More

    ಜಿಲ್ಲೆಗೆ ಮಲ್ಲಿಕಾರ್ಜುನ ಕೊಡುಗೆಯೇನು? -ಬಿಜೆಪಿ ಮುಖಂಡ ಜಯಪ್ರಕಾಶ್ ಕೊಂಡಜ್ಜಿ ಪ್ರಶ್ನೆ

    ದಾವಣಗೆರೆ: ಎರಡು ಬಾರಿ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆ ನಗರ ಹೊರತುಪಡಿಸಿ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಬಿಜೆಪಿ ಮುಖಂಡ ಜಯಪ್ರಕಾಶ್ ಕೊಂಡಜ್ಜಿ ಪ್ರಶ್ನಿಸಿದರು.

    ದಾವಣಗೆರೆಯಲ್ಲಿ ಕಾಂಕ್ರಿಟ್ ರಸ್ತೆ, ಕುಂದುವಾಡ ಕೆರೆ ಹಾಗೂ ಗಾಜಿನಮನೆ ಹೊರತುಪಡಿಸಿದರೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಮಲ್ಲಿಕಾರ್ಜುನ್ ತೋಟಗಾರಿಕೆ ಸಚಿವರಾಗಿದ್ದರೂ ಜಿಲ್ಲೆಗೆ ಒಂದು ತೋಟಗಾರಿಕೆ ಅಥವಾ ಕೃಷಿ ಕಾಲೇಜು ಮಂಜೂರು ಮಾಡಿಸಲಿಲ್ಲ. ಬೇರೆಯವರ ಪ್ರಗತಿ ಕಾರ್ಡ್ ಕೇಳುವ ಸಚಿವರು ಜಿಲ್ಲೆಗೆ ತಾವೇನು ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ ಎಂದರು.
    ಸಂಸದ ಜಿ.ಎಂ.ಸಿದ್ದೇಶ್ವರ ಅವರು 2016 ರಲ್ಲಿ ನಗರಾಭಿವೃದ್ಧಿ ಸಚಿವರಿಗೆ ಒತ್ತಡ ಹೇರಿದ ಪರಿಣಾಮ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ಸಿಕ್ಕಿದೆ. ಸ್ಮಾರ್ಟ್‌ಸಿಟಿಯಲ್ಲಿ ಸಂಸದರ ಪಾತ್ರ ಇಲ್ಲವೆಂದರೆ ಕುಂದುವಾಡ ಕೆರೆ ಹಾಗೂ ಗಾಜಿನಮನೆ ಎರಡರಲ್ಲೂ ನಿಮ್ಮ ಪಾತ್ರ ಶೂನ್ಯ ಎಂದು ಹೇಳಿದರು.
    ಸಚಿವ ಮಲ್ಲಿಕಾರ್ಜುನ್, ಸಂಸದರು ಯಾವ ಯೋಜನೆ ಹಾಗೂ ಎಷ್ಟು ಹಣ ತಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಂಸದರ ನಿಧಿ ಬಳಸಿ ಕೇಂದ್ರ ಸರ್ಕಾರಕ್ಕೆ ಪ್ರಮಾಣಪತ್ರ ನೀಡಿದ ಬಳಿಕವೇ ಇನ್ನುಳಿದ ಅನುದಾನ ಬಿಡುಗಡೆಯಾಗುತ್ತದೆ ಎಂಬುದು ಸಚಿವರಿಗೆ ತಿಳಿದಿಲ್ಲವೆ? 2004 ರಿಂದ ಈವರೆಗೆ 75 ಕೋಟಿ ರೂ. ಗಳಷ್ಟು ಸಂಸದರ ಅನುದಾನ ಸುಮ್ಮನೆ ಬಂದಿದೆಯೇ ಎಂದು ಎಂದರು.
    ಸಂಸದರು ಹಾಗೂ ನನ್ನ ವಿರುದ್ಧ ಬಾಲಿಷ ಹಾಗೂ ಹೇಳಿಕೆ ನೀಡಿರುವುದು ಸರಿಯಲ್ಲ. 1996 ರಿಂದ 2008ರ ವರೆಗೆ ಜೆಪಿ ಏನು ಎಂಬುದು ತಮಗೆ ತಿಳಿದಿಲ್ಲವೇ ಎಂದು ಎಸ್ಸೆಸ್ಸೆಂ ಅವರನ್ನು ಪ್ರಶ್ನಿಸಿದರು.
    ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮಲ್ಲಿಕಾರ್ಜುನ್ ಅವರು ತಮ್ಮ ಸ್ವಂತ ಕೆಲಸಗಳಿಗೆ ಯಾರ ಕೈಕಾಲು ಹಿಡಿದಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ಹೇಳುತ್ತೇವೆ. ಬಿಜೆಪಿ ನಾಯಕರು ಆ ರೀತಿ ಮಾಡಿದ್ದರೆ ಬಹಿರಂಗಪಡಿಸಲಿ ಎಂದು ಪ್ರತಿಕ್ರಿಯಿಸಿದರು. ರಾಜನಹಳ್ಳಿ ಶಿವಕುಮಾರ್, ಶಿವರಾಜ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts