ ಅವರ ಎದುರಿಗೆ ಬಂದು ಅವರನ್ನು ಹೀನಾಮಾನವಾಗಿ ಬೈಯುತ್ತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ, ಅವರು ಹಿಂದೆ ಆಡಿದ ಮಾತುಗಳ ಬಗ್ಗೆ ಹಾಗೂ ಇತರೆ ಘಟನೆಗಳನ್ನು ಮೆಲುಕು ಹಾಕಿ ಕೆಣಕುತ್ತಿದ್ದಾರೆ. ಆದರೂ ಸಹ ಸಂಗೀತಾ ಮತ್ತು ಕಾರ್ತಿಕ್ ತಲೆಬಗ್ಗಿಸಿ, ಒಂದೂ ಮಾತಾಡದೆ ಕುಳಿತಿರುವುದು ವೀಕ್ಷಕರಿಗೆ ಆಶ್ಚರ್ಯ ತಂದಿದೆ.

ತಲೆತಗ್ಗಿಸಿ ಕೂತಿದ್ದ ಕಾರ್ತಿಕ್ ಬಳಿ ಬಂದು ವಿನಯ್, ‘ಫ್ರೆಂಡಾ ನೀನು? ಒಬ್ಬ ಒಂಟಿ ಮನುಷ್ಯನಾಗೇ ಉಳಿಯೋದು ನಿನ್ ಜೀವನದಲ್ಲಿ’ ಎಂದು ಗುಡುಗಿದ್ದಾರೆ. ಇವರ ಬೆನ್ನಲ್ಲೇ ಸಂಗೀತಾ ಎದುರಿಗೆ ನಿಂತ ನಮ್ರತಾ, ‘ಯಾವೊಳು ಬಕೆಟ್ ಹಿಡಿಯೋದು? (ಕಾರ್ತಿಕ್ ತೋರಿಸಿ) ಅಲ್ಲಿ ಕೂತಿದಾನಲ್ಲಾ ಅವ್ನು ಬಕೆಟ್ ಹಿಡಿಯೋದು’ ಎಂದು ಕಿರುಚಿದ್ದಾರೆ.

ಮನೆಯ ಸದಸ್ಯರು ಕಾರ್ತಿಕ್​ ಮತ್ತು ಸಂಗೀತಾ ಎದುರು ಬಂದು ಎಷ್ಟೇ ಕಿರುಚಾಡಿದರು ಒಂದು ಮಾತು ಆಡದೆ, ಮೌನವಾಗಿ ಕುಳಿತ್ತಿದ್ದಾರೆ. ಇದು ಟಾಸ್ಕ್ ಆಗಿದ್ಯಾ​ ಅಥವಾ ಶಿಕ್ಷೆಯಾ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net