‘ಹಿಜಾಬ್‍ಗೆ ಅವಕಾಶವಿಲ್ಲ- ಸಮವಸ್ತ್ರವೇ ಕಡ್ಡಾಯ’ ಎಂದು ಆದೇಶ ಮಾಡಿದ ಚಿಕ್ಕಮಗಳೂರಿನ ಕಾಲೇಜು…

New Project
Published on

ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಬುರ್ಖಾ- ಹಿಜಾಬ್ ಧರಿಸಿ ಅಡ್ಡಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಶುರುವಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಒಳಗಾಗಿತ್ತು. ಕೊನೆಗೆ ನ್ಯಾಯಾಲಯದಿಂದಲೂ ಸಮವಸ್ತ್ರದ ಪರವಾಗಿ ಆದೇಶ ಬಂದಿತ್ತು. ಅದಾದ ಮೇಲೆ ಇರಾನ್‍ನಲ್ಲಿ ಹಿಜಾಬ್‍ ವಿರೋಧಿ ಚಳವಳಿಯೇ ನಡೆದಿತ್ತು. ಇದಾದ ಮೇಲೆ ವಿವಾದ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ವಿವಾದ ಭುಗಿಲೇಳುವಂತಹ ಪರಿಸ್ಥಿತಿಯೇ ಈ ಕಾಲೇಜಿನಲ್ಲೂ ಶುರುವಾಗಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಐ.ಡಿ.ಎಸ್.ಜಿ. ಕಾಲೇಜು ಅಡಳಿತ ಮಂಡಳಿಯಿಂದ ವಾರದ 6 ದಿನವೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಬಿದ್ದಿದೆ. ಈ ಮೂಲಕ ಶುರುವಾಗಿದ್ದ ವಿವಾದ ತಣ್ಣಗಾಗಿದೆ.

ಆದೇಶದಲ್ಲಿ ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣ ಪ್ರವೇಶಕ್ಕೆ ನಿಷೇಧ ಎಂದು ಉಲ್ಲೇಖಿಸಲಾಗಿದ್ದು ಜತೆಗೆ ಐಡಿ ಕಾರ್ಡ್ ತೋರಿಸಿಯೇ ತರಗತಿಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ನಿನ್ನೆ ಮೊದಲ ವರ್ಷದ ವಿದ್ಯಾರ್ಥಿನಿ ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ಧರಿಸಿ ಕಾಲೇಜಿನ ಕೊಠಡಿಯಲ್ಲಿದ್ದ ವಿಡಿಯೋ ವೈರಲ್ ಅಗಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net