

| ವಿಲಾಸ ಮೇಲಗಿರಿ ಬೆಂಗಳೂರು
ರಾಜ್ಯ ಸರ್ಕಾರ ಸರ್ಕಾರಿ ಮಹಿಳಾ ನೌಕರರಿಗೆ 180 ದಿನಗಳ ಶಿಶುಪಾಲನಾ ರಜೆ ಸೌಲಭ್ಯ ಕಲ್ಪಿಸಿದೆಯಾದರೂ ಈ ಕುರಿತು ಹೊರಡಿಸಿರುವ ಆದೇಶದಲ್ಲಿನ ಲೋಪಗಳು ಗೊಂದಲದ ಗೂಡಾಗಿವೆ. ಆದೇಶದಲ್ಲಿನ ಅಸ್ಪಷ್ಟತೆಯ ಲಾಭ ಪಡೆಯುತ್ತಿರುವ ಕೆಲವು ಮಹಿಳಾ ನೌಕರರು ಬೇಕಾಬಿಟ್ಟಿ ರಜೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 3 ಲಕ್ಷ ಸರ್ಕಾರಿ ಮಹಿಳಾ ನೌಕರರಿದ್ದು, ಮುಂದಿನ ದಿನಗಳಲ್ಲಿ ಸುಮಾರು 5.40 ಕೋಟಿ ಮಾನವ ದಿನಗಳು ರಜೆಗಾಗಿ ಬಳಕೆಯಾಗುವ ಸಾಧ್ಯತೆಗಳಿವೆ. 2021-22ನೇ ಸಾಲಿನ ಬಜೆಟ್ನಲ್ಲಿ ಯಡಿಯೂರಪ್ಪ ಸರ್ಕಾರ ಶಿಶುಪಾಲನಾ ರಜೆ ಘೋಷಿಸಿತ್ತು. ಅದರನ್ವಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಮಹಿಳಾ ನೌಕರರು ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ರಜೆ ಸೌಲಭ್ಯ ಪಡೆಯಬಹುದಾಗಿದೆ.
18 ವರ್ಷದ ಶಿಶು!: ಮಹಿಳಾ ಸರ್ಕಾರಿ ನೌಕರಳು ಹೊಂದಿರುವ ಮಕ್ಕಳ ಸಂಖ್ಯೆ ಪರಿಗಣಿಸದೆ, ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಈ ರಜೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಈ ರಜೆ ಅವಧಿಯಲ್ಲಿ ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಪಡೆಯಲು ಅರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಆಡಳಿತದ ಮೇಲೆ ಪರಿಣಾಮ: 18 ವರ್ಷ ಹತ್ತಿರವಿರುವ ಮಕ್ಕಳನ್ನು ಹೊಂದಿರುವ ಮಹಿಳಾ ನೌಕರರಂತೂ ರಜೆ ಪಡೆಯಲು ಮೇಲಧಿಕಾರಿಗಳಿಗೆ ಮುಗಿಬಿದ್ದಿದ್ದಾರೆ. ಇದರಿಂದ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಉನ್ನತಾಧಿಕಾರಿಗಳು ಹೇಳುತ್ತಾರೆ.
ಒಂದೇ ಸಲ ರಜೆ: ಬೆಳಗಾವಿ ಜಿಲ್ಲೆಯ ಶಾಲೆಯೊಂದರಲ್ಲಿ ಐವರು ಶಿಕ್ಷಕರಿದ್ದು, ಆ ಪೈಕಿ ನಾಲ್ವರು ಮಹಿಳಾ ಶಿಕ್ಷಕರು ಶಿಶುಪಾಲನಾ ರಜೆ ಮಂಜೂರಿಗೆ ಒಂದೇ ಬಾರಿ ಮನವಿ ಮಾಡಿದ್ದಾರೆ! ಯಾರಿಗೆ ರಜೆ ಕೊಡಬೇಕು? ಎಷ್ಟು ಮಂದಿಗೆ ರಜೆ ಕೊಡಬೇಕು? ಎಂಬುದು ಅಲ್ಲಿನ ಮೇಲಧಿಕಾರಿಗಳಿಗೆ ತಲೆನೋವಾಗಿದೆ.
ಬಿಇಒಗಳಿಗೂ ಗೊಂದಲ: ತಮ್ಮ ತಾಲೂಕಿನ ಒಂದೇ ಶಾಲೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳಾ ಶಿಕ್ಷಕರು ಶಿಶುಪಾಲನಾ ರಜೆ ಕೇಳಿದ್ದಾರೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನೋಡಿದಲ್ಲಿ ಉದ್ಭವಿಸುವ ಸಮಸ್ಯೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆ ಉಂಟಾಗಿ ಸಾರ್ವಜನಿಕರು ಈ ಕುರಿತು ಪ್ರಶ್ನೆಯನ್ನು ಎತ್ತುವ ಸನ್ನಿವೇಶಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅಲ್ಲದೆ ಶಿಶುಪಾಲನಾ ರಜೆಯ ಆದೇಶದಲ್ಲಿ ಯಾವುದೇ ಸ್ಪಷ್ಟ ಸೂಚನೆಗಳಿಲ್ಲ. ಹೀಗಾಗಿ ಶಿಶುಪಾಲನಾ ರಜೆ ಮಂಜೂರಿಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ಉದ್ಭವಿಸಲಿವೆ. ಈ ಸಂಬಂಧ ಸ್ಪಷ್ಟ ನಿರ್ದೇಶನ ನೀಡುವಂತೆ ಸಕಲೇಶಪುರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಸನ ಜಿಲ್ಲಾ ಡಿಡಿಪಿಐ ಅವರನ್ನು ಕೋರಿದ್ದಾರೆ. ಈ ಪತ್ರವನ್ನಾಧರಿಸಿ ಡಿಸಿಪಿಐ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ.
ಬಿಇಒಗಳಿಗೆ ಬೇಡಿಕೆ: ಶಿಕ್ಷಕಿಯರು ಶಿಶುಪಾಲನಾ ರಜೆ ಪಡೆಯಲು ಬಿಇಒ ಕಚೇರಿ ಅಲೆಯಲು ಶುರುಮಾಡಿದ್ದಾರೆ. ಇನ್ನು ಕೆಲವರು ವಶೀಲಿಬಾಜಿ, ಪ್ರಭಾವ ಬೀರಿ ರಜೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಶಿಶು ಪದಕ್ಕೆ ಸ್ಪಷ್ಟನೆ ಎಲ್ಲಿ?: ಶಿಶು ಎಂದರೆ ಯಾರು? ಎಷ್ಟು ವರ್ಷ ಮಗುವನ್ನು ಶಿಶುವೆಂದು ಪರಿಗಣಿಸಬಹುದು? ಎಂಬ ಜಿಜ್ಞಾಸೆ ಈಗ ಸರ್ಕಾರಿ ನೌಕರರ ವಲಯದಲ್ಲಿ ತಲೆ ಎತ್ತಿದೆ. 18 ವರ್ಷದವರೆಗಿನ ಮಕ್ಕಳ ಪಾಲನೆ ಹೆಸರಲ್ಲಿ ಸರ್ಕಾರ ಶಿಶುಪಾಲನಾ ರಜೆ ನೀಡುತ್ತದೆ. ಹಾಗಾಗಿ 18 ವರ್ಷದ ವರೆಗಿನ ಎಲ್ಲ ಮಕ್ಕಳೂ ಶಿಶುಗಳೆ? ಆ ಎಲ್ಲ ಮಕ್ಕಳಿಗೂ ಆರೈಕೆಯ ಅವಶ್ಯಕತೆ ಇದೆಯೆ ಎಂಬ ವಿಷಯ ಚರ್ಚೆಯ ವಸ್ತುವಾಗಿದೆ.
ಇವರಿಗಷ್ಟೇ ಷರತ್ತು ಏಕೆ?: ವಿಚಿತ್ರವೆಂದರೆ, ಇದೇ ಆದೇಶದ ಮೇಲ್ಭಾಗದಲ್ಲಿ, ಬುದ್ಧಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರದ ಆಧಾರದ ಮೇಲೆ ಕೆಲವು ಷರತ್ತಿಗೆ ಒಳಪಟ್ಟು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಇಡೀ ಸೇವಾವಧಿಯಲ್ಲಿ ಎರಡು ವರ್ಷಗಳ ಅವಧಿಗೆ ಅಂದರೆ, 730 ದಿನ ಶಿಶುಪಾಲನಾ ರಜೆ ಮಂಜೂರು ಮಾಡಲಾಗಿದೆ. ಆದರೆ, ಇತರ ಮಹಿಳಾ ನೌಕರರಿಗೆ ಯಾವುದೇ ವೈದ್ಯಕೀಯ ಮಂಡಳಿ ಪ್ರಮಾಣಪತ್ರವನ್ನಾಗಲಿ, ರಜೆ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ದಾಖಲೆಯನ್ನಾಗಲಿ ಕೇಳಿಲ್ಲ. ಇದರಿಂದ 18 ವರ್ಷದ ಒಳಗಿನ ಮಕ್ಕಳಿರುವ ಮಹಿಳಾ ಸರ್ಕಾರಿ ನೌಕರರೆಲ್ಲ ರಜೆ ಪಡೆಯುತ್ತಿದ್ದಾರೆ.
ದಾಖಲೆ ಇಲ್ಲದೆ ರಜೆ: ಶಿಶುಪಾಲನಾ ರಜೆ ಮಂಜೂರಾತಿಗಾಗಿ ಯಾವುದೇ ಪೂರಕ ದಾಖಲೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಮಹಿಳಾ ನೌಕರರು ಶಿಶುಪಾಲನಾ ರಜೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸಮಯ, ಸಂದರ್ಭ, ಅವಶ್ಯಕತೆ ಅನುಗುಣವಾಗಿ ರಜೆ ಸೌಲಭ್ಯ ಪಡೆಯಬೇಕು. ಶಾಲೆ, ಕಾಲೇಜು, ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಹಕರಿಸಬೇಕು.
| ಸಿ.ಎಸ್. ಷಡಾಕ್ಷರಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ