ಮುಂದಿನ ಸಿಎಂ ವಿಚಾರ ಈಗ ಬೇಡ... ಖಡಕ್​ ವಾರ್ನಿಂಗ್​ ಕೊಟ್ಟ ಶಿಸ್ತುಪಾಲನಾ ಸಮಿತಿ!

dks siddu
Published on

ಬೆಂಗಳೂರು: ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಪಕ್ಷದಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ, ತಮ್ಮ ನಾಯಕರು ಮತ್ತು ಕಾರ್ಯಕರ್ತರಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್ ಅಹ್ಮದ್ ಮೊದಲು ವಿಚಾರವೆತ್ತಿದರು. ಬಳಿಕ ಡಿ.ಕೆ.ಶಿವಕುಮಾರ್ ಕಡೆಯಿಂದಲೂ ಕೆಲವು ಶಾಸಕರು ಡಿಕೆಶಿ ಮುಂದಿನ ಸಿಎಂ ಎಂದರು. ಈ ವಿಷಯ ಹೈಕಮಾಂಡ್ ವರೆಗೂ ತಲುಪಿತು. ಉಪ ಚುನಾವಣೆ ನಡೆಯುತ್ತಿರುವಾಗ ಈ ಬೆಳವಣಿಗೆ ಒಳ್ಳೆಯದಲ್ಲ ಎಂಬ ಸಂದೇಶ ಪಕ್ಷದ ದೆಹಲಿ ನಾಯಕರಿಂದ ಬರುತ್ತಿದ್ದಂತೆ ಶಿಸ್ತುಪಾಲನಾ ಸಮಿತಿ ಸಭೆ ನಡೆಸಿದ್ದು, ಭವಿಷ್ಯದ ಶಾಸಕಾಂಗ ಪಕ್ಷದ ನಾಯಕತ್ವದ ಬಗ್ಗೆ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆ.

ನಾಯಕತ್ವ ಕುರಿತ ಪ್ರಶ್ನೆಯನ್ನು ಸಮಯ ಬಂದಾಗ ಪರಿಗಣಿಸುವುದು ಸೂಕ್ತ ಮತ್ತು ಪಕ್ಷದ ಏಕತೆಯ ದೃಷ್ಟಿಯಿಂದ ಎಲ್ಲ ಚುನಾಯಿತ ಪ್ರತಿನಿಧಿಗಳು, ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದರ ಬಗ್ಗೆ ಹೇಳಿಕೆ ನೀಡುವುದರಿಂದ ದೂರ ಇರಬೇಕೆಂದು ಸಮಿತಿ ಸೂಚಿಸಿದೆ. ಇನ್ನು ಈ ವಿಚಾರದಲ್ಲಿ ಹೆಚ್ಚು ಮಾತನಾಡದಂತೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇಲ್ಲಿಗೆ ಮುಗಿಸಲು ಪ್ರಯತ್ನಿಸಿದೆ.

ನಾಯಕರು ಮತ್ತು ಕಾರ್ಯಕರ್ತರು ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್​ ಅನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುವುದು ಸೂಕ್ತವೆಂಬುದು ಶಿಸ್ತು ಸಮಿತಿಯ ಅಭಿಪ್ರಾಯ ಎಂದು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಮತ್ತು ಸಂಚಾಲಕ ನಿವೇದಿತ್ ಆಳ್ವಾ ಸಂದೇಶ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net