

Chennai Techie: ಸಾಫ್ಟ್‌ವೇರ್ ಕಂಪನಿ ರಿಪ್ಲಿಂಗ್‌ನ ದೇಶಿ ಸಹ-ಸಂಸ್ಥಾಪಕರಾದ ಪ್ರಸನ್ನ ಶಂಕರ್ ಎಂಬ ವ್ಯಕ್ತಿ, ತನ್ನ ಪತ್ನಿ ಅನ್ಯ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಮೂಲಕ ತನಗೆ ಮೋಸ ಮಾಡಿದ್ದಾಳೆ ಎಂದು ಜಾಲತಾಣದಲ್ಲಿ ದೊಡ್ಡ ಬರಹದ ಮೂಲಕ ಸಾಕ್ಷಿಗಳನ್ನು ಮುಂದಿಟ್ಟು ಆರೋಪಿಸಿದ್ದಾರೆ. ಟೆಕ್ಕಿಯ ಈ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಅನೈತಿಕ ಸಂಬಂಧ ಹೊಂದಿದಲ್ಲದೇ ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ವಿರುದ್ಧವೇ ಅತ್ಯಾಚಾರ ಮತ್ತು ಮಗನನ್ನು ಅಪಹರಣದ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಶಂಕರ್ ದೂರಿದ್ದಾರೆ. ಈ ಕುರಿತು ಸುದೀರ್ಘವಾಗಿ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ನಲ್ಲಿ ಬರೆದುಕೊಂಡಿರುವ ಪ್ರಸನ್ನ ಶಂಕರ್, "2016ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ 10 ಬಿಲಿಯನ್ ಡಾಲರ್ ಕಂಪನಿಯನ್ನು ನಾನು ಸ್ಥಾಪಿಸಿದೆ. 2020ರವರೆಗೆ ಅದರ ಸಿಟಿಓ ಆಗಿ ಸೇವೆ ಸಲ್ಲಿಸಿದೆ. ಅದಾದ ನಂತರ, 2023ರಲ್ಲಿ, ಕ್ರಿಪ್ಟೋ ಉತ್ಸಾಹಿಗಳಿಗಾಗಿ 0xPPL ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸಿದೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತುತ ಭಾರತದಲ್ಲಿದ್ದೇನೆ" ಎಂದಿದ್ದಾರೆ.
ಹೆಂಡತಿಯ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದೇ ತಡ ಆಕೆ ನನ್ನ ವಿರುದ್ಧವೇ ಇದೀಗ ತಿರುಗಿ ಬಿದ್ದಿದ್ದಾಳೆ. ನಾನು ಅವಳ ಅನೈತಿಕ ಸಂಬಂಧ ಮತ್ತು ಇತರೆ ಮೋಸದ ಕೆಲಸಗಳನ್ನು ಬಯಲಿಗೆಳೆದು, ಆಕೆಯ ಅಸಲಿ ಬಣ್ಣವನ್ನು ಹೊರತಂದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಚೆನ್ನೈ ಪೊಲೀಸರ ಬಳಿ ದೂರು ಸಲ್ಲಿಸಿದ್ದಾಳೆ. ಪತ್ನಿ ದಿವ್ಯ ಶಶಿಧರ್ ಮತ್ತು ಆಕೆಯ ಪ್ರೇಮಿ ಅನೂಪ್ ಕುಟ್ಟಿಶಂಕರನ್ ಮಧ್ಯೆ ಬಹಳ ದಿನಗಳಿಂದ ಅನೈತಿಕ ಸಂಬಂಧವಿದೆ. ಇದಕ್ಕೆ ಸಾಕ್ಷಿಗಳು ದಿವ್ಯ ಮಾಡಿರುವ ಮೆಸೇಜ್ಗಳು. ಪುರಾವೆಯನ್ನು ಮುಂದಿಟ್ಟು ಮಾತನಾಡಬೇಕೆಂದು ಅದರ ಸ್ಕ್ರೀನ್‌ಶಾಟ್‌ಗಳನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದು ಹಂಚಿಕೊಂಡಿದ್ದಾರೆ.
ಪ್ರಸನ್ನ ಶಂಕರ್ ತಮ್ಮ ಸಂಪೂರ್ಣ ಕಥೆ-ವ್ಯಥೆಯನ್ನು ಬಹಿರಂಗಪಡಿಸಿದ ಟ್ವೀಟ್‌ಗಳ ಥ್ರೆಡ್ ಅನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ. “ನನ್ನ ಹೆಸರು ಪ್ರಸನ್ನ, ಈ ಹಿಂದೆ ರಿಪ್ಲಿಂಗ್ ಎಂಬ ಸಾಫ್ಟ್ಬವೇರ್ ಕಂಪನಿಯನ್ನು ನಾನು ಸ್ಥಾಪಿಸಿದ್ದೆ. 10 ಬಿಲಿಯನ್ ಡಾಲರ್ ಮೌಲ್ಯವಿರುವ ಸಂಸ್ಥೆಯದು. ಆಕೆಯಿಂದ ನಾನು ವಿಚ್ಛೇದನ ಪಡೆಯಲು ಮುಂದಾಗಿದ್ದೇನೆ. ಈಗ ತಮಿಳುನಾಡಿನ ಹೊರಗೆ ಚೆನ್ನೈ ಪೊಲೀಸರಿಂದ ತಪ್ಪಿಸಿಕೊಂಡಿದ್ದೇನೆ. ಇದು ನನ್ನ ನೋವಿನ ಕಥೆ" ಎಂದು ಶುರು ಮಾಡಿದ್ದಾರೆ.
"ನಾನು ಮತ್ತು ದಿವ್ಯ ಮದುವೆಯಾಗಿ ಇಂದಿಗೆ 10 ವರ್ಷಗಳಾಗಿವೆ. ನಮ್ಮಿಬ್ಬರಿಗೂ 9 ವರ್ಷದ ಮಗನಿದ್ದಾನೆ. ಅವಳು ಅನೂಪ್ ಎಂಬ ವ್ಯಕ್ತಿಯೊಂದಿಗೆ ಕಳೆದ 6 ತಿಂಗಳಿನಿಂದ ಸಂಬಂಧ ಹೊಂದಿದ್ದಾಳೆಂದು ನನಗೆ ಗೊತ್ತಾದ ಬೆನ್ನಲ್ಲೇ ನಮ್ಮ ದಾಂಪತ್ಯ ಸಂಬಂಧ ಮುರಿದುಬಿತ್ತು" ಎಂದಿದ್ದಾರೆ. ತಮ್ಮ ಹೇಳಿಕೆಯ ನಡುವೆ ಥ್ರೆಡ್‌ನಲ್ಲಿ, ದಿವ್ಯ ಮಾಡಿರುವ ಹೋಟೆಲ್ ಬುಕಿಂಗ್‌ನ ಸ್ಕ್ರೀನ್‌ಶಾಟ್‌ಗಳು ಮತ್ತು ಅನೂಪ್ ಜತೆಗಿನ ಸಂಭಾಷಣೆಯನ್ನು ಶಂಕರ್ ಹಂಚಿಕೊಂಡಿದ್ದಾರೆ. ಇದರ ಮಧ್ಯೆ ತನಗೆ ಎಕ್ಸ್ಎಲ್ ಸೈಜ್ನ ಕಾಂಡೊಮ್ ತೆಗೆದುಕೊಂಡು, ನಾನೇಳಿದ ಸ್ಥಳಕ್ಕೆ ಬಾ ಎಂದು ಕಳಿಸಿರುವ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ನೆಟ್ಟಿಗರನ್ನು ಅಕ್ಷರಶಃ ಕೆರಳಿಸಿದೆ.
"ಈ ವಿಷಯ ನನಗೆ ಗೊತ್ತಾದ ಬಳಿಕ ಅನೂಪ್ ಅವರ ಪತ್ನಿ ನನ್ನ ಹೆಂಡತಿ ಮತ್ತು ಅನೂಪ್ ನಡುವಿನ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ನನಗೆ ಕಳುಹಿಸಿದರು. ಇದೆಲ್ಲ ತಿಳಿಯುತ್ತಿದ್ದಂತೆ ನಾವಿಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿದೆವು. ಆ ಕುರಿತು ಜೀವನಾಂಶವಾಗಿ ನಾನೆಷ್ಟು ಹಣ ಕೊಡಬೇಕು ಎಂಬುದನ್ನು ಆಕೆಗೆ ತಿಳಿಸಿದ್ದೆ. ಇದಕ್ಕೆ ತಕರಾರು ತೆಗೆದ ದಿವ್ಯ, ನಾನು ಅವಳನ್ನು ಹೊಡೆದಿದ್ದೇನೆ ಎಂದು ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ನಕಲಿ ದೂರು ದಾಖಲಿಸಿದ್ದಾಳೆ. ಪ್ರಸ್ತುತ ಚೆನ್ನೈ ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ. ಅವರೂ ಸಹ ನನ್ನ ಬಳಿ ಹೆಚ್ಚುವರಿ ಹಣವಿದೆ ಎಂಬ ಕಾರಣಕ್ಕೆ 25 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ" ಎಂದು ಶಂಕರ್ ಹೇಳಿದ್ದಾರೆ.
"ಇದರೊಟ್ಟಿಗೆ ನಾನು ಅವಳ ಮೇಲೆ ಅತ್ಯಾಚಾರ ಮಾಡಿದ್ದೇನೆ ಎಂದು ಮತ್ತಷ್ಟು ಸುಳ್ಳು ದೂರುಗಳನ್ನು ನೀಡಿದ್ದಾಳೆ. ನಾನು ಅವಳ ನಗ್ನ ವೀಡಿಯೊಗಳನ್ನು ಪ್ರಸಾರ ಮಾಡಿದೆ. ಇತ್ಯಾದಿ ಎಂದು ಈ ಹಿಂದೆ ಸಿಂಗಾಪುರದಲ್ಲಿ ದೂರು ಕೊಟ್ಟಿದ್ದಳು. ಪೊಲೀಸರು ಈ ಆರೋಪಗಳನ್ನು ತನಿಖೆ ಮಾಡಿದರು. ತನಿಖೆಯ ಬಳಿಕ ಅವುಗಳು ಆಧಾರರಹಿತವೆಂದು ಕಂಡುಕೊಂಡ ನಂತರವೇ ನನ್ನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದರು" ಎಂದು ಶಂಕರ್ ಬರೆದಿದ್ದಾರೆ. ಸದ್ಯ ಶಂಕರ್ ಟ್ವೀಟ್ ವೈರಲ್ ಆಗಿದ್ದೇ ತಡ ದಿವ್ಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೊದಲು ಜೀವನಾಂಶ ಕೇಳುವ ಕಾನೂನು ರದ್ದುಗೊಳಿಸಬೇಕು ಎಂಬ ಕೂಗಗಳು ಕೇಳಿಬಂದಿವೆ,(ಏಜೆನ್ಸೀಸ್).