ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಗೆ ದಾಳಿ ಮಾಡಿದ ಪೊಲೀಸರು ಶಾಕ್!

Crime
Published on

ಛತ್ತೀಸ್​ಗಢ: 32 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ನೀರಿನ ಟ್ಯಾಂಕ್​ನಲ್ಲಿ ಬಚ್ಚಿಟ್ಟಿದ್ದಾನೆ. ಈ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಕಳೆದ ಜನವರಿ 6ರಂದು ನಡೆದಿದ್ದು, ದಾಂಪತ್ಯದಲ್ಲಿ ಉಂಟಾದ ಕಲಹದಿಂದ ಆರೋಪಿ ತನ್ನ ಪತ್ನಿ ಸತಿ ಸಾಹು (23) ಎಂಬಾಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿರುವುದು ವರದಿಯಾಗಿದೆ.

ಮನೆಯಲ್ಲಿ ನಕಲಿ ನೋಟು ಮುದ್ರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬಿಲಾಸ್‌ಪುರ ಪೊಲೀಸರ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕದ ತಂಡ ದಾಳಿ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದಾಗ ಬಾತ್ ರೂಮ್ ಹತ್ತಿರದ ಕೊಠಡಿಯಿಂದ ದುರ್ವಾಸನೆ ಬರುತ್ತಿತ್ತು. ಪರಿಶೀಲಿಸಿದಾಗ ಕೊಠಡಿಯಲ್ಲಿ ಇರಿಸಲಾಗಿದ್ದ ಖಾಲಿ ನೀರಿನ ಟ್ಯಾಂಕ್​ನಲ್ಲಿ ಟೇಪ್ ಮತ್ತು ಪಾಲಿಥಿನ್‌ನಲ್ಲಿ ಸುತ್ತಿ ಹಾಕಲಾಗಿದ್ದ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಂತೋಷ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಆರೋಪಿ ಮನೆಯ ಬಳಿ ವ್ಯಕ್ತಿಯನ್ನು ಬಂಧಿಸಿ ಆತನ ಬಳಿಯಿದ್ದ ಕಲರ್ ಪ್ರಿಂಟರ್, 500 ಮತ್ತು 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿರುವ ಬಗ್ಗೆ ಹೇಳಿಕೊಂಡಿದ್ದಾನೆ. ನಕಲಿ ನೋಟು ಮುದ್ರಿಸುವ ವಿಚಾರದಲ್ಲೂ ಆಕೆ ಹಸ್ತಕ್ಷೇಪ ಮಾಡುತ್ತಿದ್ದಳು. ಇದು ನಮ್ಮಿಬ್ಬರು ನಡುವೆ ಜಗಳಕ್ಕೆ ಕಾರಣವಾಗಿತ್ತು. ಹೀಗಾಗಿ ಹತ್ಯೆ ಮಾಡಿದೆ ಎಂದು ಆರೋಪಿ ಹೇಳಿದ್ದಾನೆ.

ಆರೋಪಿ ಪತ್ನಿಯನ್ನು ಕೊಂದ ನಂತರ, ಕಟರ್ ಯಂತ್ರವನ್ನು ಖರೀದಿಸಿ, ಮೃತದೇಹವನ್ನು ಐದು ಭಾಗಗಳಾಗಿ ಕತ್ತರಿಸಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ. ಆದರೆ ಸುಟ್ಟ ವಾಸನೆಯಿಂದ ಸಿಕ್ಕಿಹಾಕಿಕೊಳ್ಳಬಹುದೆಂದು ಹೆದರಿ, ಅವರು ನೀರಿನ ತೊಟ್ಟಿಯಲ್ಲಿ ಅವಶೇಷಗಳನ್ನು ಮರೆಮಾಚಲು ನಿರ್ಧರಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ. ಸದ್ಯ ಕೊಲೆ ಮತ್ತು ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net