

| ವಿಲಾಸ ಮೇಲಗಿರಿ ಬೆಂಗಳೂರು
ಕೋವಿಡ್ನಿಂದ ಕುಂಠಿತಗೊಂಡಿದ್ದ ಶಿಕ್ಷಣ ವ್ಯವಸ್ಥೆಯ ಪ್ರಗತಿಗಾಗಿ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ಕಲಿಕಾ ಚೇತರಿಕೆ ‘ಚೇತರಿಕೆ’ ಕಾಣದೆ ಬಳಲಿದೆ. ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಯೋಜನೆ ರೂಪಿಸಿ ಸಿಎಂ ಅವರಿಂದಲೇ ಚಾಲನೆ ನೀಡಲಾಯಿತು. ಆದರೆ ಕಾರ್ಯಕ್ರಮ ಅನುಷ್ಠಾನಕ್ಕೆ ಪೂರಕ ಸಿದ್ಧತೆಗಳಿಲ್ಲದೇ ಇರುವುದರಿಂದ ಚೈತನ್ಯ ಕಳೆದುಕೊಳ್ಳುತ್ತಿರುವ ಆತಂಕ ಶೈಕ್ಷಣಿಕ ವಲಯದಲ್ಲಿ ಢಾಳಾಗಿ ಕಾಣುತ್ತಿದೆ.
ಕಲಿಕಾ ಚೇತರಿಕೆ ಆರಂಭಗೊಂಡು ಒಂದು ವಾರ ಕಳೆದರೂ ಶಿಕ್ಷಕರು ಮತ್ತು ಮಕ್ಕಳಿಗೆ ಕಲಿಕಾ/ಬೋಧನಾ ಸಾಮಗ್ರಿ ಪೂರೈಕೆ ಆಗಿಲ್ಲ. ಈ ಕಾರಣದಿಂದ ಕಲಿಕೆಯಲ್ಲಿ ಪ್ರಗತಿ ಕಾಣುತ್ತಿಲ್ಲ ಎಂಬುದು ಶಿಕ್ಷಕರ ಅಭಿಪ್ರಾಯ. ಕಲಿಕಾ ಚೇತರಿಕೆ ಅನುಷ್ಠಾನಕ್ಕೆಂದೇ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ವೇಳೆಯಲ್ಲೇ ಶಿಕ್ಷಕರಿಗೆ ಕೈಪಿಡಿ, ಮಕ್ಕಳ ಅಭ್ಯಾಸ ಪುಸ್ತಕಗಳನ್ನು ನೀಡಬೇಕಿತ್ತು. ತರಬೇತಿ ಇರಲಿ, ತರಗತಿ ಆರಂಭವಾಗಿ ವಾರ ಉರುಳಿದರೂ ಕಲಿಕಾ ಸಾಮಗ್ರಿ ಮಕ್ಕಳು/ಶಿಕ್ಷಕರ ಕೈ ಸೇರಿಲ್ಲ. ಮಕ್ಕಳ ಅಭ್ಯಾಸ ಹಾಳೆಗಳನ್ನು ಪಿಡಿಎಫ್ ಮಾಡಿ ವಾಟ್ಸ್ಆಪ್ನಲ್ಲಿ ಕಳಿಸಿದ್ದರೂ 1000-1800 ಪುಟ ಮುದ್ರಣ ಅಥವಾ ಜೆರಾಕ್ಸ್ ಪ್ರತಿ ತೆಗೆದುಕೊಳ್ಳುವುದು ಬಹುತೇಕ ಶಿಕ್ಷಕರಿಗೆ ಕಷ್ಟ ಸಾಧ್ಯವಾಗಿದೆ. ಅದೇ ರೀತಿ ಕಳೆದ ವರ್ಷ ಕರೊನಾ ಕಾಲದಲ್ಲಿ ಅಭ್ಯಾಸ ಹಾಳೆಗಳನ್ನು ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲೇ ಮುದ್ರಿಸಿಕೊಂಡದ್ದೂ ಉಂಟು. ಸ್ಥಳೀಯವಾಗಿ ಲಭ್ಯವಿರುವ ಅನುದಾನದಲ್ಲಿ ಈ ಖರ್ಚು ಭರಿಸಲು ಹೇಳಲಾಗಿದೆಯಾದರೂ ಅನೇಕ ಕಡೆ ಅನುದಾನ ಲಭ್ಯತೆ ಇಲ್ಲದೇ ಮುಖ್ಯ ಶಿಕ್ಷಕರು ಕೈಚೆಲ್ಲಿದ್ದಾರೆ. ಅಭ್ಯಾಸ ಪುಸ್ತಕ ಹಾಗೂ ಶಿಕ್ಷಕರ ಕೈಪಿಡಿಗಳನ್ನು ಮುದ್ರಿಸಿಕೊಡಲು ಬಿಇಒ, ಡಿಡಿಪಿಐಗಳಿಗೆ ಸೂಚಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.
ಮಳೆಬಿಲ್ಲು ಹಠಾತ್ ಹೇರಿಕೆ: ಮೇ 13 ರಂದು ಹಠಾತ್ ಸುತ್ತೋಲೆಯೊಂದನ್ನು ಹೊರಡಿಸಿ ಮಳೆಬಿಲ್ಲು ಕಾರ್ಯಕ್ರಮ ಜಾರಿಗೆ ಸೂಚಿಸಿದ್ದು ಏಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಕಲಿಕಾ ಚೇತರಿಕೆಗೆ ಸರ್ಕಾರದ ಹಂತದಲ್ಲಿ ಸಿದ್ಧತೆಗಳಾಗದಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂಬ ಮಾತೂ ಕೇಳಿಬರುತ್ತಿವೆ. ಮಳೆಬಿಲ್ಲು 14 ದಿನ ಇಡೀ ದಿನ ನಡೆಸುವ ಪಠ್ಯೇತರ ಚಟುವಟಿಕೆ. ಈ ಚಟುವಟಿಕೆ ಮಾಡಿಸಬೇಕೇ ಅಥವಾ ಕಲಿಕಾ ಚೇತರಿಕೆ ಮಾಡಬೇಕೆ ಎಂಬುದು ಜಟಿಲ ಸಮಸ್ಯೆಯಾಗಿ ಶಿಕ್ಷಕರನ್ನು ಕಾಡುತ್ತಿದೆ.
ಪ್ರತ್ಯೇಕ ಅನುದಾನ ನೀಡಿ: ಕಲಿಕಾ ಚೇತರಿಕೆಗಾಗಿ ಶಿಕ್ಷಕರು/ ಮಕ್ಕಳಿಗೆ ಬೋಧನ ಸಾಮಗ್ರಿ ಖರೀದಿ ಮತ್ತಿತರ ಖರ್ಚು-ವೆಚ್ಚಗಳಿಗಾಗಿ ಪ್ರತ್ಯೇಕ ಅನುದಾನ ನೀಡಬೇಕೆಂಬ ಬೇಡಿಕೆಯೂ ಶಿಕ್ಷಕರ ವಲಯದಿಂದ ಕೇಳಿಬರುತ್ತಿದೆ.
ಕೈಪಿಡಿ, ಅಭ್ಯಾಸ ಪುಸ್ತಕದ ಖರ್ಚೆಷ್ಟು?: ಶಿಕ್ಷಕರಿಗೆ 6 ಕೈಪಿಡಿ ತಲಾ 100 ಪುಟಗಳು. 30 ವಿದ್ಯಾರ್ಥಿಗಳಿಗೆ 6 ವಿಷಯಗಳಿಗೆ ತಲಾ 100 ಪುಟಗಳ ಅಭ್ಯಾಸ ಪುಸ್ತಕ ಲೆಕ್ಕ ಹಾಕಿದರೆ 18,000 ಪುಟಗಳು ಬೇಕಾಗುತ್ತವೆ. ಮಕ್ಕಳಿಗೆ ಅಭ್ಯಾಸ ಪತ್ರಿಕೆ ಇಲ್ಲದೇ ಪಾಠ ಬೋಧನೆ ಮಾಡಿದರೆ ಅಷ್ಟು ಪರಿಣಾಮಕಾರಿಯಾಗದು. 18,000 ಪುಟ ಪುಟ ಮುದ್ರಣ/ಜೆರಾಕ್ಸ್ಗೆ ಹಣದ ಸಮಸ್ಯೆ ಅನೇಕ ಕಡೆ ಎದುರಾಗುತ್ತದೆ. ಕರೊನಾ ಕಾಲದಲ್ಲಿ ಶಿಕ್ಷಕರು 10,000 ರೂ.ಗೂ ಹೆಚ್ಚು ಹಣವನ್ನು ಅಭ್ಯಾಸ ಪುಸ್ತಕ/ ಕೈಪಿಡಿಗೆ ಸ್ವಂತ ಹಣ ಖರ್ಚು ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಪದೇ ಪದೆ ಈ ರೀತಿಯ ಆರ್ಥಿಕ ಹೊರೆ ನಿರ್ವಹಿಸುವುದು ಕಷ್ಟ ಎಂಬುದು ಶಿಕ್ಷಕರ ಅಭಿಪ್ರಾಯ.
ಕಲಿಕಾ ಚೇತರಿಕೆಗಾಗಿ ಬೋಧನಾ ಸಾಮಗ್ರಿ ಒದಗಿಸದೇ ಇರುವುದರಿಂದ ಶಿಕ್ಷಕರಿಗೆ ಮಾನಸಿಕ ಒತ್ತಡ/ ಆರ್ಥಿಕ ಹೊರೆಯಾಗುತ್ತದೆ. ಸಕಾಲಕ್ಕೆ ಸರ್ಕಾರ ಬೋಧನಾ ಸಾಮಗ್ರಿ ಮತ್ತು ಪಠ್ಯ ಪುಸ್ತಕ ಪೂರೈಸಬೇಕು. ಕಲಿಕಾ ಚೇತರಿಕೆಗೆ ವಿಶೇಷ ಅನುದಾನ ನೀಡಬೇಕು. | ಅಶೋಕ ಸಜ್ಜನ ಅಧ್ಯಕ್ಷರು, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ನಿರ್ವಹಣಾ ಅನುದಾನಕ್ಕೆ ಬರ: ಶಾಲೆಗಳಿಗೆ ಪ್ರತಿ ವರ್ಷ ನೀಡುವ ಶಾಲಾ ಅನುದಾನ ಮತ್ತು ಶಾಲಾ ನಿರ್ವಹಣಾ ಅನುದಾನವೂ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಕಳೆದ ಎರಡು ವರ್ಷದಲ್ಲಿ 1 ಕಂತಿನ ಹಣ ಮಾತ್ರ ಬಂದಿದೆ. ಈ ಅನುದಾನ ಬಿಡುಗಡೆಯಾದರೆ ಸಮಸ್ಯೆ ತುಸು ಮಟ್ಟಿಗೆ ನೀಗುತ್ತದೆ ಎಂಬುದು ಶಿಕ್ಷಕರ ನಿಲುವು.
ಗೊಂದಲದ ಗೂಡು: ಶಿಕ್ಷಕರಿಗೆ ತರಬೇತಿ ಸಂದರ್ಭದಲ್ಲಿ ಹೇಳಿದ್ದೇ ಒಂದಾದರೆ, ಅಧಿಕಾರಿಗಳು ಸಂದರ್ಶನ ಸಂದರ್ಭದಲ್ಲಿ ನೀಡುವ ನಿರ್ದೇಶನ ಇನ್ನೊಂದಾಗಿದೆ. ತರಬೇತಿಯಲ್ಲಿ ಕಲಿಕಾ ಚೇತರಿಕೆ ಜಾರಿ ಮಾಡಲು ಹೇಳಿದರೆ, ಅನೇಕ ಕಡೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಸೇತಬಂಧವನ್ನೂ ಮಾಡುವಂತೆ ತಾಕೀತು ಮಾಡುತ್ತಿರುವುದು ಶಿಕ್ಷಕರಲ್ಲಿ ಗೊಂದಲ ತರಿಸಿದೆ.