ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!

Borewell
Published on

ಚಿಕ್ಕಮಗಳೂರು: ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಅಚ್ಚರಿಯ ಘಟನೆ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದ್ದು, ಈ ಅಪರೂಪದ ಕ್ಷಣವನ್ನು ಸಾಕಷ್ಟು ಜನರು ಕಣ್ತುಂಬಿಕೊಂಡಿದ್ದಾರೆ.

ಬೋರ್​ವೆಲ್​​ ಕೊರೆಯುವ ಲಾರಿಗಿಂತ ಹೆಚ್ಚು ಎತ್ತರಕ್ಕೆ ನೀರು ಚಿಮ್ಮಿದೆ. ಚಿಕ್ಕದೇವನೂರು ಗ್ರಾಮದ ನಿವಾಸಿ ಶೇಖರಪ್ಪ ಎಂಬುವರ ತೋಟದಲ್ಲಿ ಈ ಅಪರೂಪದ ವಿದ್ಯಾಮಾನ ಜರುಗಿದೆ.

ಹೊಸ ಬೋರ್​ವೆಲ್​ನಲ್ಲಿ 50 ಅಡಿಗೆ ನೀರು ಸಿಕ್ಕರೆ, ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ನೀರು ಹಾರಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿದ ಬೋರ್​ವೆಲ್​ನಿಂದ ಅಂತರ್ಜಲ ಚಿಮ್ಮಿದ್ದು, ಹಳೆ ಬೋರ್​ವೆಲ್​ ಕೇಸಿಂಗ್ ಪೈಪ್ ಬಂದ್ ಮಾಡಿ ಹೊಸ ಬೋರ್​ವೆಲ್​ ಕೊರೆದಿದ್ದಾರೆ.

ಇದೀಗ ಬತ್ತಿದ್ದ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರನ್ನು ನೋಡಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿದರು. ನೀರು ಚಿಮ್ಮುವ ರೀತಿಯನ್ನು ನೋಡಿ ಹುಬ್ಬೇರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗಿದೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಬರದ ತವರು ಕಡೂರಲ್ಲಿ ಸಮೃದ್ಧ ಮಳೆಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net